ಕೊರೋನಾ ಜಗತ್ತಿಗೆ ಕಾಲಿಡುತ್ತಿದ್ದಂತೆ ಜಗತ್ತಿಡೀ ಒಮ್ಮೆ ಮಗ್ಗುಲು ಬದಲಾಯಿಸಿತು. ಬಹುತೇಕ ಎಲ್ಲ ಕೆಲಸಗಳೂ ʻವರ್ಕ್ ಫ್ರಂ ಹೋಂʼ ಆದವು. ಶಾಲೆಗಳು ಆನ್‌ಲೈನ್ ಆದವು. ಒಂದೆರಡು ವರ್ಷ ಜಗತ್ತು ಹೇಗೋ ನಡೆದುಕೊಂಡು ಮುಂದೆ ಹೋಯಿತು ಎಂದರೆ ತಪ್ಪಲ್ಲ. ಇಂಥ ಕೊರೋನಾ ಜಗತ್ತಿಗೆ ಕಲಿಸಿದ ಪಾಠ ಅನೇಕ. ಆದರೆ, ಹಲವು ಸಂಸ್ಥೆಗಳು ಇದೀಗ ಕೋರೋನೋತ್ತರ ಕಾಲಘಟ್ಟದಲ್ಲಿ ʻವರ್ಕ್ ಫ್ರಂ ಹೋಂʼ ಅನ್ನೇ ಮುಂದುವರಿಸಿವೆ. ಹಲವು ಮಂದಿ, ಆಫೀಸಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲದ ಕಾರಣ, ಹಾಗೂ ಕೊರೋನಾ ಸಂದರ್ಭ ಮನೆಯೊಳಗೇ ಕೂತು ಸುಸ್ತಾದ ಮಂದಿ ಈಗೆಲ್ಲ ಒಂದಿಷ್ಟು ದಿನ ಯಾವುದಾದರೊಂದು ಹೊಸ ಜಾಗದಲ್ಲಿ ಕೂತು ಕೆಲಸ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಗುಡ್ಡಬೆಟ್ಟಗಳ ಚಂದನೆಯ ದೃಶ್ಯಗಳನ್ನು ಸವಿಯುತ್ತಾ, ತರಹೇವಾರಿ ಊಟದ ರುಚಿಯನ್ನು ನೋಡುತ್ತಾ ಹೊಸ ಜನರ ಸ್ನೇಹವನ್ನು ಸಂಪಾದಿಸುತ್ತಾ ಬದುಕಿನಲ್ಲಿ ಹೊಸ ಅನುಭವಗಳನ್ನು ಕಲೆ ಹಾಕುತ್ತಾ ಹೊಟ್ಟೆಯನ್ನೂ ಹೊರೆದುಕೊಳ್ಳುತ್ತಾ ಹದಿನೈದಿಪ್ಪತ್ತು ದಿನಗಳಿಂದ ಹಿಡಿದು ತಿಂಗಳುಗಟ್ಟಲೆ ಒಂದೇ ಜಾಗದಲ್ಲಿ ಇದ್ದುಕೊಂಡು ಪ್ರವಾಸದ ರುಚಿಯನ್ನು ಅನುಭವಿಸುವವರಿದ್ದಾರೆ. ಹಾಗಾಗಿ ʻವರ್ಕ್ ಫ್ರಂ ಮೌಂಟೇನ್ʼ ಹೆಸರಿನಲ್ಲಿ ಜನಪ್ರಿಯವಾಗಿರುವ ಕೊರೋನೋತ್ತರ ಈ ಪ್ರವಾಸಕ್ಕೆ ಸೂಕ್ತ ಎನಿಸುವ ಸ್ಥಳಗಳು ಇಲ್ಲಿವೆ!
೧. ಜಿಬಿ, ಹಿಮಾಚಲ ಪ್ರದೇಶ: ಪರ್ವತಗಳು ಕರೆದಾಗ ಹೋಗಿಬಿಡಬೇಕು ಎಂಬ ಪ್ರಸಿದ್ಧ ಮಾತೊಂದಿದೆ. ಇದು ಅಂಥದ್ದೇ ಪರ್ವತ ಪ್ರದೇಶ. ಬಿಜಿಗೆ ಬಂದವರು ಮರಳಲು ಮನಸ್ಸು ಮಾಡುವುದಿಲ್ಲ. ಪ್ರಶಾಂತ ವಾತಾವರಣ, ಸದಾ ಜುಳುಜುಳು ನಾದ ಕಿವಿಗೆ ಕೇಳುತ್ತಲೇ ಇರುವ ಹಸಿರು ಹಸಿರು ಬೆಟ್ಟಗುಡ್ಡಗಳು, ಗದ್ದೆ ಬಯಲುಗಳು, ಪ್ರೀತಿ ತುಂಬಿದ ಮನಸ್ಸುಗಳು, ನಗರ ಬದುಕಿನ ಜಂಜಡಗಳೇ ಇಲ್ಲದ ನಿಧಾನಗತಿಯ ಲೈಫು, ದೂರದಲ್ಲಿ ಕಾಣುವ ಹಿಮಚ್ಛಾದಿತ ಬೆಟ್ಟಗುಡ್ಡಗಳು ಹೀಗೆ ಜಿಬಿಯನ್ನು ವರ್ಣಿಸಲು ಪದಗಳ ಕೊರತೆಯಾದರೆ ಆಶ್ಚರ್ಯವಿಲ್ಲ. ಇಲ್ಲಿ ಸಿಗುವ ಹೋಂಸ್ಟೇಗಳಲ್ಲಿ ಇದ್ದುಕೊಂಡು, ಆಫೀಸಿನ ಕೆಲಸದ ಸಮಯದಲ್ಲಿ ಕೆಲಸ ಮಾಡುತ್ತಾ, ಉಳಿದ ಸಮಯಗಳಲ್ಲಿ ಊರು ನೋಡುತ್ತಾ, ವಾರಾಂತ್ಯಗಳಲ್ಲಿ ಹಳ್ಳಿಗಳ ಜನರೊಂದಿಗೆ ಬೆರೆಯುತ್ತಾ ಅಥವಾ ಚಾರಣ ಮಾಡುತ್ತಾ ಕಳೆಯಲು ಹೇಳಿ ಮಾಡಿಸಿದಂಥ ಜಾಗವಿದು.
೨. ಶಿಲ್ಲಾಂಗ್, ಮೇಘಾಲಯ: ಯಾವ ಸಮಯದಲ್ಲಿ ಮಳೆ ಬರುತ್ತದೆ ಎಂದು ಹೇಳಲಾಗದ, ಬಂದರೆ ಮಳೆ ನೋಡುತ್ತಾ ಕೂತು ಬಿಡಬಹುದಾದ, ಇಲ್ಲವಾದರೆ, ಶಿಲ್ಲಾಂಗ್‌ನ ಬೀದಿ ಸುತ್ತುತ್ತಾ, ಇಲ್ಲಿನ ಉದ್ಯಾನ, ಸರೋವರಗಳ ಬದಿಯಲ್ಲಿ ಅಡ್ಡಾಗಿ ನೆಮ್ಮದಿಯಿಂದ ಸಮಯ ಕಳೆಯುತ್ತಾ ಇರಲು ಅತ್ಯುತ್ತಮ ಜಾಗ. ನಗರದ ಎಲ್ಲ ವ್ಯವಸ್ಥೆಗಳೂ ಇರುವ, ಒಂದೆಡೆ ಇದ್ದುಕೊಂಡು ಕೆಲಸ ಮಾಡಲು ಯಾವುದೇ ತೊಂದರೆ ಇರದ ಜಾಗ. ವಾರಾಂತ್ಯವಾದರೆ, ದಟ್ಟ ಕಾಡಿನಲ್ಲಿ ಕಳೆದುಹೋಗಬಹುದಾದ ಭರಪೂರ ಜಾಗಗಳೂ ಇಲ್ಲಿವೆ.
೩. ಮಸ್ಸೂರಿ, ಉತ್ತರಾಖಂಡ: ೨೦೧೫ರಲ್ಲಿ ʻಫ್ರೀ ವೈಫೈ ನಗರʼ ಎಂದು ಘೋಷಿತವಾದ, ಚಂದನೆಯ ಬೆಟ್ಟದೂರು. ಶಾಂತವಾದ, ಪರ್ವತದ ನಗರವೊಂದು ಹೊಂದಿರಬಹುದಾದ ಎಲ್ಲ ವ್ಯವಸ್ಥೆಗಳನ್ನು ಹೊಂದಿರುವ ಸದಾ ತಂಪಾಗಿರುವ ನಗರಿ. ಒಂದೆರಡು ವಾರ ಆರಾಮವಾಗಿ ಕೆಲಸ ಮಾಡಿಕೊಂಡು ಕಳೆಯಬಹುದಾದ ಎಲ್ಲ ಅರ್ಹತೆಗಳೂ ಈ ಬೆಟ್ಟದೂರಿಗಿದೆ.
೪. ಮನಾಲಿ, ಹಿಮಾಚಲ ಪ್ರದೇಶ: ಪ್ರವಾಸಿಗರಿಂದ ಗಿಜಿಗುಡುವ ಊರೇನೋ ನಿಜ. ಆದರೆ ಇಲ್ಲೂ ಶಾಂತಿ ಹುಡುಕಿಕೊಂಡು ಹೋದರೆ ಸ್ವಲ್ಪ ಕಷ್ಟಪಟ್ಟು ಸ್ಥಳಗಳನ್ನು ಹುಡುಕಿದರೆ, ಆರಾಮವಾಗಿ ಬೆಟ್ಟದ ಬದಿಯ ಪುಟ್ಟ ಗುಡಿಸಲಲ್ಲಿ ಕೂತು ಲ್ಯಾಪ್‌ಟಾಪ್ ತೊಡೆಗೇರಿಸಿ ಕೆಲಸ ಮಾಡುವಂಥ ಬೇಕಾದಷ್ಟು ಜಾಗಗಳಿವೆ. ತಿಂಗಳುಗಟ್ಟಲೆ ಇಲ್ಲೇ ಕೂತು, ಪರ್ವತ ಪ್ರದೇಶದ ಬದುಕನ್ನು ಅಭ್ಯಾಸ ಮಾಡಿಕೊಂಡು ಮತ್ತೆ ತಮ್ಮೂರಿಗೆ ಮರಳಲು ಮನಸ್ಸು ಮಾಡದ ಎಷ್ಟೋ ಜೀವಗಳು ಇಂದು ಇಂತಹ ಜೀವನವನ್ನೇ ನೆಚ್ಚಿಕೊಂಡಿದ್ದಾರೆ. ಮನಾಲಿ, ಎಲ್ಲ ರೀತಿಯಲ್ಲೂ ಅಂತಹ ಮನಸ್ಸುಗಳಿಗೆ ಸೂಕ್ತ ಜಾಗ.
೫. ಬೀರ್ ಬಿಲ್ಲಿಂಗ್, ಹಿಮಾಚಲ ಪ್ರದೇಶ: ನೀವು ಸ್ವಲ್ಪ ಸಾಹಸಮಯ ಪ್ರವೃತ್ತಿಯವರೆಂದಾದಲ್ಲಿ ಈ ಜಾಗ ಬೆಸ್ಟ್. ಕೆಲಸದ ಸಮಯದಲ್ಲಿ ಕೆಲಸ ಮಾಡಿಕೊಂಡು ಉಳಿದ ಸಮಯದಲ್ಲಿ, ರೋಮಾಂಚಕ ಪ್ಯಾರಾಗ್ಲೈಡಿಂಗ್ ಮಾಡಿಕೊಂಡೋ, ಸೈಕ್ಲಿಂಗ್ ಮಾಡುತ್ತಲೋ ಅಥವಾ ಚಾಋಣ ಮಾಡುತ್ತಲೋ ಕಳೆದು ಬಿಡಬಹುದಾದ ಪ್ರದೇಶ. ಜೊತೆಗೆ ಧ್ಯಾನದಂತಹ ಮನೋನಿಗ್ರಹಕ್ಕೂ, ಬದುಕಿಗೆ ಹಲವು ಒಳನೋಟಗಳನ್ನು ನೀಡುವ ಈ ಜಾಗ ಸೈ. ಧರ್ಮಶಾಲಾದಲ್ಲಿ ಟಿಬೆಟಿಯನ್ ಬೌದ್ಧವಿಹಾರಗಳನ್ನು ನೋಡುತ್ತಾ ಮನಸ್ಸಿನ ಶಾಂತಿ ನೆಮ್ಮದಿಯನ್ನೂ ಅನುಭವಿಸುತ್ತಾ ಇರಬೇಕೆಂದರೆ ಈ ಜಾಗ ಅತ್ಯುತ್ತಮ. ಆಧ್ಯಾತ್ಮದಿಂದ ಸಾಹಸದವರೆಗೆ ಎಲ್ಲವನ್ನೂ ಒಂದೇ ತಟ್ಟೆಯಲ್ಲಿಟ್ಟು ಕೊಡುವ ಜಾಗ. ಯಾವುದು ಬೇಕೋ ಅದು ನಮ್ಮ ಆಯ್ಕೆ ಅಷ್ಟೆ.