Site icon Vistara News

Tourist Places | ಪಾರ್ಟಿಪ್ರಿಯರೇ, ಹೊಸವರ್ಷ ರಂಗೇರಲು ಈ ನಗರಗಳೂ ಪ್ರವಾಸಕ್ಕೆ ಬೆಸ್ಟ್‌!

Tourist Places

ಬೆಂಗಳೂರು : ಹೊಸವರ್ಷ ಎಂದರೆ ನಗರದ ಮನಸ್ಸುಗಳಿಗೆ ನೆನಪಾಗುವುದು ಹಳೆವರ್ಷಕ್ಕೆ ಟಾಟಾ ಹೇಳಿ ಹೊಸವರ್ಷವನ್ನು ಮಸ್ತಾಗಿ ಸ್ವಾಗತಿಸುವ ಪಾರ್ಟಿಗಳು. ಬೆಂಗಳೂರು ಸೇರಿದಂತೆ ಭಾರತದ ಎಲ್ಲ ನಗರಗಳೂ ಹೊಸ ವರ್ಷಕ್ಕೆ ರಂಗೇರುತ್ತದೆ. ಪ್ರವಾಸಿ ತಾಣಗಳು ಕಿಕ್ಕಿರಿದು ತುಂಬುತ್ತವೆ. ಪಾರ್ಟಿ ಹಮ್ಮಿಕೊಂಡು ಗ್ರಾಹಕರನ್ನು ಕರೆಯುವ ನೈಟ್‌ಕ್ಲಬ್ಬು, ಐಷಾರಾಮಿ ಹೊಟೇಲುಗಳು ಕಿಕ್ಕಿರಿದು ತುಂಬುತ್ತವೆ. ರೆಸ್ಟೋರೆಂಟುಗಳಲ್ಲಿ ಕೂರಲು ಜಾಗ ಇಲ್ಲದಂತಾಗುತ್ತದೆ. ಒಟ್ಟಾರೆ ಹೊಸ ವರ್ಷದ (Tourist Places ) ಸಂಭ್ರಮಕ್ಕೆ ಜೊತೆಯಾಗಲು ಎಲ್ಲರಿಗೂ ಎಲ್ಲಿಲ್ಲದ ಹುಮ್ಮಸ್ಸು. ಆ ನೆಪದಲ್ಲಾದರೂ ಒಂದಿಷ್ಟು ಗೆಳೆಯರೊಡನೆ ಸೇರಿ ಖುಷಿ ಪಡುವ ಆಸೆ. ಮತ್ತೆ ಎಂದಿನಂತೆ ಇದೆಯಲ್ಲ, ಕೆಲಸ, ಒತ್ತಡದ ಜೀವನ.

ಇಂಥ ಸಂದರ್ಭದಲ್ಲಿ ಈಗಾಗಲೇ ಸಾಕಷ್ಟು ಜನರ ಬಳಿ ಎಲ್ಲಿ, ಹೇಗೆ ಹೊಸವರ್ಷ ಆಚರಿಸಿಕೊಳ್ಳಬೇಕೆಂಬ ಪ್ಲಾನು ಸಿದ್ದವಾಗಿ ಕೂತಿರುತ್ತದೆ. ಇನ್ನೂ ಒಂದಿಷ್ಟು ಜನ ಕೊನೆಯ ಕ್ಷಣದ ಯೋಜನೆಯ ತಯಾರಿಯಲ್ಲಿರುತ್ತಾರೆ. ಹೊಸ ವರ್ಷ, ಕ್ರಿಸ್‌ಮಸ್‌ ಎಂದು ಒಂದಿಷ್ಟು ರಜೆಯನ್ನು ಒಟ್ಟು ಮಾಡಿ ಪ್ರವಾಸಕ್ಕೆ ಸಿದ್ಧವಾದವರೆಲ್ಲ ಬ್ಯಾಗು ಹಿಡಿದು ಬೆಟ್ಟದ ಬುಡದಲ್ಲೋ, ನದೀ ತೀರದಲ್ಲೋ ತಲುಪಿ ಟೆಂಟ್‌ ಹಾಕಿಯಾಗಿರುತ್ತದೆ. ಆದರೆ, ಉಳಿದವರ ಕತೆ? ಮಹಾನಗರಗಳು ಇದ್ದೇ ಇವೆಯಲ್ಲ ಪಾರ್ಟಿ ಮಾಡಲು!

ಹೊಸ ನಗರವೊಂದನ್ನು ನೋಡಲು ಹೊಸ ವರ್ಷ ಸಕಾಲ. ಆ ಸಂದರ್ಭ ನಗರ ಹೊಸವರ್ಷಕ್ಕೆ ಹೊಸ ಹುಮ್ಮಸ್ಸಿನಿಂದ ತಯಾರಾಗಿ ನಿಂತಿರುತ್ತದೆ. ಪಾರ್ಟಿ, ನೈಟ್‌ ಕ್ಲಬ್ಬುಗಳನ್ನುಇಷ್ಟಪಡುವವರಿಗೆ ಒಂದಿಷ್ಟು ಹೊಸ ಜಾಗಗಳ ಪರಿಚಯವಾಗುತ್ತದೆ. ಹೊಸ ಜನರ ಪರಿಚಯವೂ ಕೂಡಾ. ಹಾಗಾಗಿ ಹೊಸವರ್ಷದ ಆಚರಣೆಗೆ ನಮ್ಮ ಭಾರತದೊಳಗೇ ಇರುವ ಯಾವ ನಗರಗಳಿಗೆ ಹೋಗಬಹುದು ನೋಡೋಣ.

ಇದನ್ನೂ ಓದಿ | Road Accident | ಕೆಎಸ್‌ಆರ್‌ಟಿಸಿ ಬಸ್‌ಗೆ ಶಾಲಾ ಪ್ರವಾಸದ ಬಸ್‌ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ಗೋವಾ
ಪಾರ್ಟಿ ಮಾಡಲು ಗೋವಾ ಹೊರತು ಪಡಿಸಿದರೆ ಇನ್ನೊಂದು ಜಾಗ ಎಲ್ಲಿದೆ ಹೇಳಿ. ಗೋವಾ ಎಂದರೆ ಪಾರ್ಟಿ, ಪಾರ್ಟಿ ಎಂದರೆ ಗೋವಾ ಎಂಬಷ್ಟು ಬೆಸೆದುಕೊಂಡ ಪ್ರವಾಸೀ ತಾಣವಿದು. ಇಲ್ಲಿ ಬೇಕಾದಷ್ಟು ಸಿಗುವ ನೈಟ್‌ಕ್ಲಬ್ಬುಗಳು, ಕ್ಯಾಸಿನೋಗಳು, ಪಾರ್ಟಿ ಪ್ಯಾಕೇಜುಗಳು, ಬೀಚ್‌ ಪಾರ್ಟಿಗಳು ಎಲ್ಲವೂ ಇಲ್ಲಿ ಸಾಕಷ್ಟು ಇವೆ. ಹೊಸವರ್ಷಕ್ಕೆಂದೇ ಸಜ್ಜಾದ ಬೀಚ್‌ ಬದಿಯ ಕಾರ್ಯಕ್ರಮಗಳೂ ಇವೆ. ಮನಸ್ಸು ಮಾಡಿದರೆ, ಈಗಿಂದೀಗಲೇ ಗೋವಾಕ್ಕೆ ಹೊರಟು ನಿಲ್ಲಬಹುದು!

ಗೋಕರ್ಣ
ನಮ್ಮದೇ ರಾಜ್ಯದಲ್ಲಿರುವ ಗೋಕರ್ಣ ಕೂಡಾ ಹೊಸವರ್ಷಕ್ಕೆ ಹೇಳಿ ಮಾಡಿಸಿದ ಜಾಗ. ಪ್ರತಿವರ್ಷವೂ ಇಲ್ಲಿ ಹೊಸವರ್ಷಕ್ಕೆ ಗೋಕರ್ಣ ಮ್ಯೂಸಿಕ್‌ ಫೆಸ್ಟಿವಲ್‌ ಕೂಡಾ ನಡೆಯುತ್ತದೆ. ಡಿಜೆ, ಬೀಚ್‌ಬದಿಯ ಪಾರ್ಟಿಗಳ ಆಸೆಯಿಂದ ಬಂದವರಿಗೇನೂ ಗೋಕರ್ಣ ಮೋಸ ಮಾಡುವುದಿಲ್ಲ. ಡಿಸೆಂಬರ್‌ ೩೧ರ ಬೆಳಗಿನಿಂದಲೇ ಆರಂಭವಾಗುವ ಮ್ಯೂಸಿಕ್‌ ಹಬ್ಬ ಜನವರಿ ಒಂದರ ಬೆಳಗಿನ ಜಾವದವರೆಗೂ ನಡೆಯುತ್ತದೆ. ಇದಕ್ಕೆ ಭಾರೀ ದರದ ಟಿಕೆಟ್‌ಗಳೂ ಇವೆ.

ದೆಹಲಿ/ಎನ್‌ಸಿಆರ
ದೆಹಲಿಯ ಖಾನ್‌ ಮಾರ್ಕೆಟ್‌ನಿಂದ ಹಿಡಿದು ಗುರುಗ್ರಾಮದ ಸೈಬರ್‌ಹಬ್‌ವರೆಗೂ ಪಾರ್ಟಿ ಮಾಡದ ಜಾಗವೇ ಇಲ್ಲ. ದೆಹಲಿಯ ಮಂದಿಯ ರಕ್ತದಲ್ಲೇ ಪಾರ್ಟಿ ಇದೆ. ಕುಣಿತ ಇದೆ. ಹೊಸವರ್ಷ ಬಂದರೆ ಸಾಕು, ಎಲ್ಲರಲ್ಲೂ ಜೋಶ್‌ ಉಕ್ಕುತ್ತದೆ. ಹಾಗಾಗಿಯೇ, ದೆಹಲಿಯಲ್ಲಿ ರಂಗೇರುವ ಹೊಸವರ್ಷವನ್ನು ಒಮ್ಮೆಯಾದರೂ ನೋಡಬೇಕು. ಹೇಳಿಕೇಳಿ ಚಳಿಗಾಲದ ಸಮಯ, ಇದು ಇನ್ನೂ ಕಳೆಗಟ್ಟಲು ಬೇರೆಂತಹ ಕಾಲ ಬೇಕು ಹೇಳಿ. ಮೈಬಿಸಿಯೇರಲು, ಎಷ್ಟು ಚಳಿಯಿದ್ದರೂ ನಗರದ ತುಂಬ ನಡೆಯುವ ಪಾರ್ಟಿಗಳೇ ಸಾಕು ಬಿಡಿ!

ಮುಂಬೈ
ಯಾವ ನರದ ಕತೆಯನ್ನು ಬಿಟ್ಟರೂ ಮುಂಬೈಯ ಮಾಯೆಯನ್ನು ಬಿಡಲಾದೀತೇ ಹೇಳಿ! ಯಾವತ್ತೂ ನಿದ್ರೆ ಮಾಡದ ನಗರ ಎಂಬ ಹಣೆಪಟ್ಟಿ ಹೊತ್ತ ನಗರ ಹೊಸವರ್ಷದ ಜೋಶ್‌ಗೆ ನಿದ್ದೆ ಮಾಡೀತೇ ಹೇಳಿ! ಇಲ್ಲಿ ನಡೆಯುವುದುದ ಏನಿದ್ದರೂ ಬಾಲಿವುಡ್‌ ಜಗತ್ತಿನ ದಿಗ್ಗಜರ ಪಾರ್ಟಿಗಳು, ಐಷಾರಾಮಿ ಸೆಲೆಬ್ರೇಷನ್ನುಗಳು! ದೊಡ್ಡ ದೊಡ್ಡ ಹೊಟೇಲುಗಳಲ್ಲಿ ನಡೆವ ಪಾರ್ಟಿಗಳಲ್ಲಿ ಮೊದಲೇ ಟಿಕೆಟ್‌ ಖರೀದಿಸಿ ಬುಕ್‌ ಮಾಡಿಕೊಂಡಿದ್ದರೆ, ಖಂಡಿತವಾಗಿಯೂ ನಟನಟಿಯರ ದರ್ಶನವಾಗಲಿಕ್ಕೂ ಸಾಕು! ಇಲ್ಲದಿದ್ದರೇನಂತೆ, ಮುಂಬೈ ಸಾಮಾನ್ಯರಿಗೂ ಸ್ವರ್ಗವೇ. ಬೀದಿಯಲ್ಲಿ ಅಲೆಯುತ್ತಾ ವಡಾಪಾವ್‌ ತಿನ್ನುತ್ತಾ ಸಮುದ್ರ ತೀರದಲ್ಲಿ ಗೆಳೆಯರ ಜೊತೆಗೆ ತಿರುಗಾಡಿ ಬಂದರೂ ಹೊಸವರ್ಷದಲ್ಲಿ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದʼ ನಿಜಕ್ಕೂ ಆದೀತು!

ಬೆಂಗಳೂರು
ಎಲ್ಲಿಗೂ ಹೋಗಲು ಸಮಯವಿಲ್ಲ ಅಂತೀರಾ ಹೋಗಬೇಡಿ. ನೀವೇ ಇರುವ ಅಥವಾ ನಿಮ್ಮ ಪಕ್ಕದಲ್ಲೇ ಇರುವ ಬೆಂಗಳೂರಿಗಿಂದ ಬೆಸ್ಟ್‌ ನಗರ ಬೇಕೇ ಪಾರ್ಟಿ ಮಾಡಲು. ಕಣ್ಣು ಮುಚ್ಚಿ ಬೆಂಗಳೂರಿನ ತುಂಬೆಲ್ಲಾ ಇರುವ ಐಷಾರಾಮಿ ಹೋಟೇಲುಗಳು ಸಾಕಷ್ಟು ಪಾರ್ಟಿಗಳು ನಡೆಯುತ್ತವೆ. ಯಾವುದಾದರೊಂದಕ್ಕೆ ಕುಟುಂಬ ಸಮೇತವೋ, ಗೆಳೆಯರೊಡನೆಯೋ ಬುಕ್‌ ಮಾಡಿಬಹುದು. ನಿಮ್ಮದೇ ನಗರದ ಹೊಸವರ್ಷಕ್ಕೆ ರೂಪಾಂತರಗೊಳ್ಳುವುದನ್ನು ನೋಡಿ ಅನುಭವಿಸಬಹುದು. ಇದೆಲ್ಲಾ ಖರ್ಚಿನ ಬಾಬ್ತು ಅನಿಸಿದರೆ, ನೀವೇ ಒಂದಿಷ್ಟು ಗೆಳೆಯರು ಸೇರಿ ಪಾರ್ಟಿ ಮಾಡಿ. ಯಾವುದೂ ಬೇಡ ಅಂತಿದ್ದರೆ, ಹೊದ್ದು ಮಲಗಿ ಗಡದ್ದಾಗಿ ನಿದ್ದೆ ಮಾಡಿ. ಅಷ್ಟೇ! ಎದ್ದಾಗ ಚಂದದ ರಾತ್ರಿ ಕಳೆದ ಸುಖವಿದೆಯಲ್ಲಾ ಅದಷ್ಟೇ ಮುಖ್ಯ. ಬದುಕು ಸಿಂಪಲ್‌!

ಇದನ್ನೂ ಓದಿ | Amit shah | ಇಂದಿನಿಂದ 3 ದಿನ ಅಮಿತ್ ಶಾ ರಾಜ್ಯ ಪ್ರವಾಸ, ಎಲ್ಲಿಗೆ ಭೇಟಿ, ಏನೇನು ಚರ್ಚೆ?

Exit mobile version