ಕೊರೋನಾಕ್ಕೆ ಟಾಟಾ ಹೇಳಿದ ಮೇಲೆ ಜನರು ಪ್ರವಾಸಕ್ಕೆಂದು ಮನೆಯಿಂದ ಹೊರಬಿದ್ದು ಕೊಂಚ ಅಲ್ಲಿಂದಿಲ್ಲಿ, ಇಲ್ಲಿಂದಲ್ಲಿ ಎಂದು ಪ್ರವಾಸ ಮಾಡಲು ಶುರು ಮಾಡಿದ್ದು ಗೊತ್ತೇ ಇದೆ. ಹೇಳಹೆಸರಿಲ್ಲದಂತೆ ಮಲಗಿದ್ದ ಪ್ರವಾಸೋದ್ಯಮ ೨೦೨೨ರ ಆರಂಭದಲ್ಲಷ್ಟೇ ಚೇತರಿಕೆ ಕಂಡು ಇದೀಗ ಮತ್ತೆ ಯಥಾಸ್ಥಿತಿಗೆ ಬಹುತೇಕ ಮರಳಿದೆ. ಮನೆಯಲ್ಲೇ ಕೂತು ಕೂತು ಬಸವಳಿದು ಸುಣ್ಣವಾಗಿದ್ದ ಅನೇಕರು ತಮ್ಮ ತಮ್ಮ ಅನುಕೂಲತೆಗಳಿಗೆ ಹೊಂದಿಕೊಂಡು ಪ್ರವಾಸ ಹೊರಟದ್ದು ಸುಳ್ಳಲ್ಲ.
ಇಂದು ಪ್ರವಾಸಕ್ಕೆಂದು ಇಂದು ಅಂತರ್ಜಾಲ ಜಾಲಾಡದವರಿಲ್ಲ. ಈಗಿನ ಟ್ರೆಂಡ್, ಇತ್ತೀಚೆಗೆ ಜನರು ಯಾವೆಲ್ಲ ಜಾಗಗಳಿಗೆ ಹೆಚ್ಚಿಗೆ ಹೋಗಬಯಸುತ್ತಾರೆ, ವಿದೇಶದಲ್ಲಿ ಯಾವ ತಾಣಗಳು ಜನಪ್ರಿಯ ಇತ್ಯಾದಿ ಇತ್ಯಾದಿ ಮಾಹಿತಿಗಳನ್ನು ಆಗಾಗ ಓದಿ ತಿಳಿದುಕೊಳ್ಳುತ್ತೇವೆ. ಇಂತಸ ಸಂದರ್ಭ ಇದೀಗ ಗೂಗಲ್ ತನ್ನಲ್ಲಿ ೨೦೨೨ರಲ್ಲಿ ಜನರು ಅತೀ ಹೆಚ್ಚು ಸರ್ಚ್ ಮಾಡಿದ ಜಾಗಗಳಾವುವು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಮೂಲಕ ಜನರು ಯಾವ ಜಾಗಗಳ ಮೇಲೆ ಕಣ್ಣು ನೆಟ್ಟಿದ್ದಾರೆಂಬುದನ್ನೂ ನಾವು ಊಹಿಸಿಕೊಳ್ಳಬಹುದು.
ಇದನ್ನೂ ಓದಿ | Kempegowda statue | ಆಕರ್ಷಕ ಪ್ರವಾಸಿ ತಾಣವಾಗುತ್ತಿರುವ ಕೆಂಪೇಗೌಡರ ಪ್ರತಿಮೆ, ನಿತ್ಯ ಸಾವಿರಾರು ಜನರ ಆಗಮನ
೧. ಬಕ್ಕಿಂಗ್‌ಹ್ಯಾಂ ಅರಮನೆ, ಇಂಗ್ಲೆಂಡ್: ಇಂಗ್ಲೆಂಡ್‌ಗೆ ಭೇಟಿ ಕೊಡುವ ಯಾರೇ ಆದರೂ ಬಕ್ಕಿಂಗ್ ಹ್ಯಾಂ ಅರಮನೆ ನೋಡದೆ ಇದ್ದರೆ, ಇಂಗ್ಲೆಂಡ್ ಪ್ರವಾಸ ಪೂರ್ತಿಯಾಗುವುದಿಲ್ಲ ಎಂಬ ಮಾತಿದೆ. ಹಾಗೆಯೇ, ಇಂಗ್ಲೆಂಡಿನ ಅತ್ಯಂತ ಸುಂದರ ವಾಸ್ತುಶಿಲ್ಪವನ್ನು ಹೊಂದಿರುವ ಅರಮನೆಯಿದು. ಇಂದಿಗೂ ಕೆಲಸ ಮಾಡುವ ಕೆಲವೇ ಕೆಲವು ಅರಮನೆಗಳ ಪೈಕಿ ಇದೂ ಒಂದು. ಇದರ ಜೊತೆಗೆ ಜನರನ್ನೂ ಅರಮನೆಯೊಳಗೆ ನೋಡಲು ಅವಕಾಶವನ್ನೂ ಕೊಡುವ ಇಲ್ಲಿ, ಗ್ಯಾಲರಿಗಳು, ಉದ್ಯಾನಗಳು, ಐಷಾರಾಮಿ ವಸ್ತುಗಳು… ಹೀಗೆ ನೋಡಿದಷ್ಟೂ ಮುಗಿಯದು! ಎಲಿಝಬೆತ್ ರಾಣಿಯ ನಿಧನದ ಕಾರಣವೂ ಸೇರಿದಂತೆ, ಪ್ರವಾಸಿಗರನ್ನೂ ಅತ್ಯಂತ ಹೆಚ್ಚು ಸೆಳೆಯುವ ಈ ಜಾಗ ಈ ಬಾರಿ ಗೂಗಲ್ಲಿನಲ್ಲಿ ಜನರು ಅತೀ ಹೆಚ್ಚು ಸರ್ಚ್ ಮಾಡಿದ ಸ್ಥಳಗಳ ಪೈಕಿ ಒಂದನೇ ಸ್ಥಾನದಲ್ಲಿದೆ.
೨. ಬಿಗ್ ಬೆನ್, ಲಂಡನ್: ಬಿಗ್ ಬೆನ್ ಎಂದರೆ ಲಂಡನ್‌ನ ವೆಸ್ಟ್‌ಮಿನ್ಸ್ಟರ್‌ನ ಅತ್ಯಂತ ದೊಡ್ಡ ಗಂಟೆ. ಈ ಬೃಹತ್ ಗಂಟೆ ಲಂಡನ್‌ನ ನೋಡಲೇಬೇಕಾದ ಸ್ಥಳಗಳಲ್ಲಿ ಒಂದು. ೧೩ ಟನ್‌ಗಳಷ್ಟು ತೂಗುವ ಈ ಗಂಟೆಯಿರುವ ಈ ಜಾಗದಿಂದ ರಾತ್ರಿ ನೋಡಿದರೆ, ಲಂಡನ್ ಅತ್ಯಂತ ಸುಂದರವಾಗಿ ಕಂಗೊಳಿಸುತ್ತದೆ.
೩. ಪಿರಮಿಡ್ ಆಫ್ ಗೀಝಾ, ಈಜಿಪ್ಟ್: ಈಜಿಪ್ಟಿನ ಪಿರಮಿಡ್ಡುಗಳ ಲೆಕ್ಕವಿಲ್ಲದಷ್ಟು ಫೋಟೋಗಳನ್ನು ಶಾಲಾ ಜೀವನದಿಂದಲೇ ಎಲ್ಲರೂ ನೋಡಿರಬಹುದು. ಆದರೆ, ಒಮ್ಮೆ ಆ ಪಿರಮಿಡ್ಡುಗಳ ಎದುರು ಹೋಗಿ ನಿಂತುಕೊಂಡರೆ ಎಂದು ಒಮ್ಮೆ ಊಹಿಸಿ. ಆರನೇ ಶತಮಾನದ ಈ ಪಿರಮಿಡ್ಡುಗಳನ್ನು ನೋಡುವ ಅವಕಾಶ ನಿಮ್ಮದಾದರೆ, ಅದೊಂದು ಜೀವಮಾನದ ಅನುಭವವೇ ಸರಿ. ಇದು ಮೂರನೇ ಸ್ಥಾನದಲ್ಲಿದೆ.
೪. ಕ್ರೈಸ್ಟ್ ದಿ ರಿಡೀಮರ್, ರಿಯೋ ಡೆ ಜನೈರೋ: ರಿಯೋ ನಗರದಿಂದ ಸುಮಾರು ೨,೩೧೦ ಅಡಿ ಎತ್ತರದಲ್ಲಿ ಏಸುಕ್ರಿಸ್ತನ ಬೃಹತ್ ಮೂರ್ತಿಯಿರುವ ಈ ಜಾಗ ಸುಮಾರು ನೂರು ವರ್ಷಗಳಿಂದ ಜನರನ್ನು, ಇತಿಹಾಸಕಾರರನ್ನು ತನ್ನತ್ತ ಸೆಳೆಯುತ್ತಿದೆ. ಯುನೆಸ್ಕೋ ವಿಶ್ವ ಪಾರಂಪರಿಕಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇದಕ್ಕೆ ವಿಶ್ವ ಅದ್ಭುತ ಮೂರ್ತಿ ಎಂಬ ಬಿರುದೂ ಇದೆ. ಇದರ ಗಾತ್ರ ಹಾಗೂ ಅಗಾಧತೆ ಈ ಬಿರುದನ್ನು ತಂದು ಕೊಟ್ಟಿದೆ. ಇದು ಸುಮಾರು ೧೩೦ ಅಡಿ ಎತ್ತರದ ಕ್ರಿಸ್ತನ ಪ್ರತಿಮೆಯಾಗಿದ್ದು, ಇದರ ಚಾಚಿದ ಕೈಗಳೇ ೨೮ ಮೀಟರ್ ಅಗಲವಾಗಿ ಹರಡಿಕೊಂಡಿದೆ.
೫. ರಾಯಲ್ ಪ್ಯಾಲೆಸ್ ಆಫ್ ಬ್ರೂಸೆಲ್ಸ್, ಬ್ರೂಸೆಲ್ಸ್: ಬ್ರೂಸೆಲ್ಸ್‌ನ ಈ ಅರಮನೆ ಐದನೇ ಸ್ಥಾನದಲ್ಲಿದ್ದು, ವಿಶ್ವದ ಅತ್ಯಂತ ಸುಂದರ ಅರಮನೆಗಳಲ್ಲಿ ಒಂದು. ಈಗ ಇಲ್ಲಿ ಅಧಿಕೃತವಾಗಿ ಯಾರೂ ಮಾಸಿಸುವುದಿಲ್ಲವಾದರೂ, ಸಾರ್ವಜನಿಕರಿಗೆ ನೋಡಲು ಪ್ರವೇಶವಿರುವ ಅರಮನೆ. ಆಗಾಗ ನಡೆಯುವ ಹಬ್ಬ, ಉತ್ಸವಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಇದನ್ನೂ ಓದಿ | ಸುಂದರಿ ಹುಲಿ ಒಂದು ವರ್ಷದ ಬಳಿಕ ಪ್ರತ್ಯಕ್ಷ, ಬಂಡಿಪುರ ಪ್ರವಾಸಿಗರು ಖುಷ್