Site icon Vistara News

Twitter | ಟ್ರಂಪ್, ಕಂಗನಾ ಖಾತೆ ಬ್ಯಾನ್ ವಾಪಸ್ ಆಗುತ್ತಾ? ಮಸ್ಕ್ ಮಾಡಿದ ಟ್ವೀಟ್ ಮರ್ಮವೇನು?

Twitter

ಬೆಂಗಳೂರು: ದ್ವೇಷಪೂರಿತ ಮಾತುಗಳು, ದಂಗೆಗೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ಡೋನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗಲೇ ಅವರ ಖಾತೆಯನ್ನು ಟ್ವಿಟರ್‌ ಶಾಶ್ವತವಾಗಿ ನಿಷೇಧಿಸಿತ್ತು. ಅದೇ ರೀತಿ, ಸದಾ ತಮ್ಮ ಟ್ವೀಟ್ಸ್ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಕಾಂಟ್ರವರ್ಷಲ್ ಕ್ವೀನ್ ಕಂಗನಾ ರಣಾವತ್ ಅವರನ್ನು ಟ್ವಿಟರ್ ಪರ್ಮನೆಂಟ್ ಆಗಿ ಬ್ಯಾನ್ ಮಾಡಿತ್ತು! ಆದರೆ, ಎಲಾನ್ ಮಸ್ಕ್ ಟ್ವಿಟರ್ (Twitter) ಖರೀದಿಸುತ್ತಿದ್ದಂತೆ ಟ್ರಂಪ್ ಮತ್ತು ಕಂಗನಾ ಮತ್ತೆ ಟ್ವಿಟರ್‌ಗೆ ಮರಳಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

the bird is freed ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದೂ ಇವರಿಬ್ಬರು ಮತ್ತೆ ಟ್ವಿಟರ್‌ಗೆ ಮರಳು ಸಂಭಾವ್ಯತೆಯನ್ನು ಹೆಚ್ಚಿಸಿದೆ ಎಂಬ ಚರ್ಚೆಗಳು ಶುರುವಾಗಿವೆ. ಕಮ್ಯುನಿಟಿ ನಿಯಮಗಳ ವಿರುದ್ಧವಾಗಿ ಇವರು ಟ್ವೀಟ್ಸ್ ಮಾಡುತ್ತಾರೆಂಬ ಕಾರಣಕ್ಕೆ ಟ್ವಿಟರ್, ಫೇಸ್‌ಬುಕ್ ಇವರನ್ನು ಶಾಶ್ವತವಾಗಿ ನಿಷೇಧಿಸಿವೆ.

ನಟಿ ಕಂಗನಾ ರಣಾವತ್ ಅವರಂತೂ, ಬೆಳಗಾದರೂ ಸಾಕು ತಮ್ಮ ಟ್ವೀಟ್‌ಗಳ ಮೂಲಕ ಬಾಲಿವುಡ್ ಮಾಫಿಯಾ ಎಂದೇ ತಮ್ಮ ಟ್ವೀಟ್ ಶುರು ಮಾಡುತ್ತಿದ್ದರು. ರಾಜಕೀಯವಾಗಿ ಬಿಜೆಪಿ ಪಕ್ಷದ ಪರವಾಗಿ ಟ್ವೀಟ್ ಮಾಡುತ್ತಾ ಉಳಿದವರನ್ನು ಹೀಯಾಳಿಸುತ್ತಿದ್ದರು. ಈ ಕುರಿತು ಟ್ವಿಟರ್‌ಗೆ ಸಾಕಷ್ಟು ಜನರು ರಿಪೋರ್ಟ್ ಕೂಡ ಮಾಡಿದ್ದರು. ಅಂತಿಮವಾಗಿ ಟ್ವಿಟರ್ ಅವರ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಿತು. ಬಳಿಕ ಅವರನ್ನು ಫೇಸ್‌ಬುಕ್ ಕೂಡ ನಿಷೇಧಿಸಿತು. ಈಗ ಇನ್‌ಸ್ಟಾದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಾಗೆಯೇ ದೇಸಿ ಟ್ವಿಟರ್ ಎಂದೇ ಜನಪ್ರಿಯವಾಗಿರುವ ಕೂ ವೇದಿಕೆ ಕಂಗನಾ ಇದ್ದಾರೆ. ಅದರಿಂದ ಅಂಥ ಉಪಯೋಗವೇನೂ ಅವರಿಗೆ ಆದಂತಿಲ್ಲ.

ಇನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಡೋನಾಲ್ಡ್ ಟ್ರಂಪ್ ಅವರಂತೂ ತಮಗಾಗದ ಸುದ್ದಿ ಮಾಧ್ಯಮಗಳು, ತಮ್ಮ ರಾಜಕೀಯ ಎದುರಾಳಿಗಳನ್ನು ಬೈಯಲು ಟ್ವಿಟರ್ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೂ ಆ ಸೋಲನ್ನು ಅವರು ಒಪ್ಪಿಕೊಳ್ಳಲು ಸಿದ್ಧರಲಿಲ್ಲ. ಅದೇ ಕಾರಣಕ್ಕಾಗಿ ಅವರು ಜನಪ್ರತಿನಿಧಿಗಳಿರುವ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ಮಾಡುವಂತೆ ತಮ್ಮ ಹಿಂಬಾಲಕರಿಗೆ ಟ್ವಿಟರ್‌ ಮೂಲಕ ಕರೆ ನೀಡಿದ್ದರು. ಟ್ರಂಪ್ ಫಾಲೋವರ್ಸ್, ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅಮೆರಿಕದ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆಯಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್, ಟ್ರಂಪ್ ಖಾತೆಯನ್ನು ಪರ್ಮೆನೆಂಟ್ ಬ್ಯಾನ್ ಮಾಡಿದೆ. ಇದರಿಂದ ರೊಚ್ಚಿಗೆದ್ದ ಟ್ರಂಪ್ ಅವರು ತಮ್ಮದೇ ಸೋಷಿಯಲ್ ಟ್ರುಥ್ ಎಂಬ ಹೊಸ ಮೈಕ್ರೋ ಬ್ಲಾಗಿಂಗ್ ಆ್ಯಪ್ ಶುರು ಮಾಡಿದ್ದಾರೆ.

ಡೋನಾಲ್ಡ್ ಟ್ರಂಪ್, ಕಂಗನಾ ರಣಾವತ್ ಮಾತ್ರವಲ್ಲದೇ ಇನ್ನೂ ಹಲವರ ವ್ಯಕ್ತಿಗಳನ್ನು ಟ್ವಿಟರ್ ಬ್ಯಾನ್ ಮಾಡಿದೆ. ತಮ್ಮ ವೇದಿಕೆಯು ಯಾವುದೇ ದ್ವೇಷ, ಅಸೂಯೆ, ಮಾನಹಾನಿಕಾರಕ ಸಂಗತಿಗಳಿಗೆ ಅವಕಾಶ ಮಾಡಿಕೊಡಬಾರದು. ಇದೊಂದು ಮುಕ್ತ ವೇದಿಕೆಯಾಗಿದ್ದು, ಕೆಲವು ನಿಯಮಗಳ ಪಾಲನೆ ಅಗತ್ಯ ಎಂಬ ಕಾರಣಕ್ಕೆ ಟ್ವಿಟರ್ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ.

ಹಕ್ಕಿ ಈಗ ಸ್ವತಂತ್ರ
ತಮ್ಮ ವಿಚಿತ್ರ ವಿಚಾರಗಳು, ಶೈಲಿಯ ಮೂಲಕವೇ ಹೆಚ್ಚು ಚರ್ಚೆಗೊಳಗಾಗುವ ಮೂಲಕ ಎಲಾನ್ ಮಸ್ಕ್ ಅವರು ಮೊದಲಿನಿಂದಲೂ ಟ್ವಿಟರ್ ಯಾರನ್ನೂ ನಿಷೇಧಿಸಬಾರದು. ಎಲ್ಲರಿಗೂ ಮುಕ್ತವಾಗಿಡಬೇಕು ಎಂಬ ನಿಲುವು ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಅದರಂತೆ ಅವರು ಟ್ವಿಟರ್ ಅನ್ನು ಖರೀದಿಸಿದ ಮರು ಕ್ಷಣವೇ ಹಕ್ಕಿ ಈಗ ಸ್ವತಂತ್ರ ಎಂದು ಟ್ವೀಟ್ ಮಾಡಿದ್ದು, ಬಹುಶಃ ಹಲವರ ಖಾತೆಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ | Twitter | ಪರಾಗ್, ವಿಜಯಾಗೆ ಎಲಾನ್ ಮಸ್ಕ್ ಗೇಟ್‌ಪಾಸ್, ನೇಟಿಜನ್ಸ್‌ ಫುಲ್ ಟೈಮ್ ಪಾಸ್!

Exit mobile version