ಸಾಹಸದಲ್ಲಿ ಆಸಕ್ತಿ ಇರುವ ಮಂದಿಗೆ, ಸಾಹಸೀ ಪ್ರವಾಸಗಳನ್ನು ಮಾಡುವ ಬಯಕೆಯುಳ್ಳ ಮಂದಿಗೆ ಯಾವತ್ತಿಗೂ ಸೆಳೆಯುವುದು ಬೈಕ್ ರೈಡ್. ಅದರಲ್ಲೂ, ಅತ್ಯಂತ ಅಪಾಯಕಾರೀ ರಸ್ತೆಗಳಲ್ಲಿ, ಎತ್ತರೆತ್ತರ ಪರ್ವತಗಳಲ್ಲಿ ಹಾವಿನಂತೆ ತೆವಳುವ ರಸ್ತೆಗಳಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿ ಜಾಗ ನೋಡಿ ಬರುವ ರೋಮಾಂಚಕಾರೀ ಪ್ರವಾಸದ ಕಲ್ಪನೆ ಮಾಡಿದೊಡನೆಯೇ ಮೈ ನವಿರೇಳುತ್ತದೆ. ಇಲ್ಲಿ ಹೋಗಿ ತಲುಪುವ ಜಾಗ ಅದ್ಭುತವಾಗಿರುವುದಕ್ಕಿಂತಲೂ ಹೋಗಿ ತಲುಪಿದ ರಸ್ತೆಯೇ ನೀಡುವ ಅನುಭವ ಬಹಳ ದೊಡ್ಡದು. ಇಂತಹ ರೋಮಾಂಚಕಾರೀ, ಅಷ್ಟೇ ಅಪಾಯಕಾರೀ ರಸ್ತೆಗಳು ಭಾರತದಲ್ಲೇನೂ ಕಡಿಮೆ ಸಂಖ್ಯೆಯಲ್ಲೇನಿಲ್ಲ. ಭಾರತದ ಇಂತಹ ದುರ್ಗಮ ರಸ್ತೆಗಳಲ್ಲಿ ವಾಹನ ಚಲಾಯಿಸಲೆಂದೇ ಪ್ರವಾಸೀ ಪ್ರಿಯರು ನಮ್ಮ ದೇಶಕ್ಕೆ ಬರುತ್ತಾರೆ. ಇಲ್ಲಿನ ಅನುಭವ ಮೊಗೆದುಕೊಂಡು ಹೋಗುತ್ತಾರೆ. ಅಂತಹ ಅತ್ಯಂತ ಅಪಾಯಕಾರಿ ರಸ್ತೆ ಮಾರ್ಗಗಳ ವಿವರ ಇಲ್ಲಿದೆ. ಗುಂಡಿಗೆ ಗಟ್ಟಿ ಇರುವ ಪ್ರವಾಸೀ ಪ್ರಿಯರು ಬದುಕಿನಲ್ಲೊಮ್ಮೆ ಪ್ರಯಾಣ ಮಾಡಲೇಬೇಕಾದ ರಸ್ತೆಗಳಿವು.
೧. ಕಿಶ್ತವಾರ್ ಕೈಲಾಶ್ ರಸ್ತೆ: ಜಮ್ಮು ಹಾಗೂ ಕಾಶ್ಮೀರದ ಕಿಶ್ತವಾರ್ ಜಿಲ್ಲೆಯಲ್ಲಿರುವ ಈ ರಸ್ತೆ ಭಾರತದ ಅತ್ಯಂತ ದುರ್ಗಮ ರಸ್ತೆಗಳಲ್ಲೊಂದು. ಸುಮಾರು ನೂರು ಕಿಮೀಗಳಿಗೂ ಹೆಚ್ಚು ಜಾಗ ಯಾವುದೇ ತಡೆಗೋಡೆಯೂ ಇಲ್ಲದೆ ಅತ್ಯಂತ ಸಪೂರವಾದ ರಸ್ತೆ. ಒಂದೇ ವಾಹನ ಒಮ್ಮೆ ಹೋಗಬಹುದಾದ, ತೆವಳಿಕೊಂಡೇ ಚಲಾಯಿಸುವ ಅನುಭವ ನೀಡುವ ರೋಮಾಂಚಕ ತಿರುವುಗಳ, ಸೀಟಿನ ತುದಿಯಲ್ಲಿ ನಮ್ಮನ್ನು ಕುಳ್ಳಿರಿಸುವ ತಾಕತ್ತು ಇರುವ ಮಾರ್ಗವಿದು. ಇಂತಹ ಸಾಹಸಗಳನ್ನೆಲ್ಲ ಮಾಡಿದರಷ್ಟೇ ಜೀವನ ಎಂಬ ಸಿದ್ಧಾಂತ ನಂಬುವ ಅನುಭವಿ ಡ್ರೈವರುಗಳಿಗಷ್ಟೇ ಈ ದಾರಿ!
೨. ಖರ್ದುಂಗ್ಲಾ ಪಾಸ್: ಭಾರತ ಮತ್ತು ಚೀನಾದ ಸಿಲ್ಕ್ ರೂಟ್ ಎಂದೇ ಪ್ರಸಿದ್ಧವಾದ ಖರ್ದುಂಗ್ಲಾ ರಸ್ತೆ ಮೈಜುಂ ಎನಿಸುವ ಪ್ರಯಾಣದ ಅನುಭವ ನೀಡಬಲ್ಲುದು. ಬೈಕ್ ರೈಡಿಂಗ್‌ನಲ್ಲಿ ಆಸ್ತಿ ಇರುವ ಸಾಹಸೀ ಮನೋಭಾವದ ಮಂದಿ ಜೀವನದಲ್ಲೊಮ್ಮೆ ಪಡೆಯಲೇಬೇಕಾದ ಅನುಭವವಿದು. ಇದು ಲಡಾಕ್‌ನಿಂದ ನುಬ್ರಾ ಕಣಿವೆಗೆ ಪ್ರವೇಶ ಒದಗಿಸುವ ಮಾರ್ಗ. ಅಕ್ಟೋಬರ್ ತಿಂಗಳಿಂದ ಮೇ ತಿಂಗಳವರೆಗೆ ಇದು ಹಿಮದಿಂದ ಮುಚ್ಚಿಹೋಗುವ ದಾರಿ.
೩. ಕಿನೌರ್ ರಸ್ತೆ: ಹಿಮಾಚಲ ಪ್ರದೇಶದಲ್ಲಿರು ಕಿನ್ನೌರ್ ಪ್ರಾಂತ್ಯಕ್ಕೆ ಪ್ರವೇಶ ಒದಗಿಸುವ ದುರ್ಗಮ ರಸ್ತೆ. ಕಡಿದಾದ ಪರ್ವತಗಳ ನಡುವೆ, ಎಚ್ಚರ ತಪ್ಪಿದರೆ ಕಣಿವೆಯ ಭಾರೀ ಕಂದಕಗಳಿಗೆ ಉರುಳುವ ಅಪಾಯವುಳ್ಳ ಅತ್ಯಂತ ಕಿರಿದಾದ ರಸ್ತೆಯಿದು. ಬಂಡೆಗಳನ್ನೇ ಕೊರೆದು ಮಾಡಿರುವ ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಮಾತ್ರ ಗುಂಡಿಗೆ ಗಟ್ಟಿ ಇರಬೇಕು.
ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!
೪. ಜೋಝಿಲಾ ಪಾಸ್: ಒಂದರೆಕ್ಷಣ ಎಚ್ಚರ ತಪ್ಪಿದರೂ ಕಣಿವೆಯಲ್ಲಿ ಎಲುಬಿನ ಹಂದರವೂ ಸಿಗದಂತೆ ಮಣ್ಣುಪಾಲಾಗುವ ಅಪಾಯವನ್ನು ಹೊತ್ತುಕೊಂಡೇ ಪ್ರಯಾಣ ಮಾಡಬೇಕಾದ ಯಮಕಂಟಕ ರಸ್ತೆಯಿದು. ಲಡಾಕ್ ಹಾಗೂ ಕಾಶ್ಮೀರವನ್ನು ಸೇರಿಸುವ ಈ ರಸ್ತೆ ಅತ್ಯದ್ಭುತ ಹಿಮಶಿಖರಗಳ ದೃಶ್ಯಾವಳಿಗಳನ್ನೂ ದರ್ಶನ ಮಾಡಿಸುತ್ತದೆ. ಮನೋಹರದಷ್ಟೇ, ರೋಮಾಂಚಕಾರಿಯೂ, ಅಪಾಯಕಾರಿಯೂ ಆದ ರಸ್ತೆಯಿದು.
೫. ಎನ್‌ಎಚ್ ೨೨: ರಾಷ್ಟ್ರೀಯ ಹೆದ್ದಾರಿ ೨೨ ಕೂಡಾ ಭಾರತದ ಅತ್ಯಂತ ಅಪಾಯಕಾರೀ ರಸ್ತೆಯೆಂಬ ಹೆಗ್ಗಳಿಕೆ ಪಾತ್ರವಾದ ರಸ್ತೆಗಳಲ್ಲೊಂದು. ಇದು ಯಾವ ಸುಳಿವನ್ನೂ ನೀಡದೆ, ಅತ್ಯಂತ ಅಪಾಯಕಾರೀ ತಿರುವುಗಳನ್ನೂ ದರ್ಶನ ಮಾಡಿಸುತ್ತದೆ. ಬೈಕರುಗಳಿಗೆ ಅತ್ಯಂತ ಪ್ರಿಯವಾದ ರಸ್ತೆಗಳಲ್ಲಿ ಇದೂ ಒಂದು. ಜಾರ್ಖಂಡ್ ಹಾಗೂ ಬಿಹಾರದ ನಡುವಿನ ಈ ಸಂಪರ್ಕ ರಸ್ತೆ ಭಾರತ ಹಾಗೂ ಟಿಬೆಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಎಂದೂ ಪ್ರಸಿದ್ಧ.
೬. ರೋಹ್ತಂಗ್ ಪಾಸ್: ಬೈಕರುಗಳ ಅತ್ಯಂತ ಪ್ರಿಯವಾದ ರಸ್ತೆಗಳಲ್ಲಿ ಇದೂ ಒಂದು. ಕುಲು ಕಣಿವೆ ಹಾಗೂ ಸ್ಪಿತಿ ಕಣಿವೆಯ ನಡುವೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮೇ ತಿಂಗಳಿಂದ ನವೆಂಬರ್‌ವರೆಗೆ ಮಾತ್ರ ತೆರೆದಿರುತ್ತದೆ. ಅತ್ಯಂತ ರಮಣೀಯ ದೃಶ್ಯಗಳನ್ನು ಕಾಣಬಹುದಾದ, ಎತ್ತರೆತ್ತರ ಹಿಮಚ್ಛಾದಿತ ಬೆಟ್ಟಗಳನ್ನು ನೋಡುತ್ತಾ ಮೈಮರೆಯಬಹುದಾದ ರಸ್ತೆಯಿದು. ಆದರೂ ಮೈಮರೆತರೆ ಪ್ರಪಾತದಲ್ಲಿರುವ ಅಪಾಯವೂ ಹೆಚ್ಚು.
ಇದನ್ನೂ ಓದಿ: Travel tips | ಈ 10 ಮಂದಿ ಜೊತೆಗೆ ಪ್ರವಾಸ ಮಾಡಲೇಬಾರದು!