ನವದೆಹಲಿ: ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಫೀಚರ್ (WhatsApp New Feature) ಲಾಂಚ್ ಮಾಡುತ್ತಿದ್ದು, ಬಳಕೆದಾರರ ನಂಬರ್ (Phone Number) ಬದಲಿಗೆ ಯೂಸರ್ ನೇಮ್‌ಗೆ (Username) ಅವಕಾಶ ಕಲ್ಪಿಸಲಾಗುತ್ತದೆ. ಗೂಗಲ್ ಪ್ಲೇ ಬೀಟಾ ಪ್ರೋಗ್ರಾಮ್ ಮೂಲಕ ಈ ಹೊಸ ಅಪ್‌ಡೇಟ್ ಮಾಡಲಿದೆ ಕಂಪನಿಯು. ಸದ್ಯಕ್ಕೆ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ.
ವಾಟ್ಸಾಪ್ ಅಭಿವೃದ್ಧಿಪಡಿಸುತ್ತಿರುವ ಹೊಸ ಫೀಚರ್‌ಗಳ ಬಗ್ಗೆ ನಾವು ಕಳೆದು ತಿಂಗಳ ಸಾಕಷ್ಟು ವರದಿ ಮಾಡಿದ್ದೇವೆ. ಈ ಎಲ್ಲ ಫೀಚರ್‌ಗಳು ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸುವ ಬದ್ಧತೆಯನ್ನು ಹೊಂದಿವೆ ಎಂಬುದನ್ನು ನಾವು ದೃಢೀಕರಿಸುತ್ತೇವೆ. ಆದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇತ್ತೀಚಿನ ಆಂಡ್ರಾಯ್ಡ್ 2.23.11.15 ಅಪ್‌ಡೇಟ್ ಮಾಡಿದಾಗ, ತುಂಬ ಭಿನ್ನವಾದ ವೈಶಿಷ್ಟ್ಯವನ್ನು ನಾವು ಗುರುತಿಸಿದ್ದೇವೆ ಎಂದು ವಾಟ್ಸಾಪ್ ಬೆಳವಣಿಗೆಗಳ ಮೇಲೆ ನಿಗಾ ಇಡುವ WABetaInfo ತನ್ನ ಪುಟದಲ್ಲಿ ಬರೆದುಕೊಂಡಿದೆ.
ಸರಳವಾಗಿ ಹೇಳಬೇಕು ಎಂದರೆ, ವಾಟ್ಸಾಪ್ ಯೂಸರ್ ನೇಮ್ ಫೀಚರ್(username feature) ಕುರಿತು ಕೆಲಸ ಮಾಡುತ್ತಿದೆ. ತಮ್ಮ ಕಾಂಟಾಕ್ಟ್‌ಗಳಿಗಾಗಿ ಬಳಕೆದಾರರು ತಮಗೆ ಬೇಕಾದ ವಿಶಿಷ್ಟ ಯೂಸರ್‌ನೇಮ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಫೀಚರ್ ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ:WhatsApp New Feature: ವಾಟ್ಸಾಪ್ ಬಳಕೆದಾರರಿಗೆ ಖುಷಿಯ ಸುದ್ದಿ, ನೀವಿನ್ನು ಮೆಸೇಜ್ ಎಡಿಟ್ ಮಾಡಬಹುದು!
WABetaInfo ಷೇರ್ ಮಾಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಈ ಫೀಚರ್ ವಾಟ್ಸಾಪ್‌ನ ಸೆಟ್ಟಿಂಗ್ಸ್‌ನ ಪ್ರೊಫೈಲ್‌ನಲ್ಲಿ ಪ್ಲೇಸ್ ಮಾಡುವ ಸಾಧ್ಯತೆ ಇದೆ. ಬಳಕೆದಾರರ ಹೆಸರನ್ನು ಆಯ್ಕೆ ಮಾಡುವ ಸಾಮರ್ಥ್ಯದೊಂದಿಗೆ, ವಾಟ್ಸಾಪ್ ಬಳಕೆದಾರರು ತಮ್ಮ ಖಾತೆಗಳಿಗೆ ಗೌಪ್ಯತೆಯ ಮತ್ತೊಂದು ಪದರವನ್ನು ಸೇರಿಸಲು ಅವಕಾಶವನ್ನು ಹೊಂದಿರುತ್ತಾರೆ.
ವಾಟ್ಸಾಪ್ ಲಿಂಕ್ಸ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಸುರಕ್ಷತೆಗೆ ಹೀಗೆ ಮಾಡಿ…
ವಾಟ್ಸಾಪ್‌ಗೆ ಬಂದ ಲಿಂಕ್ (WhatsApp Links Scam) ಮೇಲೆ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬ 22 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗೋಮತಿನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. ವಾಟ್ಸಾಪ್‌ನಲ್ಲಿ ಸಿಂಪಲ್ ಕೆಲಸ ಮಾಡುವುದರ ಮೂಲಕ ಹಣ ಗಳಿಸುವ ಆಮಿಷವನ್ನು ವಾಟ್ಸಾಪ್ ಮೂಲಕವೇ ಒಡ್ಡಲಾಗಿತ್ತು. ಲಿಂಕ್‌ಗಳನ್ನು ಮತ್ತು ವೆಬ್‌ಸೈಟ್‌ಗಳನ್ನು ಲೈಕ್ ಮಾಡುವ ಉದ್ಯೋಗದ ಆಮಿಷ ನೀಡಲಾಗಿತ್ತು. ಸಂತ್ರಸ್ತ ವ್ಯಕ್ತಿ ಈ ಆಫರ್ ನಿಜವೆಂದು ಭಾವಿಸಿದ್ದ. ಆರಂಭದಲ್ಲಿ ಸಂಬಳವಾಗಿ 48,450 ರೂ. ನೀಡಿದ್ದರು. ಬಳಿಕ ವಂಚನೆಗಾರರು, ಇನ್ನೂ ಹೆಚ್ಚಿನ ಹಣ ಗಳಿಸಲು 4.84 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಹೀಗೆ ಆತನಿಂದ 22 ಲಕ್ಷದವರೆಗೂ ಹಣ ಕಿತ್ತಿದ್ದಾರೆ. ಬಳಿಕ, ಸಂತ್ರಸ್ತ ವ್ಯಕ್ತಿಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾರೆ. ಆಗ ಆತನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಗುರುಗಾಂವದಲ್ಲೂ ವ್ಯಕ್ತಿಯೊಬ್ಬ ಇಂಥದ್ದೇ ಜಾಲಕ್ಕೆ ಒಳಗಾಗಿ 45 ಲಕ್ಷ ರೂ. ಕಳೆದುಕೊಂಡಿದ್ದಾನೆ. ಈ ರೀತಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ(Cyber Fraud).
ಈ ವಾಟ್ಸಾಪ್ ಲಿಂಕ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾದ ಅಗತ್ಯವಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುಂಚೆ ಅದರ ಅಸಲಿಯತ್ತು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುವುದು ತಪ್ಪಲ್ಲ. ಸೈಬರ್ ವಂಚನೆ ಮತ್ತು ವಾಟ್ಸಾಪ್ ವಂಚನೆಯಿಂದ ತಪ್ಪಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಿದ್ದೇವೆ. ಓದಿ.
ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ. ವಾಟ್ಸಾಪ್ ಸ್ಕ್ಯಾಮ್ ಅಥವಾ ಯಾವುದೇ ರೀತಿಯ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕಿದ್ದರೆ, ಬಳಕೆದಾರರು ಎಚ್ಚರವಹಿಸಬೇಕಾದ ಮಹತ್ವದ ಸಂಗತಿ ಇದು. ಯಾವುದೇ ಕಾರಣಕ್ಕೂ ಅನುಮಾನಾಸ್ಪದ ಹಾಗೂ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬಾರದು. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುಂಚೆ ಅದರ ಸಾಚಾತನ ತಿಳಿಯುವುದು ಅತ್ಯಗತ್ಯ. ಚೂರೇ ಚೂರು ಅನುಮಾನ ಬಂದರೂ ಕ್ಲಿಕ್ ಮಾಡಲು ಹೋಗಬಾರದು.
ಸೈಬರ್ ವಂಚನೆ ತಡೆಯಲು ಎರಡು ಹಂತದ ದೃಢೀಕರಣ ಅಗತ್ಯವಾಗಿ ಬೇಕು. ವಾಟ್ಸಾಪ್ ಲಿಂಕ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಬೇಕಿದ್ದರೆ, ವಾಟ್ಸಾಪ್‌ನ ಟು ಸ್ಟೆಪ್ಸ್ ವೆರಿಫೀಕೆಷನ್(ಎರಡು ಹಂತದ ದೃಢೀಕರಣ) ಫೀಚರ್ ಆನ್ ಮಾಡಿ. ಇದರಿಂದಾಗಿ, ನಿಮ್ಮ ಖಾತೆಯ ದೃಢೀಕರಣಕ್ಕೆ 6 ಅಂಕಿಗಳ ಪಿನ್ ನೀಡಬೇಕಾಗುತ್ತದೆ. ಇದರಿಂದ ನಿಮ್ಮನ್ನು ಫಿಶಿಂಗ್ ಅಟಾಕ್ಸ್ ಮತ್ತು ಸೈಬರ್ ವಂಚನೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.
ಬ್ಲಾಕ್ ಮಾಡುವುದು ಮತ್ತು ರಿಪೋರ್ಟ್ ಮಾಡುವುದು ಕೂಡ ಉತ್ತಮ ಸುರಕ್ಷತೆಯ ನಡೆಯಾಗಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಅಪರಿಚಿತ ಮತ್ತು ಅನುಮಾನಾಸ್ಪದ ಕರೆಗಳ ಕುರಿತು ರಿಪೋರ್ಟ್ ಮಾಡಬೇಕು. ಅಲ್ಲದೇ ಬ್ಲಾಕ್ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ನಡೆಯಾಗುತ್ತದೆ. ಒಂದು ವೇಳೆ, ಯಾವುದೇ ಕಂಪನಿಯು ಹೆಸರಿನಲ್ಲಿ ಉದ್ಯೋಗ ಆಫರ್ ಮಾಡುವ ಸಂದೇಶಗಳಿದ್ದರೆ, ಮೂಲ ಕಂಪನಿಗಳ ಜತೆ ಮಾತುಕತೆ ನಡೆಸಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.
ಪ್ರೈವಸಿ ಸೆಟ್ಟಿಂಗ್ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ವಾಟ್ಸಾಪ್ ಗ್ರೂಪ್ ಪ್ರೈವಸಿ ಸೆಟ್ಟಿಂಗ್ಸ್ ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ರೊಫೈಲ್ ಫೋಟೋ ಮತ್ತು ಆನ್‌ಲೈನ್ ಸ್ಟೇಟಸ್ ಯಾರು ನೋಡಬಹುದು ಎಂಬುದರ ಕುರಿತು ನೀವು ಪ್ರೈವಸಿ ಸೆಟ್ಟಿಂಗ್ ಮಾಡಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ನಂಬಬಹುದಾದ ಜನರೊಂದಿಗೆ ಮಾತ್ರ ಹಂಚಿಕೊಳ್ಳುವುದು ಉತ್ತಮ.
ವಾಟ್ಸಾಪ್ ಲಿಂಕ್ಡ್ ಡಿವೈಸ್ಡ್‌ಗಳನ್ನು ಚೆಕ್ ಮಾಡಿಕೊಳ್ಳಿ. ಯಾವುದಾದರೂ ಅನುಮಾನಾಸ್ಪದ ಡಿವೈಸ್ ಲಾಗಿನ್ ಆಗಿದ್ದರೂ ಕೂಡಲೇ ಲಾಗ್ ಔಟ್ ಮಾಡಿ. ಇದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದಾಗಿದೆ.
ತಂತ್ರಜ್ಞಾನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.