Site icon Vistara News

Water on Mars: ಮಂಗಳದಲ್ಲಿ ನೀರಿತ್ತು: ಕ್ಯೂರಿಯಾಸಿಟಿ ನೀಡಿತು ಸರೋವರದ ಅಲೆಗಳ ಹೊಸ ಪುರಾವೆ

water on mars nasa

ನ್ಯೂಯಾರ್ಕ್:‌ ಮಂಗಳ ಗ್ರಹದ ಒಂದು ಪ್ರದೇಶದಲ್ಲಿ ಪ್ರಾಚೀನ ಸರೋವರ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಹೊಸ ಪುರಾವೆಗಳನ್ನು ಕಂಡುಹಿಡಿಯಲಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ಇದನ್ನು ಕಂಡುಹಿಡಿದಿದೆ.

ಮೊದಲು ಮಂಗಳ ಗ್ರಹ ಶುಷ್ಕ ಎಂದು ನಂಬಲಾಗಿತ್ತು. ಆದರೆ ಇದನ್ನು ತಳ್ಳಿಹಾಕುವ ಪುರಾವೆಗಳನ್ನು ಕ್ಯೂರಿಯಾಸಿಟಿ ರೋವರ್‌ ಕಂಡುಹಿಡಿಯುತ್ತಿದೆ. ʼಸಲ್ಫೇಟ್-ಬೇರಿಂಗ್ ಯುನಿಟ್’ ಎಂದು ಕರೆಯಲಾಗುವ ಮಂಗಳಗ್ರಹದ ಒಂದು ಪ್ರದೇಶದ ಮೂಲಕ ಹಾದುಹೋಗುವಾಗ, ಪ್ರಾಚೀನ ಕಾಲದಲ್ಲಿ ಇಲ್ಲಿ ನೀರಿತ್ತು ಎಂಬುದರ ಸ್ಪಷ್ಟ ಸಾಕ್ಷ್ಯಗಳನ್ನು ಕ್ಯೂರಿಯಾಸಿಟಿ ಕಂಡುಕೊಂಡಿದೆ.

ಕೆಂಪು ಗ್ರಹವೆನಿಸಿಕೊಂಡಿರುವ ಮಂಗಳದ ಮೇಲ್ಮೈ ಒಣಗುತ್ತಿರುವುದರಿಂದ ಅಲ್ಲಿನ ಬಂಡೆಗಳು ರೂಪುಗೊಂಡಿವೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ನೀರು ಹರಿದ ಗುರುತುಗಳನ್ನು ಕ್ಯೂರಿಯಾಸಿಟಿ ದಾಖಲಿಸಿದೆ.

ಕ್ಯೂರಿಯಾಸಿಟಿ ರೋವರ್‌ ಈ ಬಗ್ಗೆ ಟ್ವೀಟ್‌ಗಳನ್ನು ಮಾಡಿದೆ. ʼʼನಾನು ಮೌಂಟ್ ಶಾರ್ಪ್ ಅನ್ನು ಏರಿದೆ. ಪ್ರಸ್ತುತ ನಾನು “ಮಾರ್ಕರ್ ಬ್ಯಾಂಡ್”ನಲ್ಲಿದ್ದೇನೆ. ಭೂಕುಸಿತದಂಥ ಪ್ರದೇಶವನ್ನು ನೋಡುತ್ತಿದ್ದೇನೆ. ಹಾಗಾಗಿ ಅದು ಇತ್ತೀಚಿನ ಸಾಕ್ಷ್ಯವೆನಿಸುತ್ತದೆʼʼ ಎಂದು ಒಂದು ಟ್ವೀಟ್‌ನಲ್ಲಿದೆ. ಇನ್ನೊಂದು ಟ್ವೀಟ್‌ನಲ್ಲಿ, ʼʼನಾನು ಸರೋವರದ ದಡದಲ್ಲಿದ್ದೇನೆ. ನನ್ನ ಸುತ್ತಲೂ ಅಲೆಗಳಿವೆ. ಬಹುಶಃ ಶತಕೋಟಿ ವರ್ಷಗಳ ಹಿಂದಿನವು. ಇದು ಜೋಕ್‌, ಹಾಗಿರಲಿ. ಆದರೆ ನೀರಿನ ಅಲೆಗಳಿಂದ ಉಂಟಾಗಿರಬಹುದಾದ ರಚನೆಗಳನ್ನು ಇಲ್ಲಿ ಗಮನಿಸುತ್ತಿದ್ದೇನೆʼʼ ಎಂದು ಚಿತ್ರವನ್ನು ಟ್ವೀಟ್‌ ಮಾಡಿದೆ.

ʼʼಇಡೀ ಕಾರ್ಯಾಚರಣೆಯಲ್ಲಿ ಇದು ನಾವು ನೋಡಿರುವ ನೀರಿನ ಇರುವಿಕೆಯ ಅತ್ಯುತ್ತಮ ಪುರಾವೆ. ನಾವು ಸಾವಿರಾರು ಸರೋವರದ ನಿಕ್ಷೇಪಗಳ ಮೂಲಕ ಹುಡುಕಾಡಿದ್ದರೂ ಇಷ್ಟು ಸ್ಪಷ್ಟವಾದ ಪುರಾವೆಗಳನ್ನು ಪಡೆದಿಲ್ಲ. ಇದೀಗ ಶುಷ್ಕವೆಂದು ಭಾವಿಸಿದ ಸ್ಥಳದಲ್ಲಿ ಅದನ್ನು ಕಂಡುಕೊಂಡಿದ್ದೇವೆʼʼ ಎಂದು ನಾಸಾದ ಕ್ಯೂರಿಯಾಸಿಟಿ ರೋವರ್‌ನ ಪ್ರಾಜೆಕ್ಟ್ ವಿಜ್ಞಾನಿ ಅಶ್ವಿನ್ ವಾಸವಾಡ ಅವರು ಹೇಳಿದ್ದಾರೆ.

ಇದನ್ನೂ ಓದಿ: Viral News: ನೀರಿನಂತೆಯೇ ಇರುವ ಮಂಜುಗಡ್ಡೆಯನ್ನು ತಯಾರಿಸಿದ ವಿಜ್ಞಾನಿಗಳು!

ಶತಕೋಟಿ ವರ್ಷಗಳ ಹಿಂದೆ, ಆಳವಿಲ್ಲದ ಈ ಸರೋವರದ ಮೇಲ್ಮೈಯ ಅಲೆಗಳು ಸರೋವರದ ಕೆಳಭಾಗದಲ್ಲಿ ಕೆಸರನ್ನು ಉಳಿಸಿ, ಕಾಲಾನಂತರದಲ್ಲಿ ಬಂಡೆಯಲ್ಲಿ ಉಳಿದಿರುವ ಅಲೆಗಳ ರಚನೆಗಳನ್ನು ಸೃಷ್ಟಿಸಿವೆ ಎಂದು ನಾಸಾ ಹೇಳಿದೆ.

ಮೌಂಟ್ ಶಾರ್ಪ್‌ನ ತಳದಿಂದ ಸುಮಾರು ಅರ್ಧ ಮೈಲಿ ಹತ್ತಿದ ನಂತರ, ರೋವರ್ ಈ ಅಲೆಗಳ ಕಲ್ಲಿನ ರಚನೆಗಳನ್ನು ಕಂಡುಹಿಡಿದಿದೆ. ʼಮಾರ್ಕರ್ ಬ್ಯಾಂಡ್’ ಎಂದು ಇದನ್ನು ಕರೆಯಲಾಗಿದೆ. ಇದು ಇತ್ತೀಚೆಗೆ ರಚನೆಯಾದುದು. ಕ್ಯೂರಿಯಾಸಿಟಿಯು ಕೆಲವು ಬಂಡೆಗಳ ಮಾದರಿಗಳನ್ನು ಪಡೆಯಲು ಪ್ರಯತ್ನಿಸಿದೆ. ಆದರೆ ಅದು ರೋವರ್‌ನ ಡ್ರಿಲ್‌ನಿಂದ ತೆಗೆಯಲಾಗದಷ್ಟು ಕಠಿಣವಾಗಿದ್ದವು.

2014ರಿಂದ ಕ್ಯೂರಿಯಾಸಿಟಿ ರೋವರ್ ಮೌಂಟ್ ಶಾರ್ಪ್‌ನ ತಪ್ಪಲಿನಲ್ಲಿ ಏರುತ್ತಿದೆ. ಇದು ಸುಮಾರು 5 ಕಿಲೋಮೀಟರ್ ಎತ್ತರದ ಪರ್ವತ. ಹಿಂದೊಮ್ಮೆ ಇಲ್ಲಿ ಸರೋವರಗಳು, ಹೊಳೆಗಳು, ಸೂಕ್ಷ್ಮಜೀವಿಗಳ ಜೀವನಕ್ಕೆ ಅನುಕೂಲವಾದ ವಾತಾವರಣವನ್ನು ಹೊಂದಿತ್ತು ಎಂದು ಭಾವಿಸಲಾಗಿದೆ.

ಇದನ್ನೂ ಓದಿ: Sun Breaks off: ಸೂರ್ಯನಿಂದ ಕಳಚಿದ ಬಹುದೊಡ್ಡ ಭಾಗ, ವಿಜ್ಞಾನಿಗಳಿಗೆ ದಿಗ್ಭ್ರಮೆ

Exit mobile version