Site icon Vistara News

777 ಚಾರ್ಲಿ- ಧರ್ಮ ಥರಾ ನೀವು ಜತೆಯಾಗಿ ಪ್ರವಾಸ ಹೋಗ್ತೀರಾ?

777 charlie

ನಾಯಿ ಸಾಕುವುದು ಎಂಬ ಪದವೇ ಈಗ ಸಾಕಷ್ಟು ಔಟ್‌ಡೇಟ್ ಆಗಿರುವ ಕಾಲ ಇದು. ಈಗ ಏನಿದ್ದರೂ, ನಾಯಿಯನ್ನು, ಬೆಕ್ಕನ್ನು ದತ್ತು ಪಡೆಯುವುದು! ಪ್ರಾಣಿಗಳಿಗೂ ಮನುಷ್ಯನಂತೆ ಅವರ ಜೊತೆಯಲ್ಲಿ ಮನೆಯ ಎಲ್ಲ ಸದಸ್ಯರಂತೆ ಘನತೆಯಿಂದ ಬದುಕುವ ಹಕ್ಕಿದೆ ಎಂಬ ಯೋಚನಾ ಲಹರಿಯಿರುವ ಕಾಲ. ಹೀಗಾಗಿ, ಪೆಟ್‌ ಪ್ರಿಯರು ತಾವು ಪ್ರವಾಸ ಹೋಗುವಾಗ ಜೊತೆಗೆ ತಮ್ಮ ಸಾಕುಪ್ರಾಣಿ/ನಾಯಿಯನ್ನೂ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಾರೆ. ನಾಯಿ ಜೊತೆ ಬೀಚ್‌, ನಾಯಿ ಜೊತೆ ಡೇ ಔಟ್‌, ನಾಯಿ ಜೊತೆ ಚಾರಣ, ನಾಯಿ ಜೊತೆ ರೆಸಾರ್ಟ್‌, ನಾಯಿ ಜೊತೆ ಲಾಂಗ್‌ ಡ್ರೈವ್‌ ಹೀಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡು ಸಂತೋಷವಾಗಿರಲು ನೂರು ದಾರಿ ಹುಡುಕುತ್ತಾರೆ. ಇನ್ನೂ ಕೆಲವರು ಈಗಷ್ಟೇ ನಾಯಿಯನ್ನು ದತ್ತು ಪಡೆದುಕೊಂಡು ಈ ಜಗತ್ತಿಗೆ ಮೆಲ್ಲನೆ ಕಾಲಿಟ್ಟು ನಾಯಿ ಜೊತೆ ಏನೆಲ್ಲ ಮಾಡಬಹುದು ಎಂದು ಕಣ್ಣರಳಿಸಿ ನೋಡಲು ಶುರು ಮಾಡಿದ್ದಾರೆ!

ಎಷ್ಟೋ ಸಾರಿ, ಅಯ್ಯೋ ನಾಯಿ ಬಿಟ್ಟು ಪ್ರವಾಸ ಹೋಗೋದಾದ್ರೂ ಹೇಗೆ ಎಂದು ಹಲವರು ನಾಯಿಗೋಸ್ಕರ ಪ್ರವಾಸದ ಯೋಚನೆ ಬಿಟ್ಟವರೂ ಇದ್ದಾರೆ. ಒಂದರ್ಧ ದಿನ ನಾಯಿಯನ್ನು ಮನೆಯೊಳಗೆ ಬಿಟ್ಟು ಹೋಗಿ ಅದು ಅನುಭವಿಸುವ ಯಾತನೆಯನ್ನು ನೋಡಲಾಗದೆ ನಾಯಿ ಸಾಕುವುದೇ ಬೇಡ ಎಂದು ಆ ಆಸೆ ಬಿಟ್ಟವರೂ ಇದ್ದಾರೆ.

ಸದ್ಯ ಈಗ ಏನಿದ್ದರೂ 777 ಚಾರ್ಲಿ ಪ್ರಭಾವ! ನಾಯಿ ಜೊತೆ ಪ್ರವಾಸ ಹೋಗಬೇಕು ಎಂದು ಯೋಚಿಸುವವರು ಮೊದಲು ಸಣ್ಣ ಸಣ್ಣ ಪ್ರವಾಸಗಳ ಮೂಲಕ ಆರಂಭದಲ್ಲಿ ಅಭ್ಯಾಸ ಮಾಡಿಸಬಹುದು. ಒಂದು ದಿನದ ಲಾಂಗ್‌ ಡ್ರೈವ್‌ ಹೋಗಿ ಬರಬಹುದು, ಅಥವಾ ನಿಮ್ಮ ಊರಿನಲ್ಲೇ, ನಗರದೊಳಗೇ ಇರುವ ಪುಟ್ಟ ಬೆಟ್ಟಕ್ಕೆ ಚಾರಣ ಹೋಗಿ ಬರಬಹುದು, ಮೂರ್ನಾಲ್ಕು ಗಂಟೆ ಕಾರಿನಲ್ಲಿ ನಾಯಿ ಆರಾಮವಾಗಿ ಕುಳಿತುಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಲು ಯಾವುದಾದರೂ ಪೆಟ್‌ ಫ್ರೆಂಡ್ಲೀ ರೆಸಾರ್ಟಿಗೆ ಮೂರ್ನಾಲ್ಕು ಗಂಟೆಯ ಡ್ರೈವ್‌ ಹೋಗಿ ಬರಬಹುದು. ಇಂತಹ ಸಣ್ಣ ಸಣ್ಣ ಪ್ರವಾಸಗಳ ಮೂಲಕ ನಿಮ್ಮ ನಾಯಿ ಪ್ರವಾಸಕ್ಕೆ ಅರ್ಹವೇ ಎಂದು ಪರೀಕ್ಸಿಸಿಕೊಳ್ಳಲು ನಿಮಗೆ ಸಹಾಯವಾಗುತ್ತದೆ.

ನಮ್ಮದೇ ವಾಹನದಲ್ಲಿ ಪ್ರಯಾಣ ಮಾಡಲು ಅಂತಹ ಹೇಳಿಕೊಳ್ಳುವ ಯಾವುದೇ ನಿಬಂಧನೆಗಳಿಲ್ಲದಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ, ಪೆಟ್‌ ಫ್ರೆಂಡ್ಲೀ ರೆಸಾರ್ಟುಗಳಲ್ಲಿ, ಹೋಂಸ್ಟೇಗಳಲ್ಲಿ ನಾಯಿ ಜೊತೆ ಇರುವಾಗ ಸಾಮಾನ್ಯ ಶಿಸ್ತನ್ನು ಪಾಲಿಸಲೇಬೇಕಾಗುತ್ತದೆ. ಈ ಎಲ್ಲ ಸಾಮಾನ್ಯ ಸಂದರ್ಭಗಳಲ್ಲಿ ನಿಮ್ಮ ನಾಯಿ ಅಥವಾ ಸಾಕುಪ್ರಾಣಿ ಉತ್ತಮವಾಗಿ ನಡೆದುಕೊಳ್ಳುತ್ತದೆ ಎಂಬ ಅರಿವು, ಭರವಸೆ ನಿಮಗಿದ್ದರೆ ಮಾತ್ರ ಇಂತಹ ಪ್ರವಾಸಗಳು ಸಾಧ್ಯವಾಗುತ್ತದೆ. ನಿಮ್ಮ ಆಣತಿ ಮೀರದೆ, ಪ್ರವಾಸವನ್ನು ಎಂಜಾಯ್‌ ಮಾಡುವ ನಾಯಿಗಳ ಜೊತೆಗೆ ಮಾತ್ರ ಸಂತೋಷದಾಯಕ ಪ್ರವಾಸ ಸಾಧ್ಯ. ಇಲ್ಲವಾದಲ್ಲಿ, ಕೇವಲ ನಿಮಗಷ್ಟೇ ಅಲ್ಲ, ನಿಮ್ಮ ಅಕ್ಕಪಕ್ಕ ಇದ್ದವರೂ ಸಮಸ್ಯೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು

ಇನ್ನು ಸಾರ್ವಜನಿಕ ಸಾರಿಗೆಗಳಲ್ಲಿ ಕೂಡಾ ನಾಯಿ ಜೊತೆ ಪ್ರಯಾಣಕ್ಕೆ ಭಾರತದಲ್ಲಿ ಅವಕಾಶವಿದೆ. ಆದರೆ, ಖಂಡಿತ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾವುದೇ ಪ್ರವಾಸಕ್ಕೆ ಮೊದಲು, ನಿಮ್ಮ ಸಾಕು ಪ್ರಾಣಿ ವ್ಯಾಕ್ಸಿನೇಟೆಡ್‌ ಹಾಗೂ, ದೈಹಿಕವಾಗಿ ಫಿಟ್‌ ಆಗಿದೆ ಎಂಬ ಸರ್ಟಿಫಿಕೆಟ್‌ ಹೊಂದುವುದು ಅತೀ ಅವಶ್ಯಕ. ರೈಲಿನಲ್ಲಿ ಪ್ರಯಾಣಿಸುವುದಾದಲ್ಲಿ ಎಸಿ ಸ್ಲೀಪರ್‌, ಎಸಿ ಚೇರ್ ಕಾರ್‌ ಹಾಗೂ ಎರಡನೇ ದರ್ಜೆಯ ಕೋಚ್‌ಗಳಲ್ಲಿ ಕರೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ. ಹಾಗೆ ಮಾಡಿದಲ್ಲಿ ಸೂಕ್ತ ದಂಡವನ್ನೂ ವಿಧಿಸಲಾಗುತ್ತದೆ.

ಇನ್ನು ವಿಮಾನ ಪ್ರಯಾಣವೂ ಸಾಕು ಪ್ರಾಣಿಯ ಜೊತೆಗೆ ಅಂದುಕೊಂಡಷ್ಟು ಸುಲಭವಲ್ಲ. ಏರ್‌ ಇಂಡಿಯಾ, ಜೆಟ್‌ ಏರ್‌ವೇಸ್‌, ಸ್ಪೈಸ್‌ಜೆಟ್‌ ಹಾಗೂ ವಿಸ್ತಾರ ಅನುಮತಿ ನೀಡುತ್ತವೆ. ಉಳಿದವಲ್ಲಿ ಇದು ಸಾಧ್ಯವಿಲ್ಲ. ಅನುಮತಿ ಇರುವ ವಿಮಾನಗಳೂ ಕೆಲವೊಂದು ನಿಬಂಧನೆಗಳನ್ನು ಹಾಕಿವೆ. ಅವರು ಹೇಳಿರುವಷ್ಟೇ ತೂಕದ ಗೂಡಿನಲ್ಲಿ ತಮ್ಮ ಜೊತೆಗೆ ಪುಟ್ಟ ಪ್ರಾಣಿಗಳನ್ನು ನಿಮ್ಮ ಸೀಟಿನ ಪಕ್ಕ ಇಡಬಹುದಾದಲ್ಲಿ ತೆಗೆದುಕೊಂಡು ಹೋಗಬಹುದಾದರೂ, ನಿಗದಿತ ತೂಕಕ್ಕಿಂತ ಹೆಚ್ಚಿರುವ ಪ್ರಾಣಿಗಳು ಕಾರ್ಗೋ ವಿಮಾನದಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸಬೇಕಾಗುತ್ತದೆ.

ಇವೆಲ್ಲ ಕಷ್ಟ ಅಂತ ಅನಿಸುವ ನಾಯಿಪ್ರಿಯರು, ಪುಟ್ಟ ಪುಟ್ಟ ಲಾಂಗ್‌ ಡ್ರೈವ್‌ಗಳಲ್ಲಷ್ಟೇ ನಾಯಿ/ಸಾಕುಪ್ರಾಣಿ ಜೊತೆ ಎಂಜಾಯ್‌ ಮಾಡಿ ತೃಪ್ತಿ ಹೊಂದಬಹುದು.

ಇದನ್ನೂ ಓದಿ: Rain travel: ಮಳೆಯಲಿ ಜೊತೆಯಲಿ ಇಲ್ಲಿಗೆ ಪ್ರವಾಸ ಮಾಡಿ!

Exit mobile version