ನವದೆಹಲಿ: ಫೋನ್ ಕರೆ (Phone Call) ಮಾಡಲು ಫೋನ್ ನಂಬರ್ (Phone Number) ಬೇಕೇ ಬೇಕು ಅಲ್ಲವೇ? ಆದರೆ, ಇನ್ನು ಮುಂದೆ ಯಾವುದೇ ನಂಬರ್ ಇಲ್ಲದೇ ಕರೆ ಮಾಡಬಹುದು! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ, ನೀವು ಎಕ್ಸ್ (X platform) ವೇದಿಕೆಯಲ್ಲಿ ಖಾತೆ ಹೊಂದಿರಬೇಕು! ಹೌದು, ಮಾಲೀಕ ಎಲಾನ್ ಮಸ್ಕ್ (Elon Musk) ಅವರು, ತಮ್ಮ ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ (Video Call) ಮತ್ತು ಆಡಿಯೋ ಕಾಲ್ (Audio Call) ಫೀಚರ್ ಒದಗಿಸುವುದಾಗಿ ಗುರುವಾರ ಒದಗಿಸಿದ್ದಾರೆ. ಆದರೆ, ಈ ಫೀಚರ್ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಮಾತ್ರ ಯಾವುದೇ ಮಾಹಿತಿಯನ್ನು ನೀಡಿಲ್ಲ. ಎಕ್ಸ್‌ಗೆ ಈ ಹಿಂದೆ ಟ್ವಿಟರ್ (Twitter) ಎಂದು ಕರೆಯಲಾಗುತ್ತಿತ್ತು(X New Feature).
Video & audio calls coming to X:
— Elon Musk (@elonmusk) August 31, 2023
– Works on iOS, Android, Mac & PC
– No phone number needed
– X is the effective global address book
That set of factors is unique.
ಈ ಕುರಿತು ಎಲಾನ್ ಮಸ್ಕ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ ಮತ್ತು ಆಡಿಯೋ ಸೌಲಭ್ಯ ಬರಲಿದೆ. ಐಒಎಸ್ ಮತ್ತು ಆಂಡ್ರಾಯ್ಡ್, ಮ್ಯಾಕ್ ಮತ್ತು ಗಣಕಯಂತ್ರಗಳ ಕುರಿತು ಕೆಲಸ ನಡೆಯುತ್ತಿದೆ. ಫೋನ್ ಮಾಡಲು ಫೋನ್ ನಂಬರ್ ಬೇಕಾಗಿಲ್ಲ. ಎಕ್ಸ್ ಪರಿಣಾಮಕಾರಿ ಜಾಗತಿಕ ಅಡ್ರೆಸ್ ಬುಕ್ ಆಗಿದೆ ಎಂದು ಹೇಳಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ಎಕ್ಸ್ ಸಿಇಒ ಲಿಂಡಾ ಯಾಕರಿನೊ ಅವರು ಎಕ್ಸ್ ವೇದಿಕೆಯಲ್ಲಿ ವಿಡಿಯೋ ಕಾಲಿಂಗ್ ಸೌಲಭ್ಯ ದೊರೆಯಲಿದೆ ಎಂದು ಸಿಎನ್‌ಬಿಸಿಗೆ ತಿಳಿಸಿದ್ದರು. ಈ ಮಾಹಿತಿ ಹೊರ ಬಿದ್ದ ಒಂದು ದಿನದ ಬಳಿಕ ಎಕ್ಸ್ ಓನರ್, ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು, ವಿಡಿಯೋ ಮತ್ತು ಆಡಿಯೋ ಕಾಲಿಂಗ್ ಫೀಚರ್ ಬಗ್ಗೆ ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.
ಭಾರತದಲ್ಲಿ ಟೆಸ್ಲಾ ಕಂಪನಿ ಘಟಕ ಆರಂಭ ಶೀಘ್ರ
ಭಾರತದಲ್ಲಿ ಟೆಸ್ಲಾ (Tesla) ತನ್ನ ಘಟಕವನ್ನು ಆರಂಭಿಸಲಿದೆ ಎಂದು ಕೆಲವು ದಿನಗಳಿಂದ ವರದಿಯಾಗುತ್ತಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ಘಟಕವನ್ನು ಆರಂಭಿಸುವ ಸ್ಥಳವನ್ನು ಗುರುತಿಸಲಾಗುವುದು ಎಂದು ಟೆಸ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO) ಎಲಾನ್ ಮಸ್ಕ್ (Elon Musk) ಅವರು ಹೇಳಿದ್ದಾರೆ.
ವಾಲ್‌ಸ್ಟ್ರೀಟ್ ಜರ್ನಲ್‌ನ ಥೋರಾಲ್ಡ್ ಬಾರ್ಕರ್ ಅವರು ಕಾರ್ಯಕ್ರಮವೊಂದರಲ್ಲಿ, ಟೆಸ್ಲಾ ಫ್ಯಾಕ್ಟರಿ ಆರಂಭಕ್ಕೆ ಭಾರತವು ಆಸಕ್ತಿ ಹೊಂದಿದೆಯೇ ಎಂದು ಎಲಾನ್ ಮಸ್ಕ್ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ಅವರು, ಸಂಪೂರ್ಣವಾಗಿ ಎಂದು ಉತ್ತರಿಸಿದ್ದಾರೆ. ಭಾರತದಲ್ಲಿ ಟೆಸ್ಲಾ ತನ್ನ ಫ್ಯಾಕ್ಟರಿಯನ್ನು ಆರಂಭಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದೆ ಎಂದು ಭಾರತದ ತಂತ್ರಜ್ಞಾನ ಸಹಾಯಕ ಸಚಿವರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕಳೆದ ವಾರ ರಾಯ್ಟರ್ಸ್ ವರದಿ ಮಾಡಿತ್ತು.