Site icon Vistara News

Kashmir Tour: ವಸಂತ ಕಾಲದಲ್ಲಿ ಕಾಶ್ಮೀರವೆಂಬ ಸ್ವರ್ಗಕ್ಕೆ ಹೋದರೆ ಇವಿಷ್ಟು ಮರೆಯದಿರಿ!

kashmir

ಕಾಶ್ಮೀರವೆಂದರೆ ಭೂಮಿ ಮೇಲಿನ ಸ್ವರ್ಗ. ಕಣ್ಮನ ತಣಿಸುವ ಬೆಟ್ಟಗುಡ್ಡಗಳು, ಮುಗಿಲು ಚುಂಬಿಸುವ ಹಿಮಪರ್ವತಗಳು, ಕಣ್ಣು ಹಾಯಿಸಿದುದ್ದಕ್ಕೂ ಹಚ್ಚ ಹಸಿರಿನ ಬಯಲು, ಸ್ಪಟಿಕ ಶುದ್ಧವಾಗಿ ಹರಿವ ತೊರೆ… ಪೋಸ್ಟರ್‌ ಪರ್ಫೆಕ್ಟ್‌ ಲ್ಯಾಂಡ್‌ಸ್ಕೇಪ್‌ ನೋಡಬೇಕೆಂದರೆ ಕಾಶ್ಮೀರಕ್ಕೇ (Kashmir tour) ಹೋಗಬೇಕು. ಅದರಲ್ಲೂ, ವಸಂತ ಕಾಲದ ಕಾಶ್ಮೀರಕ್ಕೆ ಅದರದ್ದೇ ಆದ ಸೊಗಸಿದೆ. ಚಳಿಗಾಲದ ಕಾಶ್ಮೀರ, ಎಲೆಯುದುರುವ ಕಾಲದ ಕಾಶ್ಮೀರದ ಜೊತೆಗೆ ನೋಡಲೇಬೇಕಾದ ಕಾಶ್ಮೀರದ ಇನ್ನೊಂದು ಮುಖವೆಂದರೆ ಅದು ವಸಂತ ಕಾಲ. ಚಳಿಗಾಲ ಮುಗಿದು ಹಿಮ ನಿಧಾನವಾಗಿ ಕರಗಿ ಬೆಳ್ಳನೆಯ ಹಿಮದ ನೆಲಹಾಸು ಮಾಯವಾಗಿ ಎಲ್ಲೆಲ್ಲೂ ಹಸಿರೇ ಹಸಿರು ಕಾಣುವ ಜೊತೆಗೆ ಎಲ್ಲೆಲ್ಲೂ ಅರಳಿ ನಿಲ್ಲುವ ಹೂಗಳು ಕಾಶ್ಮೀರಕ್ಕೆ ಬೇರೆಯದೇ ಬಣ್ಣವನ್ನು ನೀಡುತ್ತವೆ. ಜೀವಕಳೆ ತುಂಬಿ ತುಳುಕುವ ಕಾಶ್ಮೀರವನ್ನು ನೋಡಲೆರಡು ಕಣ್ಣು ಸಾಲದು! ಹಾಗಾದರೆ ವಸಂತದ ಕಾಶ್ಮೀರವನ್ನು ನೋಡುವ ಆಸೆಯಿದ್ದರೆ ಯಾವುದನ್ನು ಮರೆಯಬಾರದು (travel tips) ಎಂಬುದನ್ನು ಇಲ್ಲಿ ನೋಡೋಣ.

1. ದಾಲ್‌ ಸರೋವರದಲ್ಲಿ ಶಿಖಾರ ರೈಡ್‌: ಕಾಶ್ಮೀರದ ಶ್ರೀನಗರಕ್ಕೆ ಹೋದರೆ ದಾಲ್‌ ಸರೋವರವನ್ನು ಹೇಗೆ ಮರೆಯಲಾದೀತು! ದಾಲ್‌ ಸರೋವರದಲ್ಲಿ ಶಿಖಾರ(ದೋಣಿ)ದಲ್ಲಿ ಕೂತು ನಿಧಾನವಾಗಿ ಹುಟ್ಟು ಹಾಕುತ್ತಾ ಸೂರ್ಯಾಸ್ತ ನೋಡುತ್ತಾ, ಕಾಶ್ಮೀರದ ಜನರ ಬದುಕನ್ನು ನೋಡುತ್ತಾ ಕಳೆಯುವುದೇ ಒಂದು ಅನುಭವ.

2. ಗುಲ್ಮಾರ್ಗ್‌ನಲ್ಲಿ ಗಾಲ್ಫ್‌: ಗುಲ್ಮಾರ್ಗ್‌ ಎಂಬ ಕಾಶ್ಮೀರದ ಸ್ವರ್ಗದಲ್ಲಿ ಒಂದು ದಿನ ಕಳೆಯುವುದೇ ಒಂದು ಅನುಭವ. ಗುಲ್ಮಾರ್ಗ್‌ನಲ್ಲಿ ಚಳಿಗಾಲದಲ್ಲಿ ಸ್ಕೀಯಿಂಗ್‌, ಸ್ಲೆಡ್ಜಿಂಗ್‌ ಮಾಡಿ ಮಜಾ ಮಾಡಬಹುದಾದರೆ, ವಸಂತ ಕಾಲದಲ್ಲಿ ಭೇಟಿಯಿತ್ತರೆ ಗಾಲ್ಫ್‌ ಆಡಬಹುದು. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಕಾಣುವ ಹಸಿರು ಹುಲ್ಲುಗಾವಲಲ್ಲಿ ಉದ್ದಕ್ಕೂ ನಡೆಯಬಹುದು. ಸುಮ್ಮನೆ ಕೂತು ಏಕಾಂತ ಸುಖ ಅನುಭವಸಬಹುದು. ಇಲ್ಲಿನ ಗಾಲ್ಫ್‌ ಕ್ಲಬ್‌ನಲ್ಲಿ ಗಾಲ್ಫ್‌ ಆಡಬಹುದು!

3. ಕಾಶ್ಮೀರದ ಟುಲಿಪ್‌ ಉದ್ಯಾನಗಳು: ವಸಂತಕಾಲದಲ್ಲಿ ಕಾಶ್ಮೀರಕ್ಕೆ ಭೇಟಿ ಕೊಟ್ಟರೆ ಖಂಡಿತ ಇಲ್ಲಿನ ಉದ್ಯಾನದಲ್ಲಿ ನಡೆದಾಡಬೇಕು. ಸುಂದರ ಹೂಗಳಿಗಿಂತ ಖುಷಿಕೊಡುವ ಸಂಗತಿ ಇನ್ನೇನಿದೆ. ಸುಖಾಸುಮ್ಮನೆ ಅರಳಿ ನಗುವ ಹೂವನ್ನು ನೋಡಲು ಇಲ್ಲಿನ ಜಗತ್ಪ್ರಸಿದ್ಧ ಮೊಘಲ್‌ ಗಾರ್ಡನ್‌ನಲ್ಲಿ ನಡೆದಾಡಬೇಕು. ಮುಖ್ಯವಾಗಿ ಇದೇ ಸಮಯದಲ್ಲಿ ಇಲ್ಲಿ ನಡೆಯುವ ಟುಲಿಪ್‌ ಹೂಗಳ ಉತ್ಸವದಲ್ಲಿ ಭಾಗಿಯಾಗಿ ಅಪರೂಪದ ಟುಲಿಪ್‌ ಸೊಬಗನ್ನು ಸವಿಯಬಹುದು.

4. ಗೊಂಡೋಲಾ ರೈಡ್‌: ಗುಲ್ಮಾರ್ಗ್‌ಗೆ ಹೋದರೆ ಗೊಂಡೋಲಾದಲ್ಲಿ ಕೂರದಿದ್ದರೆ ಹೇಗೆ ಹೇಳಿ! ಹೌದು ಗುಲ್ಮಾರ್ಗ್‌ನ ಕೇಬಲ್‌ ಕಾರ್‌ ಅರ್ಥಾತ್‌ ಗೊಂಡೋಲಾ ಸುಮಾರು ಐದು ಕಿಮೀಗಳಷ್ಟು ದೂರ ಸಾಗುವ ಹಾಗೂ ಅತ್ಯಂತ ಅದ್ಭುತ ದೃಶ್ಯಗಳನ್ನು ಸವಿಯುವಂತೆ ಮಾಡುತ್ತದೆ. ಗೊಂಡೋಲಾದಲ್ಲಿ ಕೂತು ಇಲ್ಲಿನ ಹಿಮಚ್ಛಾದಿತ ಬೆಟ್ಟಗಳ ಸೌಂದರ್ಯ ಸವಿಯುವುದೇ ಒಂದು ಅನುಭವ.

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

5. ಕಣಿವೆಗಳಿಗೆ ಪಯಣ: ಕಾಶ್ಮೀರಕ್ಕೆ ವಸಂತದಲ್ಲಿ ಹೋದರೆ ಇಲ್ಲಿನ ಕಣಿವೆಗಳಿಗೆ ಖಂಡಿತ ಹೋಗಲೇ ಬೇಕು. ಅರು ಕಣಿವೆ, ಬೇತಾಬ್‌ ಕಣಿವೆ ಮತ್ತಿತರ ಕಣಿವೆಗಳು ಕಾಶ್ಮೀರದ ಪ್ರಮುಖ ಆಕರ್ಷಣೆ. ಇಷ್ಟೇ ಅಲ್ಲದೆ, ಕಾಶ್ಮೀರದ ನಿಜವಾದ ಸೌಂದರ್ಯವನ್ನು ಕಣ್ತುಂಬಬೇಕಾದರೆ ಚಾರಣವನ್ನೂ ಮಾಡಬಹುದು. ಕಾಶ್ಮೀರದ ಗ್ರೇಟ್‌ ಲೇಕ್ಸ್‌ ಟ್ರೆಕ್‌ ಅತ್ಯಂತ ಜನಪ್ರಿಯ ಹಾಗೂ ಅಷ್ಟೇ ಅದ್ಭುತ ಚಾರಣಗಳಲ್ಲೊಂದು.

6. ಹೌಸ್‌ಬೋಟ್‌ನಲ್ಲಿ ರಾತ್ರಿ: ಕಾಶ್ಮೀರಕ್ಕೆ ಹೋದ ಮೇಲೆ ಹೌಸ್‌ಬೋಟ್‌ನಲ್ಲಿ ತಂಗದಿದ್ದರೆ ಇಡೀ ಪ್ರವಾಸವೇ ಅಪೂರ್ಣ. ಅದು ಚಳಿಗಾಲದಲ್ಲಿರಲಿ, ಬೇಸಿಯಲ್ಲಿರಲಿ, ಹೌಸ್‌ಬೋಟ್‌ನಲ್ಲಿ ಒಂದು ರಾತ್ರಿಯಾದರೂ ತಂಗದಿದ್ದರೆ ಕಾಶ್ಮೀರದ ಪೂರ್ಣ ಅನುಭವ ಸವಿದ ಸವಿ ಸಿಗಲಿಕ್ಕಿಲ್ಲ.

7. ಕಾಶ್ಮೀರಿ ಊಟ: ನೀವು ಆಹಾರ ಪ್ರಿಯರಾಗಿದ್ದರೆ ಕಾಶ್ಮೀರದ ವಿಶೇಷ ರುಚಿಗಳನ್ನು ಯಾವ ಕಾಲದಲ್ಲಿ ಭೇಟಿ ಮಾಡಿದರೂ ಸವಿಯಲೇಬೇಕು. ಕಾಶ್ಮೀರದ ಚಹಾ ಖಾವಾ, ವಿಶೇಷ ರುಚಿಗಳಾದ ರೋಗನ್‌ ಜೋಶ್‌, ದಮ್‌ ಆಲೂ, ಆಬ್‌ ಘೋಷ್‌, ಘೋಷ್‌ ತಾಬಾ ಇವೆಲ್ಲವುಗಳ ರುಚಿ ನೋಡಬಹುದು. ಜಗತ್ಪ್ರಸಿದ್ಧ ಕಾಶ್ಮೀರದ ಕೇಸರಿ, ಪಶ್ಮೀನಾ ಶಾಲು ಸೇರಿದಂತೆ ಇಲ್ಲಿನ ವಿಶೇಷತೆಗಳನ್ನೂ ಖರೀದಿಸಬಹುದು.

ಇದನ್ನೂ ಓದಿ: Travel Story | ಈ ಅಜ್ಜಿ ಮೊಮ್ಮಗ ಏಳು ವರ್ಷಗಳಲ್ಲಿ ತಿರುಗಾಡಿದ್ದು 50 ಸಾವಿರ ಮೈಲಿ!

Exit mobile version