ಮುಂಬೈ: 1993ರ ಮುಂಬೈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂ (Abu Salem)ನನ್ನು ಶನಿವಾರ ದೆಹಲಿಯಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್ (Manmad)ಗೆ ರೈಲಿನಲ್ಲಿ ಬಿಗಿ ಭದ್ರತೆಯಲ್ಲಿ ಕರೆತರಲಾಯಿತು. ಬಳಿಕ ಪೊಲೀಸ್ ವ್ಯಾನ್‌ನಲ್ಲಿ ಆತನನ್ನು ನಾಸಿಕ್ ರಸ್ತೆಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ (Viral Video).
ಮನ್ಮಾಡ್ ರೈಲ್ವೆ ನಿಲ್ದಾಣಕ್ಕೆ ಅಬು ಸಲೇಂನನ್ನು ಕರೆದುಕೊಂಡು ಬರುವ ವಿಚಾರವನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು. ಆದರೆ ನವದೆಹಲಿ-ಬೆಂಗಳೂರು-ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಿಂದ ಮನ್ಮಾಡ್‌ಗೆ ಸ್ಟೇಷನ್‌ನಲ್ಲಿ ಅಬು ಸಲೇಂ ಇಳಿದಾಗ ಜನ ಸಮೂಹವೇ ನೆರೆದಿತ್ತು.
#WATCH | Maharashtra: 1993 Bombay blast convict Abu Salem was brought to Manmad from Delhi, earlier today. pic.twitter.com/MydvcMyKjB
— ANI (@ANI) August 3, 2024
ಬಾಂಬ್ ಸ್ಫೋಟದಲ್ಲಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಸಲೇಂ ಕಳೆದ ತಿಂಗಳು ‘ಸುರಕ್ಷತಾ ಕಾರಣಗಳನ್ನು’ ಉಲ್ಲೇಖಿಸಿ ತಲೋಜಾ ಕೇಂದ್ರ ಕಾರಾಗೃಹದಿಂದ ನಾಸಿಕ್ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದ್ದ. ಈ ಬಗ್ಗೆ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆರಂಭಿಕ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯವು ಜೂನ್ 25ರಂದು ನಿರಾಕರಿಸಿತ್ತು. ಆದರೆ ನ್ಯಾಯಾಲಯವು ಜುಲೈ 3ರವರೆಗೆ ವರ್ಗಾವಣೆಯನ್ನು ವಿಳಂಬಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು.
ಪೋರ್ಚುಗಲ್‌ನಲ್ಲಿ ಆಶ್ರಯ ಪಡೆದಿದ್ದ ಪಾತಕಿ
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಗ್ಯಾಂಗ್‌ಸ್ಟರ್ ಅಬು ಸಲೇಂ ಪೋರ್ಚುಗಲ್‌ನಲ್ಲಿ ಆಶ್ರಯ ಪಡೆದಿದ್ದ. ಆತನನ್ನು ಅಲ್ಲಿಂದ ಗಡಿಪಾರು ಮಾಡಿ ತರಲು ಕೇಂದ್ರ ಸರ್ಕಾರ ಹರಸಾಹಸವನ್ನೇ ನಡೆಸಿತ್ತು. ಕೊನೆಗೆ ಪೋರ್ಚುಗಲ್ ಸರ್ಕಾರದೊಂದಿಗಿನ ಸಂಧಾನದಲ್ಲಿ ಆರೋಪಿಗೆ 25 ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆ ವಿಧಿಸುವುದಿಲ್ಲ, 25 ವರ್ಷದ ಶಿಕ್ಷೆಯ ಬಳಿಕ ಬಂಧಮುಕ್ತಗೊಳಿಸಲಾಗುವುದು ಎಂದು ವಾಗ್ದಾನ ನೀಡಲಾಗಿತ್ತು. ಜತೆಗೆ ಆತನಿಗೆ ಮರಣದಂಡನೆ ಶಿಕ್ಷೆ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಹೀಗಾಗಿ 2005ರ ನವೆಂಬರ್ 5ರಂದು ಅಬು ಸಲೇಂನನ್ನು ಭಾರತಕ್ಕೆ ಕರೆ ತರಲಾಗಿತ್ತು. ಈ ವಾಗ್ದಾನದ ಅವಧಿ 2030ರವರೆಗೆ ಜಾರಿಯಲ್ಲಿರುತ್ತದೆ.
ಈ ನಡುವೆ 1995ರಲ್ಲಿ ನಡೆದ ಮುಂಬೈ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಅವರ ಕೊಲೆಗೆ ಸಂಬಂಧಿಸಿ ಟಾಡಾ ಕೋರ್ಟ್ 2005ರ ಫೆಬ್ರವರಿ 25ರಂದು ತೀರ್ಪು ನೀಡಿದೆ. ಇದರಲ್ಲಿ ಸಲೇಂ ಮತ್ತು ಆತನ ಚಾಲಕ ಮೆಹದಿ ಹಸನ್‌ಗೆ ಜೀವನಪೂರ್ತಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಅಬು ಸಲೇಂನನ್ನು ಜೀವನಪೂರ್ತಿ ಜೈಲಲ್ಲಿ ಇರಿಸುವಂತಿಲ್ಲ, 25 ವರ್ಷದ ಬಳಿಕ ಬಿಡುಗಡೆ ಮಾಡಲೇಬೇಕೆಂದ ಸುಪ್ರೀಂ
ಇದನ್ನು ಪ್ರಶ್ನಿಸಿ ಅಬು ಸಲೇಂ ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದ. ಇದನ್ನು ಪರಿಗಣಿಸಿದ ಕೋರ್ಟ್ ಮಹತ್ವದ ತೀರ್ಪನ್ನು ನೀಡಿ, ಕೇಂದ್ರ ಸರಕಾರವು ಪೋರ್ಚುಗಲ್ ಸರಕಾರಕ್ಕೆ ನೀಡಿರುವ ವಾಗ್ದಾನವನ್ನು ಮುರಿಯುವಂತಿಲ್ಲ. ಶಿಕ್ಷೆಯ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಚನ ಬದ್ಧತೆ ಮತ್ತು ಸಂವಿಧಾನದ 72ನೇ ವಿಧಿಯ ಅಡಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸರಕಾರ ರಾಷ್ಟ್ರಪತಿಗಳ ಸಲಹೆಯನ್ನು ಕೋರಬಹುದು ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತ್ತು.