World Motorcycle Day | ಹುಡುಗರು ಹುಡುಗಿಯರಿಗಿಂತಲೂ ಹೆಚ್ಚು ಪ್ರೀತಿಸುವ ಒಂದು ಸಂಗತಿ ಇದ್ದರೆ ಅದು ಬೈಕ್! ಅದೇ ರೀತಿ ಹುಡುಗಿಯರಿಗೂ ಬೈಕ್‌ನಲ್ಲಿ ಝುಮ್ಮಂತ ಬರುವ ಹುಡುಗರೇ ಇಷ್ಟ ಅನ್ನೋ ಮಾತಿದೆ. ಅಂತೂ ಬೈಕ್ ಇಬ್ಬರ ಮನಸ್ಸಿಗೂ ಹತ್ತಿರ ಎನ್ನುವುದು ಸತ್ಯ.
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ: ಫೋರ್ ವ್ಹೀಲರ್ಸ್ ಮೂವ್ ದಿ ಬಾಡಿ, ಬಟ್ ಟೂ ವ್ಹೀಲರ್ಸ್ ಮೂವ್ ದಿ ಸೋಲ್! ಅಂತ. ಅಂದರೆ ಕಾರುಗಳು ದೇಹಕ್ಕೆ ಆಪ್ತವಾಗಿದ್ದರೆ ಬೈಕ್ ಮನಸಿಗೆ ಆಪ್ತ ಅಂತ.
ಇಂಥ ಭಾವಗಳು ಮಿಳಿತಗೊಂಡಿರುವುದರಿಂದಲೇ ಜೂನ್ 21 ಎಂದರೆ ಬೈಕರ್‌ಗಳಿಗೆಲ್ಲ ಯುಗಾದಿ, ದೀಪಾವಳಿ ಇದ್ದಂತೆ. ಯಾಕೆಂದರೆ ಈ ದಿನ ವಿಶ್ವ ಮೋಟರ್ ಸೈಕಲ್ ದಿನ. ಬೈಕೆಂಬ ಎರಡು ಚಕ್ರಗಳ ಮಷೀನ್ ಎಲ್ಲ ಕಾಲದ ಯುವಜನರ ಮನಸ್ಸಿನ ಮೊದಲ ಕ್ರಷ್.
ಬೈಕು ಎಂದರೆ ಅಷ್ಟೊಂದು ಆಪ್ತ ಭಾವ ಯಾಕೆಂದರೆ, ಅದು ನಮ್ಮನ್ನು ಬೇಕೆಂದಲ್ಲಿಗೆ ಹೊತ್ತು ತಿರುಗುವ ಕಬ್ಬಿಣದ ಕುದುರೆ. ಹೆಚ್ಚಿನವರು ಮನೆಯಿಂದ ಹೊರಗಿಡುವ ಎರಡನೇ ಹೆಜ್ಜೆ ಬೈಕ್ ಆಚೆಗಿರುತ್ತದೆ. ಉಳಿದ ಯಾವುದೇ ವಾಹನವನ್ನು ನಾವು ಅಷ್ಟು ಬೀಡುಬೀಸಾಗಿ ಬಳಸುವುದಿಲ್ಲ. ಇಂಥ ದೇಹ ಮತ್ತು ಮನಸಿಗೆ ಹತ್ತಿರವಾಗಿರುವ ಬೈಕ್‌ನ ದಿನವನ್ನು ಸಂಭ್ರಮಿಸುವುದು ಬೇಡವೇ?
ಎಲ್ಲಿಂದ ಶುರುವಾಯಿತು ಬೈಕ್ ಕಥೆ?
1860ರಲ್ಲಿ ಪಿಯರೆ ಮೈಕಾಕ್ಸ್ ಎಂಬಾತ ಪ್ಯಾರಿಸ್‌ನಲ್ಲಿ ಮೊದಲು ಮೊಟರ್‌ಸೈಕಲ್ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು. ಆಗ ಮೊಟರ್‌ಸೈಕಲ್‌ಗಳು ಸ್ಟೀಮ್-ಚಾಲಿತ ವಾಹನಗಳಾಗಿದ್ದವು. ಅದಾದ ಬಳಿಕ 1885ರಲ್ಲಿ ಮೊದಲ ಬಾರಿಗೆ ಇಂಟರ್ನಲ್ ಕಂಬಶ್ಚನ್ ಎಂಜಿನ್ ಹೊಂದಿದ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಅಷ್ಟಾದರೂ, ಮೋಟರ್ ಸೈಕಲ್ ಪ್ರಸಿದ್ಧಿ ಹೊಂದಲು ಅನೇಕ ವರ್ಷಗಳೇ ಬೇಕಾಯಿತು. ಮೊತ್ತಮೊದಲು ಬೈಕಿನ ಉತ್ಪಾದನೆ ಶುರು ಆಗಿದ್ದು, 1894ರಲ್ಲಿ. ಆದರೆ, 1900ರಲ್ಲಿ ಯಾವಾಗ ರಾಯಲ್ ಎನ್‌ಫೀಲ್ಡ್‌ನಂಥ ಸಂಸ್ಥೆಗಳು ಹೆಜ್ಜೆಯಿಟ್ಟಿತ್ತೋ, ಅಗ ಬೈಕುಗಳ ವೇಗ ಹೆಚ್ಚಾಯಿತು! 1901ರ ಹೊತ್ತಿಗೆ ಬೈಕುಗಳು ವಿಶ್ವದಾದ್ಯಂತ ಸದ್ದು ಮಾಡಲು ಶುರು ಮಾಡಿದವು.
ಇವಿಷ್ಟು ಬೈಕಿನ ಇತಿಹಾಸವಾದರೆ, ಇನ್ನು ವಿಶ್ವ ಮೊಟರ್‌ಸೈಕಲ್ ದಿನವನ್ನು ಯಾಕೆ ಜೂನ್ 21ರಂದು ಆಚರಿಸಲಾಗುತ್ತದೆ? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಈ ಪ್ರಶ್ನೆಯ ಉತ್ತರ ಸರಳವಾಗಿದೆ. ಜೂನ್ 21 ಎಂದರೆ, ವರ್ಷದಲ್ಲಿಯೇ ಅತಿ ದೀರ್ಘವಾದ ದಿನ. ವರ್ಷದ ಉಳಿದೆಲ್ಲ ದಿನಗಳಿಗಿಂತಲೂ ಈ ದಿನದ ಹಗಲು ದೀರ್ಘವಾಗಿರುತ್ತದೆ. ಈ ಕಾರಣದಿಂದ ಜೂನ್ 21ರಂದು ವಿಶ್ವ ಮೋಟರ್ ಸೈಕಲ್ ದಿನವೆಂದು ನಿಗದಿಪಡಿಸಲಾಗಿದೆ. ಅಂದರೆ ಬೈಕ್ ಒಂದು ಸುದೀರ್ಘ ಪಯಣದ ಸಂಗಾತಿ.
ಬೈಕು ಎಂದರೆ ನೆನಪುಗಳ ಗಂಟು!
ಕಾಲೇಜಿನ ದಿನಗಳಲ್ಲಿ ನಿತ್ಯವೂ ಬೈಕಿನಲ್ಲಿ ಹೋಗಬೇಕೆಂಬ ಆಸೆ ಎಲ್ಲರಿಗೆ ಬರುತ್ತದೆ. ಆದರೆ, ಎಲ್ಲರಿಗೂ ಅಂತ ಯೋಗ ಇರುವುದಿಲ್ಲ. ಹೆಚ್ಚಿನವರು ಮೊದಲ ವೇತನದಿಂದ ಸ್ವಲ್ಪ ಸ್ವಲ್ಪ ಕೂಡಿಟ್ಟು, ಅಥವಾ ಮೊದಲ ಸಂಬಳ ಸಿಕ್ಕಿದ ಕೂಡಲೇ ಲೋನ್ ಮಾಡಿ ಇಷ್ಟಪಟ್ಟ ಬೈಕ್ ಖರೀದಿಸುತ್ತಾರೆ. ಆಗ ಸಿಗುವ ಆನಂದವೇ ಬೇರೆ. ಕೆಲವರು ಈ ರೀತಿ ಖರೀದಿಸಿದ ಬೈಕನ್ನು ಕೊನೆಯವರೆಗೂ ಜೋಪಾನವಾಗಿ ಇಡುತ್ತಾರೆ.
ಇಷ್ಟದ ಬೈಕನ್ನು ಖರೀದಿಸಿದ ಕ್ಷಣ. ಹೊಸ ಬೈಕಿನಲ್ಲಿ ಮೊದಲು ತನ್ನ ಪ್ರೀತಿ ಪಾತ್ರರನ್ನು ಕೂರಿಸಿಕೊಂಡು ಸುತ್ತಿದ್ದು. ತಾನು ಇಷ್ಟಪಡುವ ಹುಡುಗಿಗೆ ಬೈಕು ಇಷ್ಟವೆಂಬ ಕಾರಣಕ್ಕೆ ಅವಳ ಮುಂದೆ ಪೋಸು ಕೊಟ್ಟಿದ್ದು. ಬೈಕಿನಲ್ಲಿ ಮೊದಲು ಬಿದ್ದು ಪೆಟ್ಟು ಮಾಡಿಕೊಂಡ ಗಾಯ. ಪೆಟ್ರೋಲ್ ಖಾಲಿಯಾದಾಗ ರಸ್ತೆಯಲ್ಲಿ ಭಾರದ ಗಾಡಿಯನ್ನು ತಳ್ಳಿದ್ದು. ಲಾಂಗ್ ರೈಡ್ ಹೋಗಲು ಮನೆಯವರೊಂದಿಗೆ ಜಗಳವಾಡಿದ್ದು. ಎಲ್ಲ ನೆನಪುಗಳೂ ಈ ಬೈಕು ಎಂಬ ಸಂಗಾತಿಯೊಂದಿಗೆ ಸೇರಿಕೊಂಡಿರುತ್ತವೆ.
ಯುವಕರ ಮೊದಲ ಸಂಗಾತಿ ಬೈಕ್!
ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ ಬೈಕುಗಳ ಬಳಕೆ ಯುದ್ಧಕಾಲದಲ್ಲಿ ಆಗಿದ್ದೂ ಕಂಡುಬರುತ್ತದೆ. ಅಲ್ಲಿಂದ ಶುರುವಾಗಿ ನಮ್ಮ ನಿಮ್ಮೆಲ್ಲರ ನಿತ್ಯದ ಬದುಕಿನಲ್ಲೂ ಬೈಕು ಮಹತ್ವದ ಸ್ಥಾನ ಪಡೆದುಕೊಂಡಿದೆ. ಬೈಕು ಕೂಡ ಕೆಲವೊಮ್ಮೆ ಹೆಣ್ಣಿನಂತೆ ಕಾಣುತ್ತದೆ, ಯಾಕೆಂದರೆ ಅದು ಕೂಡ ಜೀವನದಲ್ಲಿ ಅನೇಕ ಪಾತ್ರ ನಿರ್ವಹಿಸಿಸುತ್ತದೆ.
ನಿತ್ಯವೂ ಮನೆಯಿಂದ ಆಫೀಸಿಗೆ ಹಾಗೂ ಆಫೀಸಿನಿಂದ ಮನೆಗೆ ಬೈಕಿನಲ್ಲಿ ಹೋಗುವವರಿದ್ದಾರೆ. ಅವರಿಗೆ ಬೈಕು ಅಮ್ಮನಂತೆ ಕಾಳಜಿವಹಿಸುತ್ತದೆ. ಕೆಲವೊಮ್ಮೆ ಸುಸ್ತಾಗಿ ನಿಂತುಬಿಟ್ಟರೆ ಬೈಕಿನ ಮೇಲೆ ಕೋಪಿಸಿಕೊಳ್ಳಬಹುದು ಆದರೂ ಅದು ಮರುದಿನದಿಂದ ಮತ್ತೆ ತನ್ನ ಕಾರ್ಯದಲ್ಲಿ ನಿರತವಾಗುತ್ತದೆ.
ದುಃಖದಿಂದ ಒಂಟಿಯಾದವರಿಗೆ ಇದು ಭಾವ ಹಂಚಿಕೊಳ್ಳುವ ಗೆಳತಿಯಂತೆ. ಜೀವನದಲ್ಲಿ ನೀನೆಂದೂ ಒಂಟಿಯಲ್ಲ, ಜತೆಗೆ ನಾನಿದ್ದೇನೆ ಎಂದು ಮೌನವಾಗಿಯೇ ಹೇಳಿಬಿಡುತ್ತದೆ.
ಯುವಕರಿಗೆ ಪಾಲಿಗೆ ಇದು ಏನನ್ನೂ ನಿರೀಕ್ಷಿಸದ ಸಂಗಾತಿ! ದಿನಗಟ್ಟಲೇ ಇದನ್ನು ಮಾತನಾಡಿಸದಿದ್ದರೂ ಮುನಿಸಿಕೊಳ್ಳುವುದಿಲ್ಲ. ಆದರೆ, ಮಾತನಾಡಿಸದೇ ಸುಮ್ಮನಿರಲು ಆಗುವುದೂ ಇಲ್ಲ.
ವಿಶ್ವ ಮೋಟರ್‌ಸೈಕಲ್ ದಿನವನ್ನು ನೀವು ಹೇಗೆ ಆಚರಿಸುತ್ತೀರಿ?
ಬೆನ್ನಿಗೊಂದು ಬ್ಯಾಗ್ ಹಾಕಿಕೊಂಡು, ಬೈಕಿಗೂ ಬ್ಯಾಗ್ ಕಟ್ಟಿಕೊಂಡು ಗೊತ್ತಿಲ್ಲದ ಊರಿಗೆ ಪಯಣಿಸಬೇಕೆಂಬ ಆಸೆ ಅನೇಕರಿಗಿರುತ್ತದೆ. ಕನ್ನಡದ ಕಿರಿಕ್ ಪಾರ್ಟಿ, ಮಲೆಯಾಳಂನ ನೀಲಾಕಾಶಂ ಪಚ್ಚಕಡಲ್ ಚುವನ್ನ ಭೂಮಿ ಸಿನಿಮಾಗಳಲ್ಲಿ ನಾಯಕ ಹೇಗೆ ಟ್ರಿಪ್ ಹೋಗುತ್ತಾನೋ, ಅದೇ ರೀತಿ!
ಹಾಗೆ ರಸ್ತೆಯಲ್ಲಿ ಹೋಗುತ್ತಿದ್ದಾಗೆಲ್ಲ ಒಂದು ಸುಂದರ ಅನುಭವ ಉಂಟಾಗುತ್ತದೆ. ಪ್ರಪಂಚವನ್ನೇ ಮರೆತಂತೆ, ಗಾಳಿಯ ಸ್ವರಕ್ಕೆ ಬೈಕು ಕೂಡ ಶ್ರುತಿ ಸೇರಿಸುವ ಪ್ರಯತ್ನದಲ್ಲಿರುವಂತೆ, ಅಕ್ಕಪಕ್ಕದ ಮರಗಿಡಗಳು ನಮ್ಮ ಬರುವಿಕೆಗಾಗಿ ಕಾಯುತ್ತಿದ್ದಂತೆ, ಚಾಮರ ಬೀಸಿ ಸ್ವಾಗತಿಸಿದಂತೆ, ಮುಂದೆಲ್ಲೋ ಗಮ್ಯ ಇರಬಹುದು, ಇಲ್ಲದಿರಬಹುದು ಆದರೂ ಈ ಪಯಣವೇ ಸುಖ! ಎಂಬ ಅನುಭವ ಮೂಡಿಸುತ್ತದೆ. ಅದರಲ್ಲೂ ಕೆಲವರಿಗೆ ಸೋಲೋ ರೈಡ್ ಎಂದರೆ ಪರಮಸುಖ! ಅವರ ಮತ್ತು ಬೈಕ್‌ನ ನಡುವೆ ಮತ್ತೊಬ್ಬರು ಪ್ರವೇಶಿಸುವುದು ಇಷ್ಟವಿರುವುದಿಲ್ಲ. ಒಂದು ರೀತಿಯಲ್ಲಿ ಅದು ಒಳ್ಳೆಯದೂ ಹೌದು.
ಲೇ ಲಡಾಖ್, ಖಾರ್ದುಂಗ್ಲಾ ಪಾಸ್, ಕೆ ಟು ಕೆ (ಕನ್ಯಾಕುಮಾರಿ ಇಂದ ಕಾಶ್ಮೀರ) ಹೀಗೆ ಕೆಲವು ಜಾಗಗಳು ಬೈಕರ್‌ಗಳಿಗೆ ಡ್ರೀಮ್ ಡೆಸ್ಟಿನೇಷನ್! ಈ ಮೊಟರ್‌ಸೈಕಲ್ ದಿನದಂದು ನಿಮ್ಮ ಸಂಗಾತಿಯನ್ನು ನಿಮ್ಮಿಷ್ಟದ ಜಾಗಕ್ಕೆ ಕರೆದೊಯ್ದು ಹಬ್ಬವನ್ನು ಅಚರಿಸಬಹುದು.
ಆದರೆ, ಎಲ್ಲರಿಗೂ ಈ ಅವಕಾಶವಿರುವುದಿಲ್ಲ. ಅಂಥವರು, ನೀವು ಎಲ್ಲಿಗೆ ಹೋಗುತ್ತೀರೋ ಅಲ್ಲಿಗೆ ಬೈಕನ್ನು ಕರೆದುಕೊಂಡು ಹೋಗಿ, ಪ್ರತಿದಿನವೂ ಹಬ್ಬವೇ ಎಂದು ಸಂಭ್ರಮಿಸಬಹುದು. ಇನ್ನು ಅದರೊಂದಿಗೆ ಒಂದು ಫೋಟೋ ತೆಗೆಸಿಕೊಂಡು ಹಂಚಿಕೊಳ್ಳಲು ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಎಲ್ಲ ಹೇಗೂ ಇದ್ದೇ ಇವೆ.
ಬೈಕ್ ಇಲ್ಲದವರು, ಬೈಕಿನ ಮೇಲೆ ಪ್ರೀತಿ ಇರುವವರು ಕೂಡ ನಿಮ್ಮ ಆಪ್ತರೊಂದಿಗೆ ಸೇರಿ ಹಬ್ಬವನ್ನು ಆಚರಿಸಬಹುದು. ಅವರೊಂದಿಗೆ ಬೈಕಿನಲ್ಲಿ ಹಿಂಬದಿ ಸವಾರರಾಗಿ ಕುಳಿತು ಟ್ರಿಪ್ ಹೋಗಬಹುದು. ಅವರ ಸಂಭ್ರಮದಲ್ಲಿ ನೀವೂ ಭಾಗಿಯಾಗಬಹುದು. ಈ ದಿನ ನೀವು ಏನು ಮಾಡಬೇಕು ಎಂದು ಯೋಚನೆ ಮಾಡಬೇಡಿ. ಬೈಕನ್ನು ನೆನಪಿಸಿಕೊಳ್ಳಿ. ಪ್ರೀತಿಸಿ!
ಇದನ್ನೂ ಓದಿ: ಭಾರತೀಯರಿಗೆ SUV ವಾಹನಗಳ ಮೇಲೆ ಏಕೆ ಇಷ್ಟೊಂದು ಮೋಹ?