Site icon Vistara News

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Jammu Tour

ಬೆಂಗಳೂರು: ಎತ್ತರದ ಹಿಮಾಲಯದ ತಪ್ಪಲಿನಲ್ಲಿರುವ ಜಮ್ಮು ತುಂಬಾ ಚಳಿಯಿಂದ ಕೂಡಿದ ಪ್ರದೇಶವಾಗಿದೆ. ಹಾಗಾಗಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಬೆಂದು ಹೋದವರು ಎಸಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಈ ಸ್ಥಳಕ್ಕೆ ಪ್ರಯಾಣ ಬೆಳೆಸಬಹುದು. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮನ್ನು ಮೋಡಿ ಮಾಡುವುದಂತು ಸತ್ಯ. ಹಾಗಾಗಿ ಜಮ್ಮುವಿಗೆ ಪ್ರಯಾಣ (Jammu Tour) ಬೆಳೆಸುವವರು ಈ ಸ್ಥಳಗಳಿಗೆ ಭೇಟಿ ನೀಡಿ ಮತ್ತು ಈ ವಿಚಾರಗಳನ್ನು ತಿಳಿದುಕೊಂಡಿರಿ.

ಆಧ್ಯಾತ್ಮಿಕ ಸಾರ

ಅನೇಕ ಧರ್ಮಗುರುಗಳ ತವರೂರಾದ ಜಮ್ಮು ತನ್ನ ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ಇಸ್ಲಾಮಿಕ್ ದರ್ಗಾಗಳು ಮತ್ತು ಸಿಖ್ ಗುರುದ್ವಾರಗಳ ಜೊತೆಗೆ ಪ್ರಸಿದ್ಧ ಹಿಂದೂ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ರಘುನಾಥ ದೇವಾಲಯದ ಸಂಕೀರ್ಣವು ಉತ್ತರ ಭಾರತದ ಅತಿದೊಡ್ಡ ದೇವಾಲಯದ ಸಂಕೀರ್ಣಗಳಲ್ಲಿ ಒಂದಾಗಿದೆ. ಇದು ಎತ್ತರದ ಗೋಪುರಗಳನ್ನು ಹೊಂದಿದೆ. ಅಲ್ಲದೇ ಇಲ್ಲಿನ ಬಾವೆ ವಾಲಿ ಮಾತಾ ದೇವಸ್ಥಾನ ಮತ್ತು ಪೀರ್ ಬಾಬಾ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ.

ದೈವಿಕ ವೈಷ್ಣೋದೇವಿ ಯಾತ್ರೆ

ತ್ರಿಕೂಟ ಬೆಟ್ಟ ಗಳಲ್ಲಿರುವ ಮಾತಾ ವೈಷ್ಣೋದೇವಿಯ ಪವಿತ್ರ ಗುಹೆಯ ದೇಗುಲಕ್ಕೆ ಚಾರಣ ಮಾಡುವುದು ಭಾರತದ ಅತ್ಯಂತ ಪೂಜ್ಯ ತೀರ್ಥಯಾತ್ರೆಗಳಲ್ಲಿ ಒಂದು ಎನ್ನಬಹುದು. ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಜನರು ಬಂದು ತಮ್ಮ ದೀರ್ಘ ಪ್ರಯಾಣದ ಮೂಲಕ ಭಕ್ತಿಯನ್ನ ಸಾರುತ್ತಾರೆ. ತೀರ್ಥಯಾತ್ರೆಯ ಸಮಯದಲ್ಲಿ ಈ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗುವುದನ್ನು ತಡೆಯಲು ಅಧಿಕಾರಿಗಳನ್ನು ನೀಮಿಸಲಾಗುತ್ತದೆ. ಅವರು ಭದ್ರತಾ ಕ್ರಮಗಳನ್ನು ನೋಡಿಕೊಳ್ಳುತ್ತಾರೆ.

ಸಂಸ್ಕೃತಿ ಮತ್ತು ಹಬ್ಬಗಳು

9 ದಿನಗಳ ನವರಾತ್ರಿ ಉತ್ಸವವನ್ನು ಜಮ್ಮುವಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮೇಳಗಳನ್ನು ನಡೆಸಲಾಗುತ್ತದೆ. ಸ್ಥಳೀಯ ನೃತ್ಯಗಳು, ಸಂಗೀತ ಮತ್ತು ಕರಕುಶಲ ವಸ್ತುಗಳ ಪ್ರದರ್ಶನೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನವೆಂಬರ್ ನಲ್ಲಿ ಕಲಾಕೇಂದ್ರವು ವಾರ್ಷಿಕ ಜಮ್ಮು ಉತ್ಸವವನ್ನು ಆಯೋಜಿಸುತ್ತದೆ.

ಫ್ಯೂಷನ್ ಆಹಾರ

ಜಮ್ಮುವಿನ ಪಾಕಪದ್ಧತಿಯು ಪಂಜಾಬ್, ಕಾಶ್ಮೀರ ಮತ್ತು ದಕ್ಷಿಣ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳ ರುಚಿಗಳನ್ನು ಹೊಂದಿರುತ್ತದೆ. ನೀವು ಇಲ್ಲಿಗೆ ಭೇಟಿ ನೀಡಿದರೆ ರಾಜ್ಮಾ-ಅಕ್ಕಿ, ಚೋಲೆ-ಪುರಿಮತ್ತು ಕುಲ್ಚಾದಂತಹ ವಿಶೇಷ ತಿಂಡಿಗಳ ರುಚಿ ಸವಿಯುವುದನ್ನು ಮರೆಯಬೇಡಿ. ಇದಲ್ಲದೇ ಫಿರ್ನಿ(ಅಕ್ಕಿ ಕಡುಬು), ಗುಡ್ ಪಾಪ್ಡಿ ಮತ್ತು ಕಳಾರಿಯಂತಹ ಭಕ್ಷ್ಯಗಳನ್ನು ಕೇಸರ್ ಗುಲ್ಶನ್‌ನ ಪ್ರಸಿದ್ಧ ಕೇಸರಿ ಚಹಾ ಅಥವಾ ಕಾಶ್ಮೀರಿ ಕಹ್ವಾದೊಂದಿಗೆ ಸವಿಯಿರಿ.

ಪ್ರಕೃತಿಯ ಅದ್ಭುತ

ಜಮ್ಮುವಿನ ಸಮೀಪದಲ್ಲಿರುವ ಪಟ್ನಿಟಾಪ್ ಗಿರಿಧಾಮವು ಬೇಸಿಗೆಯಲ್ಲಿ ಅಥವಾ ಚಳಿಗಾಲದಲ್ಲಿ ಪ್ರವಾಸಿಗರಿಗೆ ಕಾಲ ಕಳೆಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೀಯಿಂಗ್ ನಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಇಲ್ಲಿನ ಸನ್ಸಾರ್ ಮತ್ತು ಮನ್ಸಾರ್ ಸರೋವರದಲ್ಲಿ ನೀವು ಕ್ಯಾಂಪಿಂಗ್ ಮತ್ತು ಬೋಟಿಂಗ್ ಮಾಡಬಹುದು.

ಐತಿಹಾಸಿಕ ತಾಣಗಳು

ತಾವಿ ನದಿಯ ಮೇಲಿರುವ ಬಹು ಕೋಟೆಯು ಜಮ್ಮುವಿನ ವಿಶೇಷವಾದ ಐತಿಹಾಸಿಕ ತಾಣವಾಗಿದೆ. ಇಲ್ಲಿ ಹಲವಾರು ಹಿಂದೂ ದೇವಾಲಯಗಳಿವೆ. ಜೊತೆಗೆ ಸ್ಮಾರಕ, ಆಹಾರ ಪದಾರ್ಥಗಳವರೆಗೆ ಎಲ್ಲವನ್ನೂ ಮಾರಾಟ ಮಾಡುವಂತಹ ಅಂಗಡಿಗಳನ್ನ ಹೊಂದಿದೆ. ಇಲ್ಲಿ ಪಾಳು ಬಿದ್ದಿರುವ ಸಿಮ್ಥಾನ್ ಶಿಖರವನ್ನು ಏರಿದರೆ ಜಲಚರಗಳು ಮತ್ತು ಕಲ್ಲಿನ ಕಟ್ಟಡಗಳನ್ನು ನೋಡಬಹುದು.

ಟ್ರಾವೆಲ್ ಪಾಯಿಂಟರ್ಸ್

ಜಮ್ಮುವಿಗೆ ಪ್ರಯಾಣಿಸಲು ಬಯಸುವವರು ದೆಹಲಿ , ಶ್ರೀನಗರ, ಮುಂಬೈ ಮತ್ತು ಅಮೃತಸರದಂತಹ ಪ್ರಮುಖ ನಗರಗಳಿಂದ ನೇರ ವಿಮಾನಗಳ ವ್ಯವಸ್ಥೆಯಿದೆ. ಹಾಗೇ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರವಾಣಿಸುವವರಿಗೆ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆ ಇದ್ದು, ಇವು ಹಿಮಾಚಲ ಪ್ರದೇಶದ ಹತ್ತಿರದ ಪ್ರವಾಸಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Travel Time: ಸಮುದ್ರದಲ್ಲೇ ಜೀವನ; ಹೊಸ ಬಗೆಯ ಅಲೆಮಾರಿ ಪ್ರವಾಸಿ ದಂಪತಿ ಇವರು!

ಜಮ್ಮುವಿಗೆ ಪ್ರಯಾಣಿಸುವವರು ನೆನಪಿಡಬೇಕಾದ ವಿಷಯಗಳು

ನೀವು ಜಮ್ಮುವಿಗೆ ಪ್ರಯಾಣ ಬೆಳೆಸುವಾಗ ನಿಮ್ಮ ಐಡಿ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಿ. ಹಾಗೇ ರಾತ್ರಿಯ ಸಮಯದಲ್ಲಿ ಪ್ರಯಾಣಿಸುವವರು ನಿರ್ಜನ ಪ್ರದೇಶದಲ್ಲಿ ಮತ್ತು ಮಂದ ಬೆಳಕಿರುವ ಕಾಲುದಾರಿಗಳಲ್ಲಿ ಸಾಗುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ಸಾಧಾರಣ ಉಡುಪುಗಳನ್ನು ಧರಿಸಿ. ಇಲ್ಲಿನ ಪವಿತ್ರ ಸ್ಥಳಗಳಿಗೆ ಪ್ರವೇಶಿಸುವಾಗ ನಿಮ್ಮ ಪಾದರಕ್ಷೆಗಳನ್ನು ಹೊರಗೆ ಬಿಚ್ಚಿಡಿ. ಹಾಗೇ ಯಾವುದೇ ಸ್ಥಳೀಯ ಅಥವಾ ಅಧಿಕೃತ /ಮಿಲಿಟರಿ ಸಂಸ್ಥೆಗಳ ಫೋಟೊಗಳನ್ನು ಕ್ಲಿಕ್ಕಿಸುವ ಮುನ್ನ ಅನುಮತಿ ಪಡೆಯಿರಿ.

Exit mobile version