ಚಂಡಿಗಢ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂಬ ಕಾರಣಕ್ಕೆ, ಅಪ್ಪ-ಅಮ್ಮ ಬೈದರು, ಮೊಬೈಲ್ ನೋಡಬೇಡ ಎಂದು ಹೇಳಿದರು ಎಂಬಿತ್ಯಾದಿ ಕ್ಷುಲ್ಲಕ ಕಾರಣಕ್ಕೆ ಮಕ್ಕಳು / ಹದಿಹರೆಯದವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಕೇಳಿದ್ದೇವೆ. ಇದೂ ಕೂಡ ಅಂತಹದ್ದೇ ಮಾದರಿಯ ಘಟನೆ. ಆಘಾತಕಾರಿ ಘಟನೆಯೊಂದರಲ್ಲಿ ಹರಿಯಾಣದಲ್ಲಿ 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಪ್ರೀತಿಯ ಶ್ವಾನ ನಾಪತ್ತೆಯಾದುದೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಶನಿವಾರ (ಏಪ್ರಿಲ್ 27) ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊರಗೆ ಹೋಗಿದ್ದ ತಾಯಿ ಬಂದ ಕೂಡಲೇ ಇದನ್ನು ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ವೇಳೆ ಆಕೆ ಮೃತಪಟ್ಟಿದ್ದಳು (Crime News).
ʼʼಕೆಲವು ದಿನಗಳ ಹಿಂದೆ ನಾಪತ್ತೆಯಾದ ನೆಚ್ಚಿನ ಶ್ವಾನ ಇನ್ನೂ ಪತ್ತೆಯಾಗದ ಕೊರಗಿನಿಂದ 12 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲವು ದಿನಗಳಿಂದ ಆಕೆ ಈ ವಿಚಾರದಲ್ಲಿ ಕೊರಗುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆʼʼ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ವಿವರ
ʼʼಐದು ದಿನಗಳ ಹಿಂದೆ ನಮ್ಮ ಸಾಕು ನಾಯಿ ಕಾಣೆಯಾಗಿತ್ತು. ಈ ಶ್ವಾನ ಮತ್ತು ಬಾಲಕಿಯ ಮಧ್ಯೆ ಸುಮಾರು 3 ತಿಂಗಳಿಂದ ಉತ್ತಮ ಬಾಂಧವ್ಯ ರೂಪುಗೊಂಡಿತ್ತುʼʼ ಎಂದು ಮನೆಯವರು ತಿಳಿಸಿದ್ದಾರೆ. ʼʼಶ್ವಾನ ಕಾಣೆಯಾದಾಗಿನಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು. ಬಳಿಕ ತೀವ್ರ ಚಿಂತೆಗೆ ಒಳಗಾಗಿದ್ದ ಅವಳು ಸರಿಯಾಗಿ ಆಹಾರವನ್ನೂ ಸೇವಿಸುತ್ತಿರಲಿಲ್ಲʼʼ ಎಂದು ಅವರು ವಿವರಿಸಿದ್ದಾರೆ. ಕುಟುಂಬಸ್ಥರು ಆಕೆಯನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ನಾಯಿಮರಿಯನ್ನು ಕಳೆದುಕೊಂಡ 6ನೇ ತರಗತಿಯ ವಿದ್ಯಾರ್ಥಿನಿಯ ದುಃಖವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಶನಿವಾರ ಸಂಜೆ ಬಾಲಕಿಯ ತಾಯಿ ಮತ್ತು ಸಹೋದರಿ ದಿನಸಿ ಖರೀದಿಗಾಗಿ ಮನೆಯಿಂದ ಹೊರ ಹೋಗಿದ್ದರು. ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಈ ವೇಳೆ ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾಳೆ. ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾಳೆ. ಕೊನೆಯ ದಿನಗಳಲ್ಲಿ ಮಗಳ ದಿನಗಳನ್ನು ನೆನೆದು ತಾಯಿ ದುಃಖ ವ್ಯಕ್ತಪಡಿಸಿದ್ದಾರೆ. ʼʼಮೂರು ತಿಂಗಳಿಂದ ಆಕೆ ಮತ್ತು ಶ್ವಾನದ ಮಧ್ಯೆ ಅತ್ಯುತ್ತಮ ಬಾಂಧವ್ಯ ರೂಪುಗೊಂಡಿತ್ತು. ನಾಯಿ ಮರಿ ನಾಪತ್ತೆಯಾದಾಗಿನಿಂದ ಆಕೆ 5 ದಿನಗಳಿಂದ ಆಹಾರ ಸೇವಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದಳು. ನಿನ್ನೆ ನಾನು ತರಕಾರಿ ಖರೀದಿಗಾಗಿ ಹೊರ ಹೋಗಿದ್ದೆ. ಈ ವೇಳೆ ನಮ್ಮ ನೆರೆಯವರು ಕರೆ ಮಾಡಿ ಕೂಡಲೇ ಆಗಮಿಸುವಂತೆ ಹೇಳಿದ್ದರು. ಕೂಡಲೇ ಮನೆಗೆ ಧಾವಿಸಿ ಬಂದಿದ್ದೆ. ಈ ವೇಳೆ ಆಕೆ ಮೃತಪಟ್ಟಿದ್ದಳುʼʼ ಎಂದು ಬಾಲಕಿ ತಾಯಿ ನೋವಿನಿಂದ ಹೇಳಿದ್ದಾರೆ.
ಇದನ್ನೂ ಓದಿ: ಶಾಲೆಗೆ ಹೋಗದ್ದಕ್ಕೆ ಬೈದ ತಾಯಿ, ಬಾಲಕ ಆತ್ಮಹತ್ಯೆ
ವರ್ಷಗಳ ಹಿಂದೆ ಮಹಾರಾಷ್ಟ್ರದ ಭಯಂದರ್ ಎಂಬಲ್ಲಿ 13 ವರ್ಷದ ಬಾಲಕನೊಬ್ಬ ಅತ್ಯಂತ ಕ್ಷುಲ್ಲಕ ಮತ್ತು ವಿಚಿತ್ರ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ‘ತನ್ನ ತಲೆಕೂದಲನ್ನು ಅತ್ಯಂತ ಚಿಕ್ಕದಾಗಿ ಕತ್ತರಿಸಿಬಿಟ್ಟರು’ ಎಂಬ ಕಾರಣಕ್ಕೆ ಅಪಾರ್ಟ್ಮೆಂಟ್ನ 16ನೇ ಮಹಡಿಯಲ್ಲಿರುವ ತಮ್ಮ ಮನೆಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ.