Site icon Vistara News

Whatsaap| ಇನ್ನು ಆನ್‌ಲೈನಲ್ಲಿದ್ದರೂ ಅಡಗಿ ಕೂತ್ಕೊಬಹುದು, ಮೆಲ್ಲಗೆ ಗ್ರೂಪಿಂದ EXIT ಆಗಬಹುದು!

whatsapp

ನವದೆಹಲಿ: ನೀವೀಗ ವ್ಯಾಟ್ಸ್‌ಆ್ಯಪ್‌ ಆನ್‌ಲೈನ್‌ನಲ್ಲಿ ಇದ್ದೀರಿ ಎಂದಿಟ್ಟುಕೊಳ್ಳಿ. ಆಗ ಯಾರಾದರೂ ಚಾಟಿಂಗ್‌ಗೆ ಬರ್ತಾರೆ. ಅಥವಾ ಫ್ರೀಯಾಗಿದ್ದೀರೇನೋ ಅಂತ ಕಾಲ್‌ ಮಾಡ್ತಾರೆ. ಅಥವಾ ಪ್ರೇಮಿಗಳಾಗಿದ್ದರೆ ಆನ್‌ಲೈನಲ್ಲಿ ಇದ್ದರೂ ನನ್ನ ಮೆಸೇಜ್‌ ನೋಡಿಲ್ಲ ಅಂತೆಲ್ಲ ಜಗಳ ತೆಗೀತಾರೆ. ಆವಾಗೆಲ್ಲ ಆನ್‌ಲೈನಲ್ಲಿ ಇರೋದು ಬೇರೆಯವರಿಗೆ ಕಾಣದೆ ಇದ್ದರೆ ಎಷ್ಟು ಚೆನ್ನಾಗಿತ್ತಲ್ಲ ಅಂತ ಅನಿಸದೆ ಇರುವುದಿಲ್ಲ. ನಿಮಗೂ ಹಾಗೆ ಅನಿಸಿರುತ್ತದೆ ಅಲ್ವಾ?

ಇನ್ನೊಂದು ಸಂಗತಿ ಎಂದರೆ ಯಾರೋ ಕಂಡಕಂಡವರು ಗ್ರೂಪ್‌ಗಳಿಗೆ ಸೇರಿಸಿರ್ತಾರೆ. ನಮಗೆ ಅದರಿಂದ ಹೊರಗೆ ಬರೋದು ತುಂಬ ಕಷ್ಟ. ಅದರಲ್ಲೂ ಕೆಲವು ಫ್ಯಾಮಿಲಿ ಗ್ರೂಪ್‌ಗಳಿಂದ ಹೊರಗೆ ಹೋದರೆ ಏನಾದೀತೋ ಅಂತ ಭಯ ಆಗುತ್ತದೆ. ಯಾಕೆಂದರೆ, ಅಲ್ಲಿ ಇಂಥವರು ಗ್ರೂಪ್‌ ತೊರೆದಿದ್ದಾರೆ ಅಂತ ಬರುತ್ತದೆ. ಆಗೆಲ್ಲ ಯಾಕೆ ಎಕ್ಸಿಟ್‌ ಆದರು ಅಂತೆಲ್ಲ ದೊಡ್ಡ ಚರ್ಚೆಯೇ ನಡೆಯುತ್ತದೆ. ಆಗೆಲ್ಲ ಅನಿಸ್ತದೆ.. ಈ ಗ್ರೂಪ್‌ನಿಂದ EXIT ಆಗೋ ಆಪರೇಷನ್‌ ಯಾರಿಗೂ ಗೊತ್ತಾಗದಂತೆ ಇದ್ದರೆ ಎಷ್ಟು ಒಳ್ಳೆದಿತ್ತು ಅಲ್ವಾ? ಅಂತ.

ಈಗ ವ್ಯಾಟ್ಸ್‌ಆ್ಯಪ್‌ ನಮ್ಮ ಕೋರಿಕೆಯನ್ನು ಕೇಳಿಸಿಕೊಂಡಂತಿದೆ. ಮೇಲೆ ಹೇಳಿದ ಎರಡೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಮುಂದಿನ ಕೆಲವೇ ದಿನಗಳಲ್ಲಿ ಹೊಸ ಆಪ್ಶನ್‌ಗಳು ಸಿಗುತ್ತವೆ. ಇನ್ನು ನೀವು ಬೇರೆಯವರಿಗೆ ಗೊತ್ತಾಗದಂತೆ ಆನ್‌ಲೈನ್‌ನಲ್ಲಿ ಇರಬಹುದು. ಯಾರಿಗೂ ಗೊತ್ತಾಗದಂತೆ ಸೈಲೆಂಟಾಗಿ ಗ್ರೂಪಿಂದ ಹೊರಗೆ ಹೋಗಬಹುದು!

ಹೌದು, ಜನಪ್ರಿಯ ಸಾಮಾಜಿಕ ಮಾಧ್ಯಮ ವ್ಯಾಟ್ಸ್‌ಆ್ಯಪ್‌ ಕೆಲವು ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ಆನ್‌ಲೈನ್‌ನಲ್ಲೂ ಆಫ್‌ ಲೈನ್‌
ಬಳಕೆದಾರರು ತಮ್ಮ ಸ್ಟೇಟಸ್‌ ಮರೆಮಾಚುವ ಆಯ್ಕೆಯನ್ನು ವ್ಯಾಟ್ಸ್‌ಆಪ್‌ ಹಿಂದೆಯೇ ನೀಡಿತ್ತು. ಆದರೆ ವ್ಯಕ್ತಿಯೊಬ್ಬ ವ್ಯಾಟ್ಸ್‌ಆಪ್‌ನಲ್ಲಿ ಏನನ್ನೋ ನೋಡುತ್ತಿರುವಾಗ, ಉಳಿದ ಬಳಕೆದಾರರಿಗೆ ಆತ ʻಆನ್‌ಲೈನ್‌ʼ ಎಂದು ಹರಟೆ ಕಿಟಕಿಯ ಮೇಲೆ ಕಾಣುವುದು ಸಾಮಾನ್ಯವಾಗಿತ್ತು. ಆದರೀಗ ಅದನ್ನೂ ಅವಿತಿಡುವ ಆಯ್ಕೆ ಬಳಕೆದಾರರಿಗೆ ಲಭ್ಯವಿದೆ. ಅಂದರೆ, ವ್ಯಾಟ್ಸ್‌ಆಪ್‌ನಲ್ಲೇ ಏನನ್ನೋ ಮಾಡುತ್ತಿದ್ದರೂ, ಆತ ʻಆನ್‌ಲೈನ್‌ʼ ಇದ್ದಾರೆಂಬುದನ್ನು ಬಹಿರಂಗಗೊಳಿಸುವ ಅಗತ್ಯವಿಲ್ಲ.

ಸ್ಕ್ರೀನ್‌ ಶಾಟ್‌ ನಿರ್ಬಂಧ
ಒಂದೇ ಬಾರಿ ನೋಡಬಹುದಾದಂಥ ಸಂದೇಶಗಳ ಸ್ಕ್ರೀನ್‌ ಶಾಟ್‌ ತೆಗೆಯುವುದನ್ನು ನಿರ್ಬಂಧಿಸಲಾಗಿದೆ. ಒಮ್ಮೆ ಆ ಸಂದೇಶ ನೋಡಿದ ಮೇಲೆ ಮತ್ತದು ಹೇಗೂ ಲಭ್ಯವಾಗುವುದಿಲ್ಲ.

ಯಾವಾಗ ಬರುತ್ತದೆ?
ಖಾಸಗಿತನಕ್ಕೆ ಅನುಕೂಲವಾದ ಈ ಆಪ್ಶನ್‌ಗಳು ಇನ್ನೊಂದು ತಿಂಗಳಿನಲ್ಲಿ ಎಲ್ಲಾ ಬಳಕೆದಾರರಿಗೂ ಈ ಸೌಲಭ್ಯ ಒದಗಲಿದೆ ಎಂದು ವ್ಯಾಟ್ಸ್‌ಆಪ್‌ ಸಂಸ್ಥೆ ತಿಳಿಸಿದೆ. ಈ ಬದಲಾವಣೆಯನ್ನೂ ಸುಲಭಕ್ಕೆ ಮಾಡಿಕೊಳ್ಳಬಹುದು.

ಬಳಕೆದಾರರು ಏನು ಮಾಡಬೇಕು?
ವ್ಯಾಟ್ಸ್‌ಆ್ಯಪ್‌ ತೆರೆದು, ಸೆಟ್ಟಿಂಗ್ಸ್‌-ಅಕೌಂಟ್-ಪ್ರೈವೆಸಿ- ಈ ಆಯ್ಕೆಯಲ್ಲಿ ಹೊಸ ಬದಲಾವಣೆ ಲಭ್ಯವಾಗಲಿದೆ. SETTINGS>ACCOUNT>PRIVACY>ಗೆ ಹೋದರೆ ಅಲ್ಲಿ LAST SEEN AND ONLINE ಆಯ್ಕೆ ಕಾಣಿಸುತ್ತದೆ. ಅಲ್ಲಿ ಯಾರೆಲ್ಲ ನೋಡಬಹುದು ಎನ್ನುವುದಕ್ಕೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. EVERYONE, MY CONTACTS, MY CONTACTS EXCEPT ಮತ್ತು NOBODY. ಇದರಲ್ಲಿ ನಾವು ಯಾವ ಆಯ್ಕೆಯನ್ನು ಬೇಕಾದರೂ ಮಾಡಿಕೊಳ್ಳಬಹುದು.
ಇದನ್ನೂ ಓದಿ | WhatsAppನಲ್ಲಿ ಹೊಸ ಫೀಚರ್‌:‌ ಸ್ಟೇಟಸ್‌, ಫೋಟೊ ಬೇಕಾದವರು ಮಾತ್ರ ನೋಡುವಂತೆ ಮಾಡಬಹುದು!

Exit mobile version