ಭಾಷೆ ಸಂಸ್ಕೃತಿ, ಆಚಾರ ವಿಚಾರ, ನಡೆನುಡಿ, ಜಾತಿ, ಧರ್ಮ ಇತ್ಯಾದಿ ಯಾವುದೇ ವಿಚಾರಕ್ಕೆ ಬಂದರೂ ವಿವಿಧತೆಯಲ್ಲಿ ಏಕತೆ ಎಂಬ ತತ್ವವನ್ನೇ ಎತ್ತಿ ಹಿಡಿವ ಭಾರತ, ಪ್ರವಾಸೋದ್ಯಮದಲ್ಲೂ ವಿವಿಧತೆಯಲ್ಲೂ ಏಕತೆಯಿದೆ. ಭಾರತ ಎಂಥ ದೇಶವೆಂದರೆ, ಇಲ್ಲಿ ಸಮುದ್ರದಿಂದ ಹಿಡಿದು ಹಿಮಪರ್ವತಗಳವರೆಗೆ ಪ್ರಕೃತಿ ಸೌಂದರ್ಯದಲ್ಲಿ ವಿವಿಧ ಬಗೆಯನ್ನು ಹೊಂದಿದೆ. ಭವ್ಯ ಇತಿಹಾಸ, ಅದ್ಭುತ ಪ್ರಕೃತಿ ಸೌಂದರ್ಯ, ಪ್ರಾಚೀನ ವಾಸ್ತುಶಿಲ್ಪ, ಶ್ರೀಮಂತ ಆಹಾರ ಪದ್ಧತಿ ಕಲೆ ಸಂಸ್ಕೃತಿಗಳ ಹಳ್ಳಿಗಳು, ನಡೆದಷ್ಟೂ ಮುಗಿಯದ ಸಮುದ್ರ ತೀರ, ಮೋಜು ಮಸ್ತಿಗಳಿಗೆ ಆಧುನಿಕ ನಗರಗಳು, ಕ್ಲಬ್ಬು ನೈಟ್ ಲೈಫು ಹೀಗೆ ಎಲ್ಲ ಬಗೆಯ ಆಸಕ್ತಿಗಳಿಗೆ ನೀರೆರೆವ ತಾಣಗಳೂ ಭಾರತದಲ್ಲಿವೆ. ಇಡೀ ಪ್ರಪಂಚದ ಮಿನಿ ಅವತರಣಿಕೆಯೇ ಭಾರತ ಎಂದರೂ ತಪ್ಪಲ್ಲ.
ಪ್ರವಾಸ ಎಂದರೆ, ವಿದೇಶ ಪ್ರಯಾಣವೊಂದೇ ಅಲ್ಲ. ನಮ್ಮ ದೇಶದಲ್ಲೂ ಅತ್ಯಪೂರ್ವ ಜಾಗಗಳಿವೆ. ಹಾಗಾದರೆ ಪ್ರವಾಸದ ವಿಷಯಕ್ಕೆ ಬಂದರೆ ನಮ್ಮ ದೇಶದ ಟಾಪ್ ೧೦ ಸ್ಥಳಗಳು ಯಾವುವು ನೋಡೋಣ.
೧. ಕಾಶ್ಮೀರ: ಭಾರತದ ಮುಕುಟ ಮಣಿ ಕಾಶ್ಮೀರ ಪ್ರವಾಸಿಗರ ಸೂಜಿಗಲ್ಲಿನ ಸೆಳೆತ. ಭೂಮಿ ಮೇಲಿನ ಸ್ವರ್ಗ. ಅತ್ಯದ್ಭುತ ಸರೋವರಗಳು, ಹಿಮ ಪರ್ವತಗಳು, ಹಸಿರು ಕಣಿವೆ ಕಾನನ ಹೀಗೆ ರಮಣೀಯ ಪ್ರಕೃತಿ ಸೌಂದರ್ಯವಿರುವ ಕಾಶ್ಮೀರ ಭಾರತದ ಸೌಂದರ್ಯಕ್ಕೆ ಇನ್ನೊಂದು ಹೆಸರೂ ಕೂಡ. ಇಲ್ಲಿನ ಭಯೋತ್ಪಾದನೆ, ರಾಜಕೀಯ ಸಮಸ್ಯೆಗಳೇನೇ ಇರಲಿ, ಪ್ರವಾಸಿಗರಿಗೆ ಸದಾ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಕಾಶ್ಮೀರ ಈ ವರ್ಷ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಸೆಳೆದಿತ್ತು.
೨. ಶಿಮ್ಲಾ, ಹಿಮಾಚಲ ಪ್ರದೇಶ: ಹೊಸತಾಗಿ ಮದುವೆಯಾದವರ ಟಾಪ್ ಹನಿಮೂನ್ ಡೆಸ್ಟಿನೇಶನ್‌ಗಳ ಪಟ್ಟಿಯಲ್ಲಿ ಸದಾ ಮುಂದಿರುವ ಶಿಮ್ಲಾ ಚಳಿಯೂರು. ಗಿಜಿಗುಡುವ ಮಾರ್ಕೆಟ್, ಸಾಲು ಸಾಲು ಬೆಟ್ಟಗಳ ದರ್ಶನ ನೀಡುವ, ಚಳಿಗಾಲದಲ್ಲಿ ಹಿಮ ಸುರಿವ ಚಳಿಗಾಲದಲ್ಲಿ ಹಿಮ ಸುರಿವ ಭಾರತದ ಪ್ರಖ್ಯಾತ ಹಿಲ್ ಸ್ಟೇಶನ್‌ಗಳ ಪೈಕಿ ಒಂದು.
೩. ಲೇಹ್, ಲಡಾಕ್: ಸಾಹಸ ಪ್ರಿಯರನ್ನು ಸದಾ ಕೈಬೀಸಿ ಕರೆವ ಲಡಾಕ್ ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತುಂಗಕ್ಕೇರಿಸಿದ ಇನ್ನೊಂದು ಸ್ಥಳ. ಇಲ್ಲಿನ ರಮಣೀಯ ನೀಲಿ ಸರೋವರಗಳು, ಹಿಮಚ್ಛಾದಿತ ಪರ್ವತಗಳು, ಮೈನವಿರೇಳಿಸುವ ಸಾಹಸಮಯ ರಸ್ತೆಗಳ ಪಯಣ, ಬೌದ್ಧ ಮಂದಿರಗಳು, ಮರಳು ದಿಬ್ಬಗಳು ಹೀಗೆ ಕಿಚ್ಚಿರುವ ಮಂದಿಗೆ ರೋಮಾಂಚಕ ಅನುಭವ ನೀಡುವ ತಾಣ.
೪. ಗ್ಯಾಂಗ್‌ಟಕ್, ಸಿಕ್ಕಿಂ: ಕಾಂಚನಜುಂಗದ ಮೈನವಿರೇಳಿಸುವ ದೃಶ್ಯ, ಹಿಮ ಬೆಟ್ಟಗಳು, ಶ್ರೀಮಂತ ಕಲೆ ಸಂಸ್ಕೃತಿಗಳನ್ನು ಹೊಂದಿದ ತನ್ನ ಅತ್ಯಪೂರ್ವ ನಿಸರ್ಗ ಸೌಂದರ್ಯಕ್ಕೇ ಹೆಸರುವಾಸಿಯಾದ ಪ್ರವಾಸಪ್ರಿಯರ ಸ್ವರ್ಗ ಸಿಕ್ಕಿಂ.
೫. ಮುನ್ನಾರ್, ಕೇರಳ: ದೇವರನಾಡು ಎಂದೇ ಹೆಸರಾದ ಕೇರಳದಲ್ಲಿ ಒಂದೆರಡಲ್ಲ. ಹೋದದ್ದೆಲ್ಲ ಪ್ರವಾಸೀ ತಾಣವೇ. ಮುನ್ನಾರ್ ಕೂಡಾ ಮುಂಚೂಣಿಯಲ್ಲಿರುವ ತಾಣ. ದಟ್ಟ ಕಾಡು, ಹೋದಷ್ಟೂ ಮುಗಿಯದ ಚಹಾ ತೋಟಗಳು, ಅಲ್ಲಿಲ್ಲಿ ಜಲಪಾತ ಹೀಗೆ ಹಸಿರಲ್ಲಿ ಮಿಂದೇಳಬಯಸುವ ಎಲ್ಲ ನಿಸರ್ಗ ಪ್ರಿಯರಿಗೂ ಕೇರಳವೆಂದರೆ ದೇವರನಾಡೇ.
೬. ವಾರಣಾಸಿ, ಉತ್ತರಪ್ರದೇಶ: ಭಾರತವಿಡೀ ಸುತ್ತಿದರೂ ವಾರಣಾಸಿಗೆ ಹೋಗದಿದ್ದರೆ ಅಂಥವರ ಪ್ರವಾಸ ಅಪೂರ್ಣವೇ. ಅತ್ಯಂತ ಪ್ರಾಚೀನ ನಗರವೆಂಬ ಹೆಗ್ಗಳಿಕೆಯ ಭಾರತದ ಧಾರ್ಮಿಕ ಕೇಂದ್ರವಾದರೂ ಎಲ್ಲ ಬಗೆಯ ಪ್ರವಾಸಿಗರನ್ನೂ, ವಿದೇಶೀಯರನ್ನೂ ಸೆಳೆವ ಅತ್ಯದ್ಭುತ ತಾಣವಿದು. ಬದುಕಿದ್ದಾಗ ಒಮ್ಮೆ ನೋಡು ವಾರಣಾಸಿಯ ಎಂದರೂ ತಪ್ಪಿಲ್ಲ.
೭. ರಣ್ ಆಫ್ ಕಚ್, ಗುಜರಾತ್: ದಿ ಗ್ರೇಟ್ ರಣ್ ಆಫ್ ಕಚ್, ಬೆಳ್ಳನೆಯ ಉಪ್ಪಿನ ಹಾಸಿನ ಮರಳುಗಾಡಿನಂತೆ ಹೊಳೆಯುವ ನಾಡು. ಇಲ್ಲಿನ ೭,೫೦೦ ಚದರ ಕಿಲೋಮೀಟರುಗಳ ವ್ಯಾಪ್ತಿಯ ಉಪ್ಪಿನ ಮರಳುಗಾಡನ್ನು ಸೂರ್ನ ಬಿಸಿಲಲ್ಲಿ ಪ್ರತೊಫಲಿಸುವುದು ನೋಡುವುದೇ ಕಣ್ಣಿಗೆ ಹಬ್ಬ. ಜೊತೆಗೆ ಇದಕ್ಕೆ ಕಳಶಪ್ರಾಯದಂತೆ ಬಣ್ಣಗಳಲ್ಲೇ ಮಿಂದೇಳುವ ಗುಜರಾತಿನ ಶ್ರೀಮಂತ ಕಲೆ ಸಂಸ್ಕೃತಿ ಯಾವ ಪ್ರವಾಸಿ ಪ್ರಿಯನೂ ಕಳೆದುಕೊಳ್ಳನು ಇಷ್ಟಪಡಲಾರ.
೮. ಜೈಸಲ್ಮೇರ್, ರಾಜಸ್ಥಾನ: ಕಣ್ಣು ಹಾಯಿಸಿದಲ್ಲೆಲ್ಲ ಮರಳು ದಿಬ್ಬಗಳನ್ನು ಕನ್ತುಂಬಿಕೊಂಡು, ಮೈನವಿರೇಳಿಸುವ ಡೆಸರ್ಟ್ ಸಫಾರಿ ಮಾಡಿಕೊಂಡು, ಒಂಟೆಯ ಬೆನ್ನ ಮೇಲೆ ಕುಳಿತು ನಮೋಹಕ ದೃಶ್ಯಗಳನ್ನು ಭಾರತದೊಳಗೇ ಸವಿಬೇಕೆನ್ನುವ ಆಸೆಯ ಮಂದಿ ಖಂಡಿತವಾಗಿಯೂ ಜೈಸಲ್ಮೇರಿಗೊಮ್ಮೆ ಹೋಗಬೇಕು. ಜೊಗೆತೆ ರಾಜಸ್ಥಾನದ ಅತ್ಯದ್ಭುತ ವಾಸ್ತುಶಿಲ್ಪ, ಕಲೆ ಸಂಸ್ಕೃತಿ ಆಹಾರ ನಿಮಗೆ ಸಿಗುವ ಬೋನಸ್!
೯. ಜೈಪುರ್, ರಾಜಸ್ಥಾನ: ಪಿಂಕ್ ಸಿಟಿ ಎಂಬ ಹೆಸರಿನ ಜೈಪುರ ರಾಜಸ್ಥಾನದ ಬಗ್ಗೆ ತಿಳಿದುಕೊಳ್ಳ ಬಯಸುವ ಎಲ್ಲರಿಗೂ ಒಂದು ಝಲಕ್ ನೀಡುವ ನಗರಿ. ಕೋಟೆ ಕೊತ್ತಲಗಳ, ಕಣ್ತುಂಬ ಬಣ್ಣ ತುಂಬುವ ದಿರಿಸುಗಳ ರಾಜರ ಹಾಗೆ ಐಷಾರಾಮಿ ಝಲಕ್ ಅನುಭವಿಸಬಯಸುವ ಮಂದಿಗೆ ಇದು ಹೇಳಿ ಮಾಡಿಸಿದ ತಾಣ.
೧೦. ಮೈಸೂರು, ಕರ್ನಾಟಕ: ಅರಮನೆಗಳ ನಗರಿ ಮೈಸೂರು ಭಾರತದಲ್ಲಿ ಇಂದಿಗೂ ದಸರಾಕ್ಕೆ ವಿಶ್ವದೆಲ್ಲೆಡೆಯಿಂದ ಜನರನ್ನು ಕೈಬೀಸಿ ಕರೆವ ನಗರಿ. ಇಂದಿಗೂ ವೈಭವೋಪೇತ ದಸರೆಯ ಸಂಭ್ರಮವನ್ನು ದೇಶದೆಲ್ಲೆಡೆ ಹಂಚುವ, ರಾಜ ವೈಭೋಗದ ಆದರೆ ಸದಾ ಶಾಂತಿಯುತ ಸುಂದರ ನಗರ.