ನವ ದೆಹಲಿ: ಅಚ್ಚರಿಯ ವಿದ್ಯಮಾನದಲ್ಲಿ ಆ್ಯಪಲ್ ಕಂಪನಿ ತನ್ನ ನೂತನ ಐಫೋನ್ 14 ಅನ್ನು ಬಿಡುಗಡೆಗೊಳಿಸಿದ ಮೂರೇ ವಾರದೊಳಗೆ ಭಾರತದಲ್ಲಿ ಉತ್ಪಾದನೆಯನ್ನು ಆರಂಭಿಸಿದೆ. (Apple iPhone 14) ಇದರೊಂದಿಗೆ ಚೀನಾದಿಂದ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
ಬಹು ನಿರೀಕ್ಷೆಯ Apple iPhone 14 ಸರಣಿಯ ಮೊಬೈಲ್‌ಗಳನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್ 7ರಂದು ನಡೆದ ಕಾರ್ಯಕ್ರಮದಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಅವರು ಲೋಕಾರ್ಪಣೆ ಮಾಡಿದ್ದರು.
ಇದರೊಂದಿಗೆ ಚೀನಾ ಮತ್ತು ಭಾರತದಲ್ಲಿ ಐಫೋನ್ ಉತ್ಪಾದನೆ ಬಹುತೇಕ ಏಕಕಾಲಕ್ಕೆ ಆರಂಭವಾದಂತಾಗಿದೆ. ಈ ಹಿಂದೆ ಚೀನಾದಲ್ಲಿ ಉತ್ಪಾದನೆ ಶುರುವಾರ 6ರಿಂದ 9 ತಿಂಗಳಿನ ಬಳಿಕ ಭಾರತದಲ್ಲಿ ಶುರುವಾಗುತ್ತಿತ್ತು. ಹೀಗಾಗಿ ಚೀನಾದಿಂದ ಭಾರತಕ್ಕೆ ತನ್ನ ಉತ್ಪಾದನೆಯನ್ನು ಕಂಪನಿ ಹಂತಗಳಲ್ಲಿ ಸ್ಥಳಾಂತರಿಸುತ್ತಿರುವುದು ಸ್ಪಷ್ಟವಾಗಿದೆ.
ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷದ ಬಳಿಕ ಆ್ಯಪಲ್ ಚೀನಾಕ್ಕೆ ಪರ್ಯಾಯ ತಾಣಗಳನ್ನು ಹುಡುಕಾಡುತ್ತಿದ್ದು, ಭಾರತ ಆಕರ್ಷಿಸಿದೆ. ಆ್ಯಪಲ್‌ನ ಉತ್ಪಾದನೆಯ ಗುತ್ತಿಗೆದಾರ ಕಂಪನಿಯಾದ, ತೈವಾನ್ ಮೂಲದ ಫಾಕ್ಸ್‌ಕಾನ್, ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ಘಟಕದಲ್ಲಿ ಐಫೋನ್ 14 ಉತ್ಪಾದನೆಯನ್ನು ಆರಂಭಿಸಿದೆ.
ಆ್ಯಪಲ್ ಮೊದಲ ಬಾರಿಗೆ 2017ರಲ್ಲಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಆರಂಭಿಸಿತ್ತು. ಆಗ ಐಫೋನ್ ಎಸ್‌ಇ ಅನ್ನು ತಯಾರಿಸಿತ್ತು.