Site icon Vistara News

Bicycle travel | ಕರ್ನಾಟಕದಿಂದ ಕಾಶ್ಮೀರಕ್ಕೆ ಇಬ್ಬರು ಕನ್ನಡಿಗರ 3,500 ಕಿಮೀ ಸೈಕಲ್‌ ಯಾತ್ರೆ!

bicycle travel

ಪ್ರವಾಸ ಎಂದರೇನು ಎಂದರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಟ್ಟಾರು. ಯಾಕೆಂದರೆ ಪ್ರವಾಸವೆಂದರೆ ಒಬ್ಬೊಬ್ಬರ ಕಲ್ಪನೆಯಲ್ಲಿ ಒಂದೊಂದು. ಕೆಲವರಿಗೆ ಕೇವಲ ಒಂದು ಮಜಾವಷ್ಟೇ ಆದರೆ, ಇನ್ನೂ ಕೆಲವರಿಗೆ ಶಾಂತಿ ನೆಮ್ಮದಿ, ಮತ್ತೆ ಕೆಲವರಿಗೆ ಅದೊಂದು ಸಾಹಸ, ಮಗದೊಬ್ಬರಿಗೆ ಅದು ಜೀವನಾನುಭವ. ಇಲ್ಲಿ ಕರ್ನಾಟಕದ ಇಬ್ಬರು ಯುವಕರು ಸೈಕಲ್‌ ಮೂಲಕ ಪ್ರವಾಸ ಮಾಡಿ ಬಂದಿದ್ದಾರೆ. ಬೆವರು ಸುರಿಸ್‌ ಸೈಕಲ್‌ ತುಳಿಯುತ್ತಾ ಮಂಗಳೂರಿನಿಂದ ೨೬ ದಿನಗಳ ಕಾಲ ೩,೫೦೦ ಕಿಮೀ ದೂರದ ಕಾಶ್ಮೀರಕ್ಕೆ ಹೋಗಿ ಬಂದಿದ್ದಾರೆ!

೨೪ರ ಹರೆಯದ ಜಗದೀಶ್‌ ಕುಳಾಲ್‌ ಹಾಗೂ ೨೬ರ ಹರೆಯದ ಶ್ರೀನಿಧಿ ಶೆಟ್ಟಿ ಎಂಬ ಇಬ್ಬರು ಯುವಕರೇ ಈ ಸಾಹಸ ಮಾಡಿರುವುದು. ಅವರು ಅಕ್ಟೋಬರ್‌ ಒಂದರಂದು ಹೊರಟು ೨೬ ದಿನಗಳಲ್ಲಿ ೩,೫೦೦ ಕಿಮೀ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ್ದಾರೆ. ಕರ್ನಾಟಕದಿಂದ ಕಾಶ್ಮೀರದವರೆಗೆ ಸೈಕಲ್‌ನಲ್ಲಿ ಕ್ರಮಿಸಿದ ಇವರು ಅಂಗಾಂಗ ದಾನ ಹಾಗೂ ಪರಿಸರ ಜಾಗೃತಿ ಮೂಡಿಸುವುದನ್ನು ಗುರಿಯಾಗಿರಿಸಿಕೊಂಡು ಸಾಗಿದ್ದಾರೆ.

ಜಗದೀಶ್‌ ಹಾಗೂ ಶ್ರೀನಿಧಿ ಇಬ್ಬರೂ ಮೆಕ್ಯಾನಿಕಲ್‌ ಎಂಜಿನಿಯರ್‌ಗಳಾಗಿದ್ದು ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಉತ್ಪಾದನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಜಗದೀಶ್‌ ಹೇಳುವ ಪ್ರಕಾರ, ಎಂಟು ರಾಜ್ಯಗಳನ್ನು ದಾಟಿ ೩,೫೦೦ ಕಿಮೀಗಳಷ್ಟು ದೂರವನ್ನು ತಲುಪಲು ೨೬ ದಿನಗಳು ಬೇಕಾದವು. ಇದೊಂದು ಎಲ್ಲರಲ್ಲೂ ಪರಿಸರದ ಕಾಳಜಿ ಬೆಳೆಸುವ ಪ್ರಯಾಣ. ನಮ್ಮ ಭೂಮಿ ಹಸಿರನ್ನು ಕಳೆದುಕೊಳ್ಳುವ ಮೊದಲೇ ನಾವು ಹಸಿರಿನಿಡೆಗೆ ಹೋಗಬೇಕು. ಇದಷ್ಟೇ ಅಲ್ಲ. ನಾವು ನಮ್ಮ ಅಂಗಾಂಗ ದಾನವನ್ನೂ ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ಜೀವನ ಅನ್ನುವುದು ನಮಗೆ ದಕ್ಕಿದ ಉಡುಗೊರೆ. ಆ ಉಡುಗೊರೆಯನ್ನು ನಾವು ಇನ್ನೊಬ್ಬರಿಗೆ ಹಂಚುವ ಕೆಲಸ ಆಗಬೇಕು. ಆದರೆ ಬಹಳಷ್ಟು ಮಂದಿ ಇದರ ಅಗತ್ಯತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುತ್ತಾರೆ.

ನಾವು ಹೊರಡುವಾಗ ಮಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆ ಇತ್ತು. ಇದನ್ನು ದಾಟಿಕೊಂಡು ನಾವು ವಿವಿಧ ಭೂಭಾಗಗಳ ಕಠಿಣ ಉಷ್ಣತೆಗಳನ್ನು ದಾಟುತ್ತಾ ಸಾಗಿದೆವು, ಅತಿಯಾದ ಮಳೆ, ಅತಿಯಾದ ಬಿಸಿಲು, ಚಳಿ ಎಲ್ಲವನ್ನೂ ಈ ಪ್ರಯಾಣದಲ್ಲಿ ನಾವು ಎದುರಿಸಬೇಕಾಯಿತು. ಗುಜರಾತ್‌, ರಾಜಸ್ಥಾನಗಳಲ್ಲಿ ಸಿಕ್ಕಾಪಟ್ಟೆ ಬಿಸಿಲು, ಸೆಖೆ ಇತ್ತು. ಕಾಶ್ಮೀರದಲ್ಲಿ ತುಂಬಾ ಚಳಿ ಇತ್ತು ಎಂದು ಅವರು ತಮ್ಮ ಪಯಣದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ | Viral post | ಚಂಡಮಾರುತದಲ್ಲಿ ಗಾಯಗೊಂಡಿದ್ದ ರಣಹದ್ದು 5 ವರ್ಷ ಬಳಿಕ ವಿಮಾನದಲ್ಲಿ ಮರಳಿ ಗೂಡಿಗೆ!

ನಾವು ಕಳೆದ ಎರಡು ವರ್ಷಗಳಿಂದಲೇ ಇಂಥದ್ದೊಂದು ಯೋಜನೆ ರೂಪಿಸಿದ್ದೆವು. ನಾವು ಮೊದಲು ಯೋಚನೆ ಮಾಡಿದ್ದು ಮನಾಲಿ- ಲಡಾಖ್-‌ ಖರ್ದುಂಗ್ಲಾ ಮಾರ್ಗವನ್ನು ಸೈಕಲ್‌ನಲ್ಲಿ ಕ್ರಮಿಸಲು ನಿರ್ಧರಿಸಿ ಕಳೆದ ವರ್ಷ ಅದನ್ನು ಮಾಡಿದೆವು. ಅದು ಸುಮಾರು ೫೦೦ ಕಿಮೀಗಷ್ಟು ದೂರದ ದುರ್ಗಮ ದಾರಿ. ಜೊತೆಗೆ ಹೈ ಅಲ್ಟಿಟ್ಯೂಡ್‌ ಪ್ರದೇಶ ಕೂಡಾ. ಐದು ಪಾಸ್‌ಗಳನ್ನು ದಾಟಿಕೊಂಡು ಈ ಪ್ರಮಾಣ ಮಾಡಿದ್ದೆವು. ಅದೊಂದು ಅದ್ಭುತ ಅನುಭವ. ಈ ಅನುಭವವೇ ನಮಗೆ ಈ ೩,೫೦೦ ಕಿಮೀ ದೂರದ ಸೈಕ್ಲಿಂಗ್‌ ಸಾಹಸವನ್ನು ಕೈಗೆತ್ತಿಕೊಳ್ಳಲು ಹುಮ್ಮಸ್ಸು ನೀಡಿತು ಎಂದು ಜಗದೀಶ್‌ ಹೇಳುತ್ತಾರೆ.

ಸ್ವಯಂಸೇವಾ ಸಂಸ್ಥೆಯೊಂದರ ಸಹಾಯದ ಮೂಲಕ ಹೋದಲ್ಲಿ ಉಳಿದುಕೊಳ್ಳಲು ಹಾಗೂ ಸ್ಥಳೀಯರ ಭೇಟಿ ಸಾಧ್ಯವಾಯಿತು. ಈ ಪ್ರಯಾಣದಿಂದ, ಭಾರತದಲ್ಲಿ ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ ಎಲ್ಲವುಗಳಲ್ಲಿ ವೈವಿಧ್ಯತೆಯಿದ್ದರೂ, ಭಾರತ ಒಂದೇ ಎಂಬ ಭಾವನೆ ಇನ್ನೂ ಸ್ಥಿರವಾಯಿತು. ಈ ಇಡೀ ಭಾರತದ ವಿವಿಧ ರಾಜ್ಯಗಳ ನಾನಾ ಭಾಷೆಗಳ ಜನರಿಂದ ನಮಗೆ ಅದ್ಭುತ ಸಹಕಾರ ಸಿಕ್ಕಿತು. ಎಲ್ಲೂ ಬೇರೆಯವರೆಂಬ ಭಾವ ಬರಲೇ ಇಲ್ಲ. ಅವರ ಚಂದನೆಯ ಕಥೆಗಳನ್ನು, ಬದುಕಿನ ಅನುಭವಗಳನ್ನು ಅಲ್ಲಲ್ಲಿ ಕೇಳುತ್ತಾ, ಅವರ ವೈವಿಧ್ಯಮಯ ಆಹಾರದ ರುಚಿ ಸವಿಯುತ್ತಾ ಈ ಪ್ರಯಾಣ ಮಾಡಿದ್ದೇ ಒಂದು ರೋಚಕ ಅನುಭವ ಎಂದವರು ನೆನಪಿನ ಸುರುಳಿಯನ್ನು ಬಿಚ್ಚಿಡುತ್ತಾರೆ. ಇಂತಹ ಪ್ರವಾಸಗಳನ್ನು ಮಾಡಲು ಯುವಜನರು ಮುಂದೆ ಬರಬೇಕು. ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕು ಎಂಬುದು ಅವರಿಬ್ಬರ ಅಭಿಪ್ರಾಯ.

ಇದನ್ನೂ ಓದಿ | Viral video | ಹಸಿವಿಲ್ಲದಂತೆ ನಟಿಸುವ ಈ ನಾಯಿಯ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ!

Exit mobile version