ಬೇಸಗೆ ರಜೆ ಎಂದರೆ ಪ್ರವಾಸ ಎಂಬ ನಂಬಿಕೆ- ಆಚರಣೆಯೊಂದು ನಮ್ಮ ಜೀವನದ ಜೊತೆ ಮಿಳಿತವಾದರೂ, ಬೇಸಗೆಯಲ್ಲಿ ಹೋಗಿ ಬಂದ ಪ್ರವಾಸಕ್ಕಿಂತಲೂ ಮೈಮನಕ್ಕೆ ಖುಷಿ ನೀಡುವುದು ಮಳೆಗಾಲದ ಪಯಣಗಳು (Monsoon Drive). ಮಳೆಗಾಲದಲ್ಲಿ ಇಂಥದ್ದೇ ಒಂದು ಜಾಗಕ್ಕೆ ಎಂದು ಹೋಗುವ ಅವಶ್ಯಕತೆಯಿಲ್ಲ. ಹೋಗುವ ಜಾಗಕ್ಕಿಂತ ಕ್ರಮಿಸುವ ಹಾದಿಯ ನೆನಪುಗಳೇ ಇಲ್ಲಿ ನಮಗೆ ಜೀವನ ಪರ್ಯಂತ ಮಧುರಾನುಭೂತಿಯಂತೆ ಇರುತ್ತದೆ. ಅದಕ್ಕಾಗಿಯೇ ಮಳೆಗಾಲಕ್ಕೊಂದು ಪಯಣ (monsoon ride) ಅತ್ಯಗತ್ಯ. ಬೇಸಿಗೆಯಲ್ಲಿ ಬೆಂದ ಮೈಮನವನ್ನು ಜೀವನಪ್ರೀತಿಯೆಡೆಗೆ ಕೊಂಡೊಯ್ಯಲು ಇಂಥದ್ದೊಂದು ಪಯಣ ಸಾಕು. ʻಧೋ..ʼ ಎಂದು ಸುರಿವ ಮಳೆಯಲ್ಲಿ, ಕಿಟಕಿಗೆ ತಲೆಯಾನಿಸಿಕೊಂಡು ʻಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ…ʼ ಎಂದು ಹಾಡುತ್ತಲೋ, ʻಭೀಗೀ ಭೀಗೀ ರಾತೋಂ ಮೇ…ʼ ಅಂತಲೋ ಅಥವಾ ʻರಿಮ್ ಜಿಮ್ ಗಿರೆ ಸಾವನ್..ʼ ಅಂತಲೋ ಹಾಡು ಕೇಳುತ್ತಾ ಜೊತೆಯಾಗಿ ಗುನುಗುತ್ತಾ ಸ್ಟೇರಿಂಗ್ ತಿರುಗಿಸುತ್ತಾ ಡ್ರೈವ್ ಮಾಡುತ್ತಾ ಸಾಗುವುದೇ ಮಜಾ!
ಕರ್ನಾಟಕದೊಳಗೆ ಹಾಗೂ ಹೊರಗೆ ಇಂಥ ರೋಡ್‌ಟ್ರಿಪ್‌ಗಳಿಗೇನೂ ಕೊರತೆಯಿಲ್ಲ. ಮೂಡಿಗೆರೆ, ಶೃಂಗೇರಿ, ಕಳಸದ ಹಾದಿ, ಚಾರ್ಮಾಡಿ ಘಾಟ್ ರಸ್ತೆ, ಕಾರವಾರ, ಮುರುಡೇಶ್ವರದ ಸುತ್ತ, ಶಿರಸಿಯ ಆಸುಪಾಸು, ದಾಂಡೇಲಿಯ ಕಡೆ, ಮಡಿಕೇರಿಯ ತಿರುವುಗಳು ಹೀಗೆ ಕರ್ನಾಟಕದ ತುಂಬ ಮಳೆಗಾಲದಲ್ಲಿ ಆನಂದವಾಗಿ ಡ್ರೈವ್ ಮಾಡಬಹುದಾದ ಸ್ವರ್ಗಸದೃಶ ಹಾದಿಗಳಿವೆ. ಮಳೆಗಾಲದಲ್ಲೊಂದು ಇಂಥದ್ದೇ ಡ್ರೈವ್ ಮಾಡಬೇಕು, ಆ ದಾರಿಯೇ ಸ್ವರ್ಗದ ಹಾಗಿರಬೇಕು ಎಂದು ಬಯಸುವ ರೋಡ್‌ಟ್ರಿಪ್ ಪ್ರೇಮಿಗಳು ಮಳೆಗಾಲದಲ್ಲಿ ಮಾಡಲೇಬೇಕಾದ ಕೆಲವು ರೋಡ್‌ಟ್ರಿಪ್‌ಗಳು ಇಲ್ಲಿವೆ.
1. ಬೆಂಗಳೂರಿಂದ ಸಕಲೇಶಪುರ: ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಸಕಲೇಶಪುರ ಸುತ್ತಮುತ್ತಲ ಜಾಗಗಳಿಗೆ ಡ್ರೈವ್ ಹೋಗುವುದು ಒಂದು ಅದ್ಭುತ ಅನುಭವ. ಶಿರಾಢಿ ಘಾಟ್‌ನಲ್ಲಿ ಮಳೆಯಲ್ಲಿ ಡ್ರೈವ್ ಮಾಡುತ್ತಾ, ಕಾಫಿ ಎಸ್ಟೇಟ್‌ಗಳಲ್ಲಿ ಹನಿ ತೊಟ್ಟಿಕ್ಕುವುದನ್ನು ನೋಡುತ್ತಾ, ಕೆಂಪುಹೊಳೆಯಲ್ಲಿ ನೀರು ಕೆಂಪಾಗಿ ಹರಿಯುವ ಸೊಬಗನ್ನು ಕಣುಂಬಿಕೊಳ್ಳುತ್ತಾ, ಮೋಡಗಳು ಕೈಗೆಟಕುವಂತೆ ಮರಗಳೆಡೆಯಲ್ಲಿ ಸಾಗುವುದನ್ನು ನೋಡುವುದೇ ಸೊಗಸು. ಸಕಲೇಶಪುರದ ಬಳಿಯ ಮಂಜರಾಬಾದ್ ಕೋಟೆಯನ್ನು ಸಿನಿಮಾದಲ್ಲಷ್ಟೇ ಅಲ್ಲ, ಸಿನಿಮಾದಲ್ಲಿ ಕಂಡಂತೆ ಹಸಿರಸಿರಾಗಿ ಕಣ್ತುಂಬಿಕೊಂಡು ನೀವು ವಾಪಾಸಾಗಬಹುದು. ಎರಡು ಮೂರು ದಿನಗಳಿದ್ದರೆ ಸಾಕು, ಈ ಡ್ರೈವ್ ಅದ್ಭುತ ಅನುಭವವಾಗಬಹುದು.
2. ಬೆಂಗಳೂರಿನಿಂದ ಹೋರ್ಸ್ಲೆ ಹಿಲ್ಸ್: ವೀಕೆಂಡ್ ಬಿಟ್ಟರೆ ನಮಗೆ ಪುರುಸೊತ್ತಿಲ್ಲ ಎಂದು ಕೈಚೆಲ್ಲುವ ಜೀವಗಳಿಗೆ ಹೇಳಿ ಮಾಡಿಸಿದ ರೋಡ್‌ಟ್ರಿಪ್ ಇದು. ಆಂದ್ರಪ್ರದೇಶದಲ್ಲಿದ್ದರೂ ಬೆಂಗಳೂರಿನಿಂದ 144 ಕಿಮೀ ದೂರದಲ್ಲಿರುವ ಇದೊಂದು ಚೆಂದನೆಯ ಊರು. ಅಷ್ಟಾಗಿ ಪ್ರವಾಸಿಗರಿಂದ ಕಿಕ್ಕಿರಿಯದ, ಬೆಟ್ದ ತುದಿಯಲ್ಲಿ ನಿಂತರೆ ಚಂದನೆಯ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗ. ಮಳೆಗಾಲದಲ್ಲಿ ಹಸಿರಸಿರಾಗಿ ಕಂಗೊಳಿಸುವ ಇಲ್ಲಿಗೆ ಡ್ರೈವ್ ಮಾಡುವುದು ರಿಲ್ಯಾಕ್ಸಿಂಗ್ ಅನುಭವವಾಗಬಹುದು.
3. ಬೆಂಗಳೂರಿನಿಂದ ಆಗುಂಬೆ, ಕುಂದಾದ್ರಿ: ಮಳೆಗಾಲದಲ್ಲಿ ಆಗುಂಬೆ ನೋಡದಿದ್ದರೆ ಕರ್ನಾಟಕದಲ್ಲಿದ್ದೂ ಏನು ಪ್ರಯೋಜನ. ಜೀವನದಲ್ಲಿ ಒಮ್ಮೆಯಾದರೂ ಆಗುಂಬೆಯನ್ನು, ಆಗುಂಬೆಯ ದಾರಿಯನ್ನು ಅಕ್ಷರಶಃ ಅನುಭವಿಸಬೇಕು ಎಂದರೆ, ಆಗುಂಬೆಯ ಕಡೆಗೆ ಡ್ರೈವ್ ಮಾಡಿ. ಕುಂದಾದ್ರಿ, ಕುಪ್ಪಳ್ಳಿ, ಕೊಲ್ಲೂರು, ವಿಶ್ವವಿಖ್ಯಾತ ಜೋಗ ಜಲಪಾತ, ಶರಾವತಿ ಹಿನ್ನೀರು ಇತ್ಯಾದಿ ಇತ್ಯಾದಿ ಸಾಕಷ್ಟು ತಾಣಗಳು ನಿಮ್ಮನ್ನು ಕರೆಯಬಹುದು. ಈ ಎಲ್ಲ ತಾಣಗಳಿಗೆ ಹೋಗುವುದೇ ಒಂದು ಅನುಭವ.
4. ಬೆಂಗಳೂರಿನಿಂದ ವಾಲ್ಪರೈ: ತಮಿಳುನಾಡಿನ ಕೊಯಂಬತ್ತೂರಿನ ಬಳಿ ಇರುವ ವಾಲ್ಪರೈ ಅದ್ಭುತ ತಾಣ. ಇದಕ್ಕೆ ಹೋಗುವ ರಸ್ತೆಯೂ ಸ್ವರ್ಗದ ಹಾದಿಯೇ. ನಿಮ್ಮ ಬಳಿ ಸುಮಾರು ನಾಲ್ಕೈದು ದಿನವಾದರೂ ಇದ್ದರೆ ಸುಮಾರು 460 ಕಿಮೀ ದೂರದಲ್ಲಿರುವ ವಾಲ್ಪರೈಗೆ ಹೋಗಿ ಬರಬಹುದು. ಹಸಿರು ಹಸಿರಾದ ದಟ್ಟ ಕಾನನ, ಮಂಜು ಕವಿದ ಬೆಟ್ಟಗಳು, ಚಹಾ ತೋಟಗಳು ಕಣ್ಣಿಗೆ ಹಬ್ಬ.
5. ಮಾಲ್ಶೇಜ್ ಘಾಟ್, ಮಹಾರಾಷ್ಟ್ರ: ಮಳೆ ಪ್ರೇಮಿಯಾಗಿದ್ದುಕೊಂಡು ಡ್ರೈವಿಂಗ್ ಪ್ರಿಯರೂ ನೀವಾಗಿದ್ದರೆ ನಿಮ್ಮ ಬಳಿ ಒಂದಿಷ್ಟು ದಿನಗಳೂ ಇವೆ ಎಂದಾದಲ್ಲಿ ಮರೆಯಲೇಬಾರದ ಜಾಗವೊಂದಿದೆ. ಅದು ಮಾಲ್ಶೇಜ್ ಘಾಟ್. ಮಳೆಗಾಲದಲ್ಲಿ ಮಾಲ್ಶೇಜ್ ಘಾಟ್ ಅಕ್ಷರಶಃ ಸ್ವರ್ಗವಾಗಿಬಿಡುತ್ತದೆ. ಎಲ್ಲಿ ನೋಡಿದರೂ ಸುರಿವ ಜಲಪಾತಗಳು, ಬೆಟ್ಟ ಗುಡ್ಡಗಳೆಲ್ಲ ಹಸಿರಾಗಿ, ಮಂಜಿನೊಂದಿಗೆ ಕಣ್ಣಮುಚ್ಚಾಲೆಯಾಡುವ ಇಲ್ಲಿ ಪ್ರತಿಯೊಬ್ಬ ಭಾವಜೀವಿಯೂ ಕವಿಯಾಗಬಹುದು. ಮುಂಬೈಯಿಂದ 126 ಕಿಮೀ ದೂರದಲ್ಲಿರುವ ಇದು ಬೆಂಗಳೂರಿನಿಂದ 940 ಕಿಮೀ ದೂರದಲ್ಲಿದೆ. ಹಾಗಾಗಿ ಸಮಯ ಹಾಗೂ ಕಸುವು ಎರಡೂ ಇದ್ದವರು ಇದಕ್ಕೂ ರೋಡ್ ಟ್ರಿಪ್ ಮಾಡಬಹುದು!
ಇದನ್ನೂ ಓದಿ: Home Remedies For Monsoon: ಮಳೆಗಾಲದ ಕಿರಿಕಿರಿಗೆ ಇಲ್ಲಿದೆ ಉಪಯುಕ್ತ ಮನೆಮದ್ದು