ವಿದೇಶಿಗರು ಭಾರತಕ್ಕೆ ಆಗಾಗ ಪ್ರವಾಸಕ್ಕೆ ಬರುತ್ತಾರೆ. ಕೆಲವರು ತಿಂಗಳುಗಟ್ಟಲೇ ಭಾರತದಲ್ಲಿಯೇ ಉಳಿಯುತ್ತಾರೆ. ಅಂತಹ ಅನೇಕ ವಿದೇಶಿಗರಿಗೆ ಭಾರತದ ಬಗ್ಗೆ ವಿಶೇಷ ಅಭಿಮಾನವಿದೆ. ಅವರು ಭಾರತದಲ್ಲಿ ಏನು ಇಷ್ಟಪಡುತ್ತಾರೆ? ಯಾಕೆ ಅವರಿಗೆ ಭಾರತದ ಬಗ್ಗೆ ಅಭಿಮಾನ? ಅವರು ಭಾರತಕ್ಕೆ ಪ್ರವಾಸ ಮಾಡಿದಾಗ ಅವರಿಗೆ ಸಮಾಧಾನ ನೀಡುವ ಸಂಗತಿಗಳಾವುವು?
ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:
ಭಾರತದಲ್ಲಿ ಅನೇಕ ಪ್ರವಾಸ ತಾಣಗಳಿವೆ. ವಿಶ್ವದಾದ್ಯಂತ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶಕ್ತಿ ಈ ದೇಶಕ್ಕಿದೆ. ಇಲ್ಲಿನ ಶ್ರೀಮಂತ ಪರಂಪರೆ, ವೈವಿಧ್ಯ ಸಂಸ್ಕೃತಿ ಹಾಗೂ ಅವಿಸ್ಮರಣೀಯ ಕಟ್ಟಡಗಳು ವೀದೆಶಿಗರನ್ನು ಆಕರ್ಷಿಸುತ್ತದೆ. ಭಾರತವನ್ನು ʼಸೋನೆ ಕಿ ಚಿಡಿಯಾʼ ಎಂದು ಹೇಳಲಾಗುತ್ತದೆ. ಅಂದರೆ ಭಾರತವು ʼಬಂಗಾರದ ಪಕ್ಷಿʼ ಎಂದು. ಇಲ್ಲಿರುವ ಸಾಂಪ್ರದಾಯಿಕ ಶ್ರೀಮಂತಿಕೆಯೇ ಅದಕ್ಕೆ ಕಾರಣ.
ವಿದೇಶಿಗರು ಭಾರತದಲ್ಲಿ ಏನು ಪಡೆಯುತ್ತಾರೆ?
1. ಅಚ್ಚರಿ ಮೂಡಿಸುವ ವೈವಿಧ್ಯ
ಭಾರತದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಸಂಪ್ರದಾಯಗಳಿವೆ. ಅದು ಇಲ್ಲಿಯ ವಿಶೇಷತೆಗಳಲ್ಲಿ ಒಂದು. ವಿದೇಶಿ ಪ್ರವಾಸಿಗರು ಇಲ್ಲಿಗೆ ಬಂದಾಗ ವಿವಿಧ ಜನಾಂಗದ ಸಂಸ್ಕೃತಿ, ಸಂಪ್ರದಾಯಗಳನ್ನು ನೋಡಿ ಬೆರಗಾಗುತ್ತಾರೆ. ಬುಡಕಟ್ಟು ಜನಾಂಗ ಪ್ರಕೃತಿಯನ್ನು ಪೂಜಿಸುವ ಬಗೆ, ವಿಶೇಷ ಆಚರಣೆಗಳನ್ನು ನೋಡಿ ಆನಂದಿಸುತ್ತಾರೆ. ಭಾರತವು ಒಂದು ದೊಡ್ಡ ದೇಶ. ಅಳೆತಯಲ್ಲೂ ಹೌದು ಹಾಗೂ ಇಲ್ಲಿನ ಸಂಸಕೃತಿಯಲ್ಲೂ ಹೌದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಆಚರಣೆಗಳಿವೆ, ವಿಶಿಷ್ಟ ಪದ್ಧತಿಗಳಿವೆ. ಎಲ್ಲವನ್ನೂ ಒಂದೇ ಟ್ರಿಪ್‌ನಲ್ಲಿ ಪೂರ್ಣವಾಗಿ ಅನುಭವಿಸಲು ಕಷ್ಟ. ಹಾಗಾಗಿ ವಿದೇಶಿ ಪ್ರವಾಸಿಗರು ಮತ್ತೆ ಮತ್ತೆ ಭಾರತಕ್ಕೆ ಭೇಟಿ ನೀಡುತ್ತಾರೆ.
2. ಯೋಗ ಹಾಗೂ ಅಧ್ಯಾತ್ಮ ವಿಚಾರಗಳ ಜನ್ಮಸ್ಥಾನ
ಭಾರತದ ಪ್ರಕೃತಿ ಸೌಂದರ್ಯ ಕಣ್ಣಿಗೆ ಎಷ್ಟು ಹಿತವನ್ನು ನೀಡುತ್ತದೆ! ಕೆಲವರು ಇಲ್ಲಿಯ ಅವಿಸ್ಮರಣೀಯ ಸೌಂದರ್ಯವನ್ನು ಕಂಡು ಮನತುಂಬಿಕೊಳ್ಳಲು ಬರುತ್ತಾರೆ. ಹಾಗೂ ಅನೇಕರು ಭಾರತದಲ್ಲಿ ಶಾಂತಿ, ನೆಮ್ಮದಿಯನ್ನು ಹುಡುಕಿಕೊಂಡು ಬರುತ್ತಾರೆ. ಅದಕ್ಕೆ ಮುಖ್ಯ ಕಾರಣ; ಭಾರತದ ಮಣ್ಣಿನಲ್ಲಿರುವ ಆಧ್ಯಾತ್ಮಿಕ ಗುಣಗಳು. ಯೋಗ, ಅಧ್ಯಾತ್ಮ ಹಾಗೂ ಹಲವು ವೈಚಾರಿಕ ತತ್ವಗಳಿಗೆ ಜನ್ಮಸ್ಥಾನ ಆಗಿರುವ ದೇಶದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಪ್ರವಾಸಿಗರು ನಂಬಿದ್ದಾರೆ. ಉತ್ತರಾಖಂಡದ ರಿಷಿಕೇಶ ವಿಶ್ವದಲ್ಲಿ ʼಯೋಗದ ರಾಜಧಾನಿʼ ಎಂದೇ ಹೆಸರಾಗಿದೆ. ಭಾರತದ ಆಧ್ಯಾತ್ಮಿಕ ಗುರುಗಳು ಮಾಡುವ ಬೊಧನೆಗಳನ್ನು ಕೇಳುವುದಕ್ಕಾಗಿ ಅನೇಕರು ಬರುತ್ತಾರೆ. ಗಂಗಾತೀರದಲ್ಲಿ ಧ್ಯಾನಿಸಿ ಮನಃಶಾಂತಿ ಪಡೆಯಲು ಬರುತ್ತಾರೆ.
3. ಮನಸೆಳೆಯುವ ವಾಸ್ತುಶಿಲ್ಪ
ಭಾರತದಲ್ಲಿ ಸುಮಾರು 40ಕ್ಕೂ ಅಧಿಕ ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣವಾಗಿ UNESCO ಪರಿಗಣಿಸಿದೆ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್, ಶ್ರೀಮಂತಿಕೆಯಿಂದ ಮೆರೆದ ಕುರುಹುಗಳಿರುವ ಹಂಪಿ, ಎಲ್ಲವೂ ಅಚ್ಚರಿ ಮೂಡಿಸುವಂತಹ ವಾಸ್ತಶಿಲ್ಪವನ್ನು ಹೊಂದಿದೆ. ಎಲ್ಲಿ ದೃಷ್ಟಿ ಹಾಯಿಸಿದರೂ ಅಲ್ಲೋಂದು ದೊಡ್ಡ ಕೋಟೆ, ವಿಶೇಷ ದೇವಸ್ಥಾನಗಳು, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಕಥೆಗಳನ್ನು ಹೇಳುವ ಕಟ್ಟಡಗಳು ಕಾಣುತ್ತವೆ. ಇವೆಲ್ಲವೂ ಭಾರತದ ಪುರಾತನ ವಾಸ್ತುಶಿಲ್ಪದ ಮಹತ್ವವನ್ನು ಸಾರುತ್ತದೆ.
4. ಮೈ-ಮನ ತಲ್ಲಣಗೊಳಿಸುವ ಪ್ರಕೃತಿ
ಭಾರತದಲ್ಲಿ ಪ್ರಕೃತಿಯ ಸೊಬಗು ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ. ಚಾರಣಕ್ಕೆ ಹೋಗಲು ಹಿಮಾಲಯದಂತಹ ಪರ್ವತ, ಸೂರ್ಯಾಸ್ತವನ್ನು ನೋಡುತ್ತಾ ಸಮಯ ಕಳೆಯಲು ಸಮುದ್ರತೀರ, ನದಿ, ಜಲಪಾತ, ಕಾಡು ಎಲ್ಲವೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರಿಗೆ ತಮ್ಮಿಷ್ಟದ ತಾಣಕ್ಕೆ ಹೋಗಲು ಅನೇಕ ಅವಕಾಶಗಳು ಇಲ್ಲಿ ತೆರೆದಿದೆ.
5. ಪ್ರೀತಿಯಿಂದ ಸ್ವಾಗತಿಸುವ ಜನರು
ಭಾರತದ ಜನರು ವಿಶಾಲ ಹೃದಯದವಂತರು. ಮನೆಗೆ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಉಪಚರಿಸುವ ಗುಣವನ್ನು ಹೊಂದಿರುವವರು. ಅದೇ ರೀತಿ, ಹೊರದೇಶದಿಂದ ಆಗಮಿಸಿದವರನ್ನೂ ಆದರದಿಂದ ಸ್ವಾಗತಿಸಿ, ಗೌರವದಿಂದ ಉಪಚರಿಸುತ್ತಾರೆ. ದೇಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹಗಳು ಕಾಣಬಹುದು ಆದರೆ ಸ್ಥಳೀಯರನ್ನು ಮಾತನಾಡಿಸಿ ಅವರ ಜೀವನಶೈಲಿಯನ್ನು ಗಮನಿಸಿದಾಗ ಸತ್ಯ ಅರಿವಾಗುತ್ತದೆ. ಭಾರತೀಯರ ಈ ಸ್ವಭಾವ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಆಕರ್ಷಿಸುತ್ತದೆ.
6. ಅತ್ಯಂತ ಅನನ್ಯ ವನ್ಯಜೀವಿಗಳ ತಾಣ
ಭಾರತ ದೇಶ ವಿಸ್ತಾರವಾದ ಹವಾಮಾನ ಪರಿಸ್ಥಿತಿ ಹೊಂದಿದೆ. ಹಿಮಾಲಯದಂತಹ ಶೀಥಲ ಶಿಖರ ಒಂದು ಕಡೆ ನಿಂತಿದೆ. ಮತ್ತೊಂದು ಕಡೆ ಸಮೃದ್ಧವಾದ ಕಾನನಗಳನ್ನು ಹೊಂದಿರುವ ಪಶ್ಚಿಮ ಘಟ್ಟ. ಹಾಗು ಇವುಗಳ ಜತೆಗೆ ಕರಾವಳಿಯ ಸುಂದರ ಸಮುದ್ರ. ಇಲ್ಲೆಲ್ಲಾ ಬಗೆಬಗೆಯ ವನ್ಯಜೀವಗಳನ್ನು ಕಾಣಬಹುದು. ಕೆಲವೊಂದು ವನ್ಯಜೀವಿಗಳು ವಿಶೇಷವಾಗಿ ಭಾರತದಲ್ಲಿ ಮಾತ್ರ ಕಾಣಬಹುದು. ವನ್ಯಜೀವಿಗಳನ್ನು ನೋಡಿ, ಅವಗಳ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಆಸಕ್ತರಿಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ.
ರುಚಿರುಚಿಯಾದ ಆಹಾರ
ಈ ದೇಶದ ಒಂದೊಂದು ರಾಜ್ಯದಲ್ಲಿ ವಿಭಿನ್ನ ಬಗೆಯ ಆಹರ ಸೀಗುತ್ತದೆ. ಪ್ರತಿಯೊಂದು ಪ್ರದೇಶದಲ್ಲೂ ಅಲ್ಲಿಯ ವಿಶೇಷ ಬಗೆಯ ಆಹಾರ ಸಿಗುತ್ತದೆ. ಎಲ್ಲವೂ ರುಚಿರುಚಿಯಾಗಿರುತ್ತದೆ. ಉತ್ತರ ಭಾರತದ ಪರೋಟ, ದಕ್ಷಿಣ ಭಾರತದ ದೋಸೆ ಎಲ್ಲವೂ ನೆನಪಿನಲ್ಲಿ ಉಳಿಯುವಂತಹ ರುಚಿ.
ಈ ಪ್ರಮುಖ ಕಾರಣಗಳಿಂದ ಭಾರತವು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅವರ ಜೀವನವನ್ನು ಉತ್ತಮ ಸ್ಥಿತಿಯಲ್ಲಿ ಬದಲಾಯಿಸುವಂತಹ ಅನುಭವ ಭಾರತದಲ್ಲಿ ಸಿಗುತ್ತದೆ ಎನ್ನುತ್ತಾರೆ ಪ್ರವಾಸಿಗರು.
ಇದನ್ನೂ ಓದಿ: ಸದ್ಗುರು Save Soil ಅಭಿಯಾನ: ಸರ್ಬಿಯಾದಿಂದ ಸಂದೇಶ