Site icon Vistara News

Life on wheels | ಟೆಂಪೋ ಟ್ರಾವೆಲರನ್ನು ಕ್ಯಾರವಾನ್‌ ಆಗಿ ಬದಲಾಯಿಸಿ ದೇಶ ಸುತ್ತುವ ದಂಪತಿ!

caravan

ಡೆಹ್ರಾಡೂನ್‌ನ ಕಾಲೇಜಿನಲ್ಲಿ ಪ್ರೀತಿಸಿ ಆಮೇಲೆ ಮದುವೆಯಾದ ದೀಪಕ್‌ ಹಾಗೂ ರುಚಿ ಪಾಂಡೆ ಅವರ ಪ್ರವಾಸದ ಬಗೆಯೇ ಎಂಥವರಿಗೂ ಸ್ಪೂರ್ತಿ ಕೊಡುವಂಥದ್ದು. ಆಸಕ್ತಿಯಿದ್ದರೆ, ದೇಶ ಸುತ್ತುವ ಕನಸು, ಕಸುವು ಇದ್ದರೆ ಅದನ್ನು ನನಸಾಗಿಸಲು ಹೇಗೆಲ್ಲ ಪ್ರಯತ್ನ ಪಡಬಹುದು ಎಂಬುದನ್ನು ಈ ದಂಪತಿ ಮಾಡಿ ತೋರಿಸಿದ್ದಾರೆ.

ಭಾರತದಲ್ಲಿ ಪ್ರವಾಸಕ್ಕೆ ಕ್ಯಾರವಾನ್‌ ಸಂಸ್ಕೃತಿ ಹೊಸದು. ಆದರೂ, ಈ ದಂಪತಿ ಕೊರೋನಾ ಕಾಲಘಟ್ಟದಲ್ಲಿ, ಹೊಟೇಲು, ಲಾಡ್ಜ್‌ ಸಿಗುವುದಿಲ್ಲ ಎಂಬ ಕಾರಣಕ್ಕೆ ತಮ್ಮ ಪ್ರವಾಸಕ್ಕೆ ಇದರಿಂದ ತೊಂದರೆಯಾಗುತ್ತದೆಂಬ ಕಾರಣಕ್ಕೆ ಟೇಂಪೋ ಟ್ರಾವೆಲರ್‌ ಒಂದನ್ನು ಖರೀದಿಸಿ ಅದನ್ನು ಕ್ಯಾರವಾನ್‌ ಆಗಿ ಬದಲಾಯಿಸಿ ತಮ್ಮ ಪ್ರವಾಸದ ಕನಸಿಗೆ ಹೊಸ ಭಾಷ್ಯ ಬರೆದಿದ್ದಾರೆ.

ದೀಪಕ್‌ ಹೇಳುವಂತೆ, ಸುಮಾರು ೨೦ ವರ್ಷಗಳಿಂದ ಪ್ರವಾಸಕ್ಕೆಹೊಂದಿಕೊಂಡಿದ್ದ ನಮಗೆ ಇದ್ದಕ್ಕಿದ್ದಂತೆ ಲಾಕ್‌ಡೌನ್‌ ಘೋಷಿಸಿದಾಗ ಚಿಂತೆಯಾಯಿತು. ಆಗ ಬಂದ ಆಲೋಚನೆಯಿದು. ಟಾಟಾ ಇಂಡಿಕಾದಿಂದ ಟಾಟಾ ಸಫಾರಿಯವರೆಗೆ ಕಾರಿನಲ್ಲೇ ಪ್ರವಾಸ ಮಾಡುತ್ತಿದ್ದ ನಾವು ಕುಟುಂಬ ಬೆಳೆದ ಮೇಲೆ, ಯಾಕೆ ಕ್ಯಾರವಾನ್‌ ಟ್ರೈ ಮಾಡಬಾರದು ಅನಿಸಿತು. ಕೊರೋನಾ ಸಮಯ ಇದಕ್ಕೆ ಪ್ರಶಸ್ತ ಅನಿಸಿತು. ಹಾಗಾಗಿ ಈ ಸಾಹಸಕ್ಕಿಳಿದೆ ಎನ್ನುತ್ತಾರೆ.

ಈಗಾಗಲೇ ಈ ಜೋಡಿ ಲೇಹ್-‌ ಲಡಾಕ್‌, ರಾಜಸ್ಥಾನ, ಗುಜರಾತ್‌ ಉತ್ತರಾಖಂಡಗಳನ್ನು ಈ ಕ್ಯಾರವಾನ್‌ನಲ್ಲಿ ಸುತ್ತಿಕೊಂಡು ಬಂದಿದೆ.

ಉತ್ತರಾಖಂಡದಲ್ಲೇ ಹುಟ್ಟಿ ಬೆಳೆದ ದೀಪಕ್‌ ಹೇಳುವಂತೆ, ಈ ಐಡಿಯಾ ಏನೋ ಇಂಟರೆಸ್ಟಿಂಗ್‌ ಆಗಿ ಕಂಡರೂ ಇದರಲ್ಲಿ ಸಾಕಷ್ಟು ಸವಾಲುಗಳೂ ಇವೆ ಎಂದು ಆಮೇಲೆ ಅರಿವಾಯಿತು. ವೈಟ್‌ ಬೋರ್ಡ್‌ ವಾಹನಕ್ಕೆ ಆರ್‌ಟಿಒನಿಂದ ಅನುಮತಿ ಪಡೆಯುವುದರಿಂದ ಹಿಡಿದು ಸಾಕಷ್ಟು ಕೆಲಸಗಳು ಇದರಲ್ಲಿವೆ. ತೊಂದರೆ ಆಗುವುದು ಖಾಸಗಿ ಬಳಕೆಗೆ ಇಂಥ ವಾಹನವನ್ನು ಬಳಸುತ್ತೇವೆ ಎಂಬುದಕ್ಕೆ ಅನುಮತಿ ಸಿಗುವುದು. ಅಧಿಕಾರಿಗಳಿಗೆ ಈ ವಿಷಯಕ್ಕೆ ಎಂದು ವಿವರಿಸಿ ಹೇಳಿ ಒಪ್ಪಿಸುವುದೇ ದೊಡ್ಡ ತೊಂದರೆಯಾಯ್ತು. ಇದು ವಾಣಿಜ್ಯ ಬಳಕೆಗಲ್ಲ. ನನ್ನ ಕುಟುಂಬದ ಪ್ರವಾಸಕ್ಕಾಗಿ ಮಾತ್ರ ಎಂಬ ವಿವರವನ್ನು ನಾನು ಎಷ್ಟೇ ಹೇಳಿದರೂ ಅನುಮತಿ ನಾನು ಹುಟ್ಟಿದ ನಾಡಾದ ಉತ್ತರಾಖಂಡದಲ್ಲಿ ಪಡೆಯಲು ಸಾಧ್ಯವಾಗಲಿಲ್ಲ. ರಾಜಸ್ಥಾನ, ಉತ್ತರಾಖಂಡ, ಎನ್‌ಸಿಆರ್‌ಗಳಲ್ಲೆಲ್ಲ ಅಲೆದು ಕೊನೆಗೂ ಅಹಮದಾಬಾದ್‌ನಲ್ಲಿ ಅನುಮತಿ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಅವರು ವಿವರಿಸುತ್ತಾರೆ.

ಇದಾದ ಮೇಲೆ ಈ ಇಡೀ ವಾಹನವನ್ನು ಕ್ಯಾರವಾನ್‌ ಆಗಿ ಬದಲಾಯಿಸುವುದೂ ಇನ್ನೊಂದು ಸವಾಲಿನ ಕೆಲಸ. ಎಪ್ರಿಲ್‌ ೨೦೨೧ರಲ್ಲಿ ನಾವು ಫೋರ್ಸ್‌ ಟ್ರಾವೆಲರ್‌ ಖರೀದಿಸಿದೆವು. ಇದರೊಳಗಿದ್ದ ಎಲ್ಲವನ್ನೂ ತೆಗೆದು, ನಮಗೆ ಬೇಕಾದಂತೆ ಪರಿವರ್ತಿಸುವುದೇ ನಮಗಿದ್ದ ಇನ್ನೊಂದು ಸವಾಲು. ಯಾಕೆಂದರೆ ನಮಗೆ ಬೇಕಾದ ವಸ್ತುಗಳು ಭಾರತದಲ್ಲಿ ಸಿಗುತ್ತಿರಲಿಲ್ಲ. ಅದಕ್ಕಾಗಿ ನಾಲ್ಕು ಪಟ್ಟು ಹೆಚ್ಚು ಹಣ ಕೊಟ್ಟು ಯುಎಸ್‌ನಿಂದ ತರಿಸಬೇಕಾಗಿತ್ತು. ಇದರೊಳಗಿನ ಎಸಿಗಾಗಿ ೨ ಲಕ್ಷ ರೂಪಾಯಿ ಖರ್ಚು ಮಾಡಬೇಕಾಯಿತು. ಜೊತೆಗೆ ಕಡಿಮೆ ನೀರು ಬಳಸುವ ಟಾಯ್ಲೆಟ್‌ ಕೂಡಾ ಆಮದು ಮಾಡಿಕೊಂಡೆವು. ಇಷ್ಟೆಲ್ಲಾ ಆದ ಮೇಲೆ ಅದನ್ನು ಕ್ಯಾರವಾನ್‌ ಆಗಿ ಬದಲಾಯಿಸಲು ಪಳಗಿದ ಮಂದಿಯೂ ಇಲ್ಲಿರಲಿಲ್ಲ. ಎಲ್ಲರಿಗೂ ಇದು ಹೊಸದು. ಕೊನೆಗೆ ನಾವು ಇಲ್ಲಿನ ಮಂದಿಗೆ ವಿದೇಶೀ ವಿಡಿಯೋಗಳನ್ನು ತೋರಿಸಿದೆವು. ಅವರೂ ಆಸಕ್ತಿ ವಹಿಸಿ ಹೇಗೆಲ್ಲ ಫಿಟ್‌ ಮಾಡಬೇಕು ಎಂಬ ಬಗ್ಗೆ ವಿಡಿಯೋ ನೋಡಿ ಕಲಿತರು. ಕೊನೆಗೂ ಯಶಸ್ವಿಯಾಗಿ ಈ ಕ್ಯಾರವಾನ್‌ ರೂಪಿಸುವ ಮೂಲಕ ನಮ್ಮ ಕನಸಿನ ವಾಹನ ರೆಡಿಯಾಯಿತು ಎಂದು ತಮ್ಮ ಕ್ಯಾರವಾನ್‌ ಕಥೆಯನ್ನು ಬಿಚ್ಚಿಡುತ್ತಾರೆ ದೀಪಕ್.‌

ಇದನ್ನೂ ಓದಿ | ಡೆಸ್ಟಿನೇಶನ್‌ ವೆಡ್ಡಿಂಗ್‌ | ಟಾಪ್‌ 5 ಐಷಾರಾಮಿ ಮದುವೆಗಳ ತಾಣಗಳು!

ಈ ಕ್ಯಾಂಪರ್‌ವ್ಯಾನ್‌ನಲ್ಲಿ ಒಂದು ಕಿಚನ್‌, ಕೂರಲು ಸೀಟಿರುವ ಜಾಗ, ಒಂದು ಬಾತ್‌ರೂಂ, ನಾಲ್ಕು ಜನ ಮಲಗಬಹುದಾದಷ್ಟು ಎರಡು ದೊಡ್ಡ ಬೆಡ್‌ಗಳು, ಎಸಿ, ಹಾಗೂ ಸಾಮಾನು ಇಡಬಹುದಾದ ಜಾಗ ಇವಿಷ್ಟನ್ನು ಒಳಗೊಂಡಿದೆ. ವಾಹನದ ಮೇಲೆ ಸೋಲಾರ್‌ ಪ್ಯಾನಲ್‌ ಹಾಗೂ ೧೫೦ ಲೀಟರ್‌ ನೀರಿನ ಟ್ಯಾಂಕ್‌ ಕೂಡಾ ಅಳವಡಿಸಲಾಗಿದ್ದು, ಬೇಕೆಂದಾಗ ನೀರು ಹಾಗೂ ವಿದ್ಯುಚ್ಛಕ್ತಿಯನ್ನೂ ಇದು ನೀಡುತ್ತದೆ. ಮಳೆಗಾಲಕ್ಕೆ ಜನರೇಟರ್‌ ಪವರ್‌ ಬ್ಯಾಕಪ್‌ ಕೂಡಾ ಸಹಾಯ ಮಾಡುತ್ತದೆ. ಅಡುಗೆ ಕೋಣೆಯಲ್ಲಿ, ಮೈಕ್ರೋವೇವ್‌, ಗ್ಯಾಸ್‌ನಂತಹ ಸೌಲಭ್ಯಗಳೂ ಇವೆ.

ಈ ವಾಹನ ತಯಾರು ಮಾಡಿಸುವ ಕಾರ್ಯಕ್ಕೆ ಸುಮಾರು ಮೂರು ತಿಂಗಳ ಕಾಲ ತೆಗೆದುಕೊಂಡ ದೀಪಕ್‌ಗೆ ಈ ವಾಹನಕ್ಕೆ ಸುಮಾರು ೧೮ ಲಕ್ಷ ರೂಪಾಯಿಗಳು ಖರ್ಚಾಗಿದೆಯಂತೆ. ಇದನ್ನು ಕ್ಯಾರವಾನ್‌ ಆಗಿ ಬದಲಾಯಿಸಲು ೧೨ ಲಕ್ಷ ರೂಪಾಯಿಗಳು ಬೇಕಾಗಿವೆ ಎನ್ನುತ್ತಾರೆ ಅವರು.

ಕ್ಯಾರವಾನ್‌ ತಯಾರಾದ ಕೂಡಲೇ ಅವರು ಕುಟುಂಬ ಸಮೇತರಾಗಿ ಹೊರಟಿದ್ದು ಲೇಹ್-‌ ಲಡಾಕ್‌ಗೆ. ತನ್ನ ಇಬ್ಬರು ಮಕ್ಕಳು ಹಾಗೂ ಹೆತ್ತವರನ್ನೂ ಕರೆದುಕೊಂಡು ಈ ಪ್ರವಾಸ ಮಾಡಿದ ಅವರು, ಬೇಕೆಂದಲ್ಲಿ ನಿಲ್ಲಿಸಿ, ಅಲ್ಲೇ ಮಲಗಿ ನಿದ್ರಿಸಿ ಎದ್ದು ಹೊರಡುವ ಅಪರೂಪದ ಸುಖವನ್ನು ಅದ್ಭುತವಾಗಿ ಅನುಭವಿಸಿದೆವು. ಹಳ್ಳಿಗಳಲ್ಲಾದರೆ ಬೇಕಾದಲ್ಲಿ ಪಾರ್ಕು ಮಾಡಿ ರಾತ್ರಿ ಉಳಿಯುವುದು ಸುಲಭ. ನಗರದಲ್ಲಿ ಪೇ ಪಾರ್ಕಿಂಗ್‌ಗಳಲ್ಲಿ ಅಥವಾ ಹೊಟೇಲ್‌ ಪಾರ್ಕಿಂಗ್‌ಗಳಲ್ಲೇ ಉಳಿದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ | ವರ್ಕ್‌ ಫ್ರಂ ಮೌಂಟೇನ್:‌ ಇಲ್ಲೆಲ್ಲಾ ಪ್ರವಾಸ ಮಾಡುತ್ತಾ ಕೆಲಸ ಮಾಡಿ!

ಇವರು ೨೫ ದಿನಗಳ ಗುಜರಾತ್‌ ಪ್ರವಾಸವನ್ನೂ ಈ ಕ್ಯಾರವಾನ್‌ನಲ್ಲೇ ಮಾಡಿದ್ದು, ಸುಮಾರು ೫,೦೦೦ ಕಿಮೀ ಪ್ರಯಾಣ ಮಾಡಿದ್ದರು. ದೀಪಕ್‌ ಹಾಗೂ ರುಚಿ ಅವರ ಹಿರಿಯ ಮಗ ಸದ್ಯ ೧೨ನೇ ತರಗತಿಯಲ್ಲಿದ್ದು, ಎರಡನೇ ಮಗ ಒಂಭತ್ತನೇ ತರಗತಿ ಓದುತ್ತಿದ್ದಾನೆ. ಹಾಗಾಗಿ ಮಕ್ಕಳಿಗೆ ಎಲ್ಲ ಪ್ರವಾಸಕ್ಕೂ ಇತ್ತೀಚೆಗೆ ಬರಲಾಗುತ್ತಿಲ್ಲ. ಅವರು ಅವರ ಓದು ಬರೆಹದೆಡೆಗೆ ಗಮನ ಕೊಟ್ಟರೆ ನಾವು ಪ್ರವಾಸ ಮಾಡಿಕೊಂಡು ಬಂದದ್ದೂ ಇದೆ ಎಂದೂ ವಿವರಿಸುತ್ತಾರೆ.

ವೃತ್ತಿ ನಮ್ಮ ಜೇಬು ತುಂಬಿಸುತ್ತದೆ ನಿಜ, ಆದರೆ, ಇಂತಹ ಪ್ರವಾಸಗಳು ನಮಗೆ ಆತ್ಮಸುಖ ನೀಡುತ್ತವೆ ಎನ್ನುವ ಇವರಿಗೆ ಈ ವಾಹನದಲ್ಲಿ ಮೊದಲು ಭಾರತವಿಡೀ ಸುತ್ತುವ ಕನಸಿದೆ. ಅದಾದ ಮೇಲೆ ಏಷ್ಯಾದ ಕೆಲವು ದೇಶಗಳು, ರಷ್ಯಾ, ಯುರೋಪ್‌ಗಳನ್ನೂ ನೋಡಿ ಬರುವ ಕನಸಿದೆ. ಪ್ರವಾಸ ಕೊಡುವ ಜೀವನ ಪಾಠವೇ ಬೇರೆ ಎನ್ನುವ ಇವರು ತಮ್ಮ ಪ್ರವಾಸದ ಅನುಭವಗಳನ್ನು ದಾಖಲಿಸಲು ಯುಟ್ಯೂಬ್‌ ಚಾನಲ್‌ ಕೂಡಾ ಹೊಂದಿದ್ದಾರೆ.

Exit mobile version