ಸಮುದ್ರ ತೀರಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಆದರೆ ಬಹಳಷ್ಟು ಸಾರಿ ಸಮುದ್ರ ತೀರಗಳಲ್ಲಿ ಅಲೆದಾಡಲು ಹೊರಟರೆ ಸುತ್ತಮುತ್ತ ಕಸದ ರಾಶಿ, ದುರ್ನಾತ ಬೀರುವ ಮರಳ ದಂಡೆಗಳು ಸುಖಕ್ಕಿಂತ ತೊಂದರೆ ಅನುಭವಿಸುವುದೇ ಹೆಚ್ಚು. ಸ್ವಚ್ಛವಾಗಿರುವ ಸಮುದ್ರ ತೀರಗಳನ್ನು ಭಾರತದಲ್ಲಿ ಹುಡುಕುವುದು (beach tourism) ಕಷ್ಟ ಅನಿಸಿರಬಹುದು. ಪೋಸ್ಟರಿನ ಚಿತ್ರಗಳಂತೆ ಕಾಣುವ ನೀಲಿ ಹಸಿರು ಸಮುದ್ರ ತೀರಗಳನ್ನು ನೋಡಬೇಕೆಂದರೆ ವಿದೇಶಕ್ಕೇ ಹೋಗಬೇಕು ಎಂಬ ಕಲ್ಪನೆ ಬಹಳಷ್ಟು ಮಂದಿಗಿದೆ. ಯಾಕೆಂದರೆ, ಅಂಥಾ ಚಂದನೆಯ ನೀಲಿಹಸಿರು ಸಮುದ್ರ ತೀರಗಳು ಭಾರತದಲ್ಲಿ ಸಿಗುವುದು ಅತ್ಯಪೂರ್ವ. ಆದರೂ, ಹುಡುಕಿದರೆ, ಒಂದಿಷ್ಟು ಮಾಹಿತಿ ಕೆದಕಿದರೆ, ನಮ್ಮ ದೇಶದಲ್ಲೂ ಸುಂದರ, ಶಾಂತವಾಗಿರುವ ಪೋಸ್ಟರ್ ಪರ್ಫೆಕ್ಟ್ ಎನಿಸುವ ಕಡಲ ತೀರಗಳೂ ಇವೆ. ಈ ಕೆಳಗಿನ 12 ಕಡಲ ತೀರಗಳಿಗೆ ಅಂಥ ಮಾನ್ಯತೆಯಾದ ಬ್ಲೂ ಸರ್ಟಿಫಿಕೇಶನ್ ಕೂಡಾ ದೊರಕಿದೆ. ಹಾಗಾದರೆ, ಆ ಸಮುದ್ರ ತೀರಗಳ್ಯಾವುವು ಎಂಬುದನ್ನು ನೋಡೋಣ.
1. ಘೋಗ್ಲಾ, ದಿಯು: ಎಲ್ಲ ಮರೆತು ದಂಡೆಗಪ್ಪಳಿಸುವ ಅಲೆಗಳನ್ನೇ ಕೂತು ನೋಡುತ್ತಿರಬೇಕು, ಯಾರ ತೊಂದರೆಯೂ ಬೇಡ ಎಂದೆನಿಸುವ ಜೀವಗಳಿಗಿದು ಹೇಳಿ ಮಾಡಿಸಿದ ಬೀಚ್. ಶಾಂತ ಸುಂದರ ಸ್ವಚ್ಛ ಸಮುದ್ರ ತೀರವೆಂದರೆ ಇದು. ನೀವು ಕೊಂಚ ಸಾಹಸೀಪ್ರಿಯರಾಗಿದ್ದರೆ, ಇಲ್ಲಿ ಬನಾನಾ ಬೋಟ್‌ನಿಂದ ಹಿಡಿದು ಪಾರಾಸೈಲಿಂಗ್‌ವರೆಗೂ ಹಲವಾರು ಚಟುವಟಿಕೆಗಳನ್ನಿಲ್ಲಿ ಟ್ರೈ ಮಾಡಬಹುದು.
2. ಶಿವರಾಜಪುರ, ದ್ವಾರಕಾ, ಗುಜರಾತ್: ಗುಜರಾತಿನಲ್ಲಿರುವ ಕೃಷ್ಣನೂರು ದ್ವಾರಕೆಗೆ ಹೋಗುವ ಮನಸ್ಸಾಗಿದ್ದರೆ ಚಂದದೊಂದು ಸಮುದ್ರ ತೀರದಲ್ಲಿ ಒಮ್ಮೆ ಕೂತು ಕೃಷ್ಣನನ್ನು ನೆನೆಯಬೇಕೆನ್ನಿಸಿದರೆ, ಶಿವರಾಜಪುರದ ಬೀಚಿಗೊಮ್ಮೆ ಹೋಗಬೇಕು. ಇದು ರುಕ್ಮಿಣಿ ಮಂದಿರದಿಂದ ೧೫ ನಿಮಿಷ ಉತ್ತರಕ್ಕೆ ಪ್ರಯಾಣಿಸಿದರೆ ಸಿಗುತ್ತದೆ. ಮೆತ್ತನೆಯ ಮರಳು, ಚಂದನೆಯ ಗಾಢ ನೀಲಿ ಕಡಲು, ಸ್ವಚ್ಛ ಪರಿಸರ, ಒಂದು ಲೈಟ್‌ಹೌಸ್, ಕಲ್ಲು ಬಂಡೆಗಳು ʻಆಹಾ, ಇದಷ್ಟೇ ಬೇಕಿತ್ತುʼ ಎನಿಸುವಂತೆ ಮಾಡುತ್ತದೆ.
3. ರಾಧಾನಗರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: ಅಂಡಮಾನಿನ ಹ್ಯಾವ್ಲಾಕ್ ದ್ವೀಪದ ರಾಧಾನಗರ ಬೀಚ್ ಜಗತ್ತಿನ ಅತ್ಯಂತ ಸುಂದರ ಕಡಲ ಕಿನಾರೆಗಳ ಪೈಕಿ ೧೬ನೇ ಸ್ಥಾನದಲ್ಲಿದೆ. ಏಷ್ಯಾದ ಅತ್ಯಂತ ಸುಂದರ ಬೀಚ್‌ಗಳಲ್ಲಿ ಇದೂ ಒಂದು. ಪೋಸ್ಟ್‌ಕಾರ್ಡ್ ಚಿತ್ರದಲ್ಲಿರುವ ನಮ್ಮ ಕನಸಿನಲ್ಲಿ ಬಂದ ಚೆಂದನೆಯ ಹಸಿರು ಬಣ್ಣದ ಸ್ಪಟಿಕ ಶುದ್ಧ ನೀರಿನ, ʻಆಹಾʼ ಎನಿಸುವ ಮಧುರಾನುಭೂತಿ ನೀಡುವ ಸಮುದ್ರ ತೀರವಿದು. ಜಗತ್ಪ್ರಸಿದ್ಧ ಕಡಲತೀರವಾದರೂ ಈ ತೀರದ ಸುತ್ತಲೂ ಇರುವ ಮಳೆಕಾಡುಗಳು ಈ ಪರಿಸರವನ್ನೂ ಇನ್ನೂ ರಮ್ಯವಾಗಿಸಿ, ಹೊಸ ಜೋಡಿಗಳಿಗೆ ಬೆಸ್ಟ್ ಎನಿಸುವ ಹನಿಮೂನ್ ತಾಣವಾಗಿಸಿರುವುದು ಸುಳ್ಳಲ್ಲ. ಸಾಹಸೀಪ್ರಿಯರಿಗೂ ಹೇಳಿ ಮಾಡಿಸಿದ ಚಟುವಟಿಕೆಗಳು ಇಲ್ಲಿ ಲಭ್ಯ.
4. ಪಡುಬಿದ್ರಿ, ಕರ್ನಾಟಕ: ಗಾಢ ನೀಲಿ ಬಣ್ಣದ ಚೆಂದನೆಯ ಬೀಚ್ ಇದು. ನಮ್ಮದೇ ರಾಜ್ಯದ ಉಡುಪಿ ಪಡುಬಿದ್ರಿಯ ಈ ಬೀಚ್ ಅಷ್ಟಾಗಿ ಜನಜಂಗುಳಿಯಿಲ್ಲದ, ಶಾಂತವಾದ, ಎಲ್ಲವೂ ಅಚ್ಚುಕಟ್ಟಾಗಿ ಇರುವ ಸಮುದ್ರ ತೀರ.
5. ಕಾಸರ್ಕೋಡ್, ಕರ್ನಾಟಕ: ಚಂದನೆಯ ಗಾಳಿ ಮರದ ತೋಪಿನ ಸಮುದ್ರ ತೀರವಾಗಿರುವ ಇದು ಇರುವುದು ನಮ್ಮ ರಾಜ್ಯದ ಹೊನ್ನಾವರದ ಬಳಿ. ಇಲ್ಲಿರುವ ಲೈಟ್‌ಹೌಸ್, ನಡೆಯಬೇಕೆನಿಸಿದಷ್ಟೂ ನಡೆಯಲು ಮರಳ ತೀರ, ಬೋಟಿಂಗ್, ಮಕ್ಕಳಿಗಾಗಿ ಪಾರ್ಕ್ ಹೀಗೆ ಸಮುದ್ರ ತೀರವೊಂದರಲ್ಲಿ ಎಲ್ಲ ವಯಸ್ಸಿನವರು ಬಯಸುವ ಎಲ್ಲವೂ ಇಲ್ಲಿದೆ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
6. ಋಷಿಕೊಂಡ, ಆಂಧ್ರಪ್ರದೇಶ: ಚಂದನೆಯ ಹಸಿರರಾಶಿಯ, ಬೆಟ್ಟಗುಡ್ಡಗಳ ದೃಶ್ಯಗಳನ್ನು ಸಮುದ್ರ ತೀರದಿಂದಲೂ ಕಣ್ತುಂಬಿಕೊಳ್ಳಬಹುದೆಂದರೆ ಅದಕ್ಕೆ ಋಷಿಕೊಂಡಕ್ಕೆ ಬರಬೇಕು. ಇದು ವಿಶಾಖಪಟ್ಟಣದ ಚಂದನೆಯ ಸಮುದ್ರ ತೀರ. ವಾಟರ್ ಸ್ಕೀಯಿಂಗ್, ವಿಂಡ್ ಸರ್ಫಿಂಗ್, ಈಜು ಮತ್ತಿತರ ಸಾಹಸೀಕ್ರೀಡೆಗಳನ್ನೂ ಇಲ್ಲಿ ಟ್ರೈ ಮಾಡಬಹುದು. ದಕ್ಷಿಣ ಭಾರತದ ಅದ್ಭುತ ಬೀಚ್‌ಗಳಲ್ಲಿ ಇದೂ ಒಂದು.
ಇನ್ನೂ ಆರು ಬೀಚ್‌ಗಳ ವಿವರ ಮುಂದಿನ ಭಾಗದಲ್ಲಿ