ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಹಾಗಾಗಿ, ನೀತಿ ಸಂಹಿತೆ ಜಾರಿಯಾಗಿಲ್ಲ. ಆದರೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಡೆಸುತ್ತಿರುವ ಕಸರತ್ತು ಜೋರಾಗಿದೆ. ಕುಕ್ಕರ್, ಸೀರೆ, ಪಂಚೆ, ಸ್ಕೂಲ್ ಬ್ಯಾಗ್, ಬಳೆ, ಬಾಡೂಟ, ಮದ್ಯ, ನಗದು ವಿತರಣೆ ಸೇರಿದಂತೆ ನಾನಾ ರೂಪದಲ್ಲಿ ಮತದಾರರನ್ನೂ ಭ್ರಷ್ಟರನ್ನಾಗಿಸುವ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಅಕ್ರಮವನ್ನು ತಡೆಗಟ್ಟಲು ಚುನಾವಣಾ ಆಯೋಗವು, ವಿವಿಧ ಇಲಾಖೆಗಳ ಸಹಾಯದೊಂದಿಗೆ ದಾಳಿಗಳನ್ನು ನಡೆಸುತ್ತಿದೆ. ಈವರೆಗೆ, ವಿಶೇಷ ಕಾರ್ಯಾಚರಣೆ ಮೂಲಕ ಕಳೆದ 3 ದಿನಗಳಲ್ಲಿ 5.4 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ಅಕ್ರಮ ತಡೆಯಲು ಸೂಚನೆ ನೀಡಿದ್ದರು. ಬಳಿಕ, ಅಧಿಕಾರಿಗಳು ದಾಳಿಗಳನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಲಕ್ಷ್ಯದೊಂದಿಗೆ ಅಭ್ಯರ್ಥಿಗಳು ನೀಡುವ ಆಮಿಷಗಳಿಗೆ ಮತದಾರರು ಸೊಪ್ಪ ಹಾಕಬಾರದು. ತಾತ್ಕಾಲಿಕ ಲಾಭಕ್ಕಾಗಿ ಮತವನ್ನು ಮಾರಿಕೊಳ್ಳುವುದನ್ನು ಜನರು ತಿರಸ್ಕರಿಸಬೇಕು.
ಚುನಾವಣಾ ಸ್ಪರ್ಧೆಗೆ ಮುಂದಾಗಿರುವ ರಾಜಕಾರಣಿಯೊಬ್ಬರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಕಂದಾಯ ಅಧಿಕಾರಿಗಳು, ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದ್ದ ಫುಡ್‌ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಈ ಹಿಂದೆಯೂ ಕುಕ್ಕರ್, ಸೀರೆ ಹಂಚಿ ಸುದ್ದಿಗೆ ಗ್ರಾಸವಾಗಿದ್ದರು. ಮತ್ತೊಂದೆಡೆ, ರಾಮನಗರ ತಾಲೂಕಿನಲ್ಲಿ, ಮತದಾರರಿಗೆ ಹಂಚಲು ಸಿದ್ಧವಾಗಿದ್ದ 2,900 ಕುಕ್ಕರ್‌ಗಳನ್ನು ತಹಸೀಲ್ದಾರ್ ಜಪ್ತಿ ಮಾಡಿದ್ದಾರೆ. ಐದು ದಿನಗಳ ಹಿಂದೆ, ಪರಿಷತ್ ಸದಸ್ಯರೊಬ್ಬರ ಹಾವೇರಿ ನಿವಾಸದ ಮೇಲೆ ವಾಣಿಜ್ಯ ಅಧಿಕಾರಿಗಳು ದಾಳಿ ನಡೆಸಿ, 6000ಕ್ಕೂ ಅಧಿಕ ಸೀರೆ, 9000ಕ್ಕೂ ಅಧಿಕ ಸ್ಕೂಲ್ ಬ್ಯಾಗ್‌ಗಳು, ತಟ್ಟೆ-ಲೋಟಗಳು ಸೇರಿದಂತೆ ಒಟ್ಟಾರೆ 8 ಕೋಟಿ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವು ಕೆಲವು ಉದಾಹರಣೆಗಳಷ್ಟೇ. ಇದು ಯಾವುದೋ ಒಂದು ಕ್ಷೇತ್ರಕ್ಕೆ ಅಥವಾ ಯಾವುದೋ ಒಂದೇ ಪಕ್ಷಕ್ಕೆ ಮಾತ್ರ ಸಿಮೀತವಾಗಿಲ್ಲ.
ಈ ಹಿಂದೆ ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳು ಒಂದಿಷ್ಟು ಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತಿದ್ದವು. ಆದರೆ, ಈಗ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಈ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.
ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮತದಾರರು ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಇದೊಂದು ವಿಷ ವರ್ತುಲ. ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರ ಒಳ್ಳೆಯ ಲಾಭ ಜನರಿಗೇ ಆಗುತ್ತದೆ. ಆಮಿಷಕ್ಕೆ ಬಿದ್ದು ಅರ್ಹನಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರಿಂದಾಗುವ ದುಷ್ಪರಿಣಾಮವನ್ನು ತಾವೇ ಅನುಭವಿಸಬೇಕಾಗುತ್ತದೆ ಎಂಬುದನ್ನು ಜನ ಅರಿತುಕೊಳ್ಳಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ
ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಸಭ್ಯರು ಎಲೆಕ್ಷನ್ ಗೆಲ್ಲುವುದೇ ಅಸಾಧ್ಯ. ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಈ ಕಳಂಕವನ್ನು ನಿವಾರಿಸಬೇಕಾದ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ. ಚುನಾವಣೆ ಆಯೋಗದ ಜವಾಬ್ದಾರಿಯೂ ಇಲ್ಲಿ ದೊಡ್ಡದಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು.