Site icon Vistara News

Mira Murati: 34 ವರ್ಷದ ಹಾಲ್ಗೆನ್ನೆ ಚೆಲುವೆ ಮೀರಾ ಮುರತಿ ಈಗ ಓಪನ್‌ಎಐ ಸಿಇಒ; ಯಾರಿವರು?

Mira Murati

Who is Mira Murati, the 34-year-old appointed interim CEO of OpenAI?

ವಾಷಿಂಗ್ಟನ್‌: ಜಗತ್ತಿನಾದ್ಯಂತ ಏಕಾಏಕಿ ಸುದ್ದಿಯಾಗಿರುವ ಕೃತಕ ಬುದ್ಧಿಮತ್ತೆ ಆಧಾರಿತ (Artificial Intelligence) ಚಾಟ್‌ಬಾಟ್‌ ಆದ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐನಲ್ಲಿ (Open AI) ದಿಢೀರ್‌ ಬದಲಾವಣೆಗಳಾಗಿವೆ. ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ (Sam Altman) ಅವರನ್ನು ಸಂಸ್ಥೆಯಿಂದ ಹೊರಹಾಕಲಾಗಿದ್ದು, ಸಹ ಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್ ಕೂಡ ಹೊರಬಂದಿದ್ದಾರೆ. ಓಪನ್‌ಎಐ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಮೀರಾ ಮುರತಿ (Mira Murati) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅದರಲ್ಲೂ ಕೇವಲ 34 ವರ್ಷದ ಮೀರಾ ಮುರತಿ ಅವರು ಸಿಇಒ ಆಗಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಹಾಗಾದರೆ, ಮೀರಾ ಮುರತಿ ಅವರ ಹಿನ್ನೆಲೆ ಏನು? ಇದುವರೆಗೆ ಅವರು ಮಾಡಿರುವ ಸಾಧನೆ ಯಾವುದು ಸೇರಿ ಅವರ ಕುರಿತ ವಿವಿಧ ಮಾಹಿತಿ ಇಲ್ಲಿದೆ.

ಮೀರಾ ಮುರತಿ ಹಿನ್ನೆಲೆ ಏನು?

ಚಾಟ್‌ಜಿಪಿಟಿ ಅಭಿವೃದ್ಧಿಪಡಿಸಿದ ಬ್ರಿಲಿಯಂಟ್‌ ಮೈಂಡ್‌ಗಳಲ್ಲಿ ಒಬ್ಬರಾಗಿರುವ ಮೀರಾ ಮುರತಿ ಅವರು 1988ರಲ್ಲಿ ಯುರೋಪ್‌ನ ಪುಟ್ಟ ದೇಶವಾದ ಅಲ್ಬೇನಿಯಾದ ವ್ಲೋರ್‌ (Vlore)ನಲ್ಲಿ ಜನಿಸಿದರು. ಬಾಲ್ಯದಿಂದಲೇ ತಂತ್ರಜ್ಞಾನದತ್ತ ಒಲವು ಹೊಂದಿದ್ದ ಮೀರಾ ಮುರತಿ ಅವರು 16ನೇ ವಯಸ್ಸಿನಲ್ಲಿಯೇ ಕೆನಡಾದ ಪಿಯರ್‌ಸನ್‌ ಕಾಲೇಜ್‌ ಸಿಡಬ್ಲ್ಯೂಸಿಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಅಮೆರಿಕದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. 2011ರಲ್ಲಿ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಕಂಪನಿಯಾದ ಗೋಲ್ಡ್‌ಮ್ಯಾನ್‌ ಸಚ್ಸ್‌ನಲ್ಲಿ ಇಂಟರ್ನ್‌ ಆಗಿ ವೃತ್ತಿಜೀವನ ಆರಂಭಿಸಿದ ಮೀರಾ ಮುರತಿ ಈಗ ಮಹೋನ್ನತ ಹುದ್ದೆ ಅಲಂಕರಿಸಿದ್ದಾರೆ.

ವೃತ್ತಿಜೀವನದಲ್ಲಿ ಭಾರಿ ಏಳಿಗೆ

ಹೊಸತನ್ನು ಕ್ಷಿಪ್ರವಾಗಿ ಕಲಿಯುವ ಚಾಣಾಕ್ಷತನ, ತಂಡದ ಜತೆಗೂಡಿ ಅದ್ಭುತ ಕಾರ್ಯನಿರ್ವಹಣೆ, ತಂಡವನ್ನು ಮುನ್ನಡೆಸುವ ಚಾಕಚಕ್ಯತೆ ಹೊಂದಿರುವ ಮೀರಾ ಮುರತಿ ಅವರು ವೃತ್ತಿಜೀವನದಲ್ಲಿ ಕ್ಷಿಪ್ರವಾಗಿ ಏಳಿಗೆ ಕಂಡಿದ್ದಾರೆ. 2011ರಲ್ಲಿ ಗೋಲ್ಡ್‌ಮ್ಯಾನ್‌ ಸಚ್ಸ್‌ ಸೇರಿದ ಅವರು 2012ರಲ್ಲಿ ಜೋಡಿಯಾಕ್‌ ಏರೋಸ್ಪೇಸ್‌ ಸೇರಿದರು. 2013ರವರೆಗೆ ಜೋಡಿಯಾಕ್‌ ಏರೋಸ್ಪೇಸ್‌ನಲ್ಲಿ ಕೆಲಸ ಮಾಡಿದ ಮೀರಾ ಮುರತಿ, ಇದೇ ವರ್ಷ ಟೆಸ್ಲಾ ಕಂಪನಿಯ ಲಕ್ಸುರಿ ಎಲೆಕ್ಟ್ರಿಕ್‌ ಎಸ್‌ಯುವಿ ಮಾಡೆಲ್‌ ಎಕ್ಸ್‌ ಕಾರುಗಳ ವಿಭಾಗದ ಸೀನಿಯರ್‌ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ಸೇರ್ಪಡೆಯಾದರು.

ಕೃತಕ ಬುದ್ಧಿಮತ್ತೆ ಕುರಿತು ಮೀರಾ ಮಾತು

ವರ್ಚ್ಯುವಲ್‌ ರಿಯಾಲಿಟಿ ತಂತ್ರಜ್ಞಾನದ ದೈತ್ಯ ಕಂಪನಿ ಲೀಪ್‌ ಮೋಷನ್‌ಗೆ ಕಾರ್ಯಕ್ಷೇತ್ರವನ್ನು 2016ರಲ್ಲಿ ವಿಸ್ತರಿಸಿಕೊಂಡ ಮೀರಾ ಮುರತಿ, 2018ರಲ್ಲಿ ಓಪನ್‌ಎಐ ಸೇರಿದರು. ಇಲ್ಲಿಂದ ಮೀರಾ ಮುರತಿ ಅವರ ಭವಿಷ್ಯ ಮತ್ತಷ್ಟು ಉಜ್ವಲವಾಯಿತು. ಓಪನ್‌ ಎಐನ ಅಪ್ಲೈಡ್‌ ಎಐ ಉಪಾಧ್ಯಕ್ಷೆಯಾಗಿ ಸೇರಿದ ಅವರು ಒಂದೊಂದೇ ಬಡ್ತಿ ಪಡೆಯುತ್ತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದರು. ಈಗ ಅವರು ಓಪನ್‌ಎಐ ಸಿಇಒ ಆಗಿ ಆಯ್ಕೆಯಾಗುವ ಮೂಲಕ ವೃತ್ತಿಜೀವನದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ.

ಇದನ್ನೂ ಓದಿ: OpenAI: ಓಪನ್‌ಎಐ ಸಂಸ್ಥೆಯಲ್ಲಿ ಭಾರಿ ಬದಲಾವಣೆ, ಸಂಸ್ಥಾಪಕರಿಬ್ಬರ ನಿರ್ಗಮನ, ಮಿರಾ ನೂತನ ಸಿಇಒ

ಮೀರಾ ಮುರತಿ ಆಯ್ಕೆ ಏಕೆ ಪ್ರಮುಖ?

ಮೀರಾ ಮುರತಿ ಅವರು ಓಪನ್‌ಎಐ ಸಿಇಒ ಆಗಿ ಆಯ್ಕೆಯಾಗಿರುವುದು ಹಲವು ದಿಸೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಜಗತ್ತು ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಗೆ ಜಗತ್ತಿನಾದ್ಯಂತ ವ್ಯಾಪಕ ಮೆಚ್ಚುಗೆ ಇದೆ. ಅದರಲ್ಲೂ ಚಾಟ್‌ಜಿಪಿಟಿ ಹಾಗೂ ಟೆಕ್ಸ್ಟ್‌ ಡಿಸ್‌ಕ್ರಿಪ್ಶನ್‌ನಿಂದ ಇಮೇಜ್‌ಗಳನ್ನು ಸೃಷ್ಟಿಸುವ ಡಾಲ್‌-ಇ (Dall E) ಅಭಿವೃದ್ಧಿಪಡಿಸಿರುವುದರ ಹಿಂದೆ ಮೀರಾ ಮುರತಿ ಅವರ ಪಾತ್ರ ಹಿರಿದಾಗಿದೆ. ಕೃತಕ ಬುದ್ಧಿಮತ್ತೆಯಲ್ಲಿ ಇವರು ಹೊಂದಿರುವ ಜ್ಞಾನ, ತಂಡವನ್ನು ಮುನ್ನಡೆಸುವ ನಾಯಕತ್ವ ಗುಣದ ಮೇಲೆ ಕಂಪನಿಯ ಆಡಳಿತ ಮಂಡಳಿ ವಿಶ್ವಾಸ ಇಟ್ಟಿದ್ದು, ಅವರು ಮುಂದಿನ ದಿನಗಳಲ್ಲಿ ಯಾವ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Exit mobile version