Site icon Vistara News

Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

Bridge Collapse

ಪಟನಾ: ಬಿಹಾರದಲ್ಲಿ ಸೇತುವೆ ಕುಸಿತ (Bridge Collapse)ದ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದೆ. ಕಳೆದ 9 ವರ್ಷಗಳಿಂದ ನಿರ್ಮಾಣವಾಗುತ್ತಲೇ ಇರುವ ಸೇತುವೆಯೊಂದು 3ನೇ ಬಾರಿ ಕುಸಿದು ಬಿದ್ದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video).

ಬಿಹಾರದ ಭಾಗಲ್ಪುರದ ಸುಲ್ತಂಗಂಜ್‌-ಅಗುವಾನಿ ಘಾಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಶನಿವಾರ (ಆಗಸ್ಟ್‌ 17) ಬೆಳಿಗ್ಗೆ ಕುಸಿದು ಗಂಗಾ ನದಿ ಪಾಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಗಮನಾರ್ಹ ಅಂಶ ಎಂದರೆ ಈ ಸೇತುವೆಯನ್ನೂ ಕಳೆದ 9 ವರ್ಷಗಳಿಂದ ನಿರ್ಮಿಸಲಾಗುತ್ತಿದ್ದು ಇನ್ನೂ ಪೂರ್ಣವಾಗಿಲ್ಲ. ಅಲ್ಲದೆ ಈ ಸೇತುವೆಯ ಕೆಲವೊಂದು ಭಾಗಗಳು ಈ ಹಿಂದೆ ಎರಡು ಬಾರಿ ಕುಸಿದು ಬಿದ್ದಿದ್ದವು.

ನಿರ್ಮಾಣ ಹಂತದ ಸೇತುವೆಯ 9 ಮತ್ತು 10ನೇ ಕಂಬಗಳ ನಡುವಿನ ಭಾಗ ಕುಸಿದು ಬಿದ್ದಿದೆ. ಖಗರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್‌ ಇದಾಗಿದ್ದು, ಈ ಪ್ರದೇಶದ ನಿರ್ಣಾಯಕ ಕೊಂಡಿಯಾದ ವಿಕ್ರಮಶಿಲಾ ಸೇತುವೆ ಮೇಲಿನ ಸಂಚಾರ ದಟ್ಟಣೆಯನ್ನು ನಿವಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಸ್‌.ಪಿ.ಸಿಂಗ್ಲಾ ಕಂಪೆನಿ ಈ ಸೇತುವೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸೇತುವೆ ಕುಸಿತದ ಇತಿಹಾಸ

ಈ ಹಿಂದೆ ಇದೇ ಸೇತುವೆ 2022ರ ಏಪ್ರಿಲ್‌ 27ರಂದು ಮೊದಲ ಬಾರಿ ಕುಸಿದು ಬಿದ್ದಿತ್ತು. ಅದಾಗಿ ಸುಮಾರು ಒಂದು ವರ್ಷದ ಬಳಿಕ ಅಂದರೆ 2023ರ ಜೂನ್‌ 4ರಂದು ಎರಡನೇ ಬಾರಿ ಸೇತುವೆ ಕುಸಿದಿತ್ತು. ಈ ವೇಳೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ನೀರು ಪಾಲಾಗಿದ್ದರು.

2014ರ ಫೆಬ್ರವರಿ 23ರಂದು 3.16 ಕಿ.ಮೀ ಉದ್ದದ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿಯನ್ನು 2015ರ ಮಾರ್ಚ್ 9ರಂದು ಆರಂಭಿಸಲಾಗಿತ್ತು. ಬಿಹಾರ ಸರ್ಕಾರವು ಈ ಯೋಜನೆಗೆ 1,710 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇದೂ ಒಂದು. ಅದಾಗ್ಯೂ ನಿರ್ಮಾಣ ಆರಂಭವಾಗಿ ಸುಮಾರು 9 ವರ್ಷಗಳ ನಂತರವೂ ಸೇತುವೆ ಅಪೂರ್ಣವಾಗಿ ಉಳಿದಿದೆ.

17 ದಿನದಲ್ಲಿ 10 ಸೇತುವೆ ಕುಸಿತ

ಕಳೆದ ಕೆಲವು ದಿನಗಳಿಂದ ಬಿಹಾರದಲ್ಲಿ ಸೇತುವೆಗಳು ಕುಸಿದು ಬೀಳುತ್ತಿದ್ದು, ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ. ಕಳೆದ ತಿಂಗಳು 17 ದಿನಗಳಲ್ಲಿ 10 ಸೇತುವೆಗಳು ಕುಸಿದು ಬಿದ್ದಿದ್ದವು. ಸಣ್ಣ ಮಳೆಯಾದರೂ ಸೇತುವೆಗಳು ಕುಸಿಯುವುದು, ನಿರ್ಮಾಣ ಹಂತದಲ್ಲಿರುವಾಗಲೇ ಸೇತುವೆಗಳು ಧರೆಗುರುಳುವ ಪ್ರಕರಣಗಳು ಜಾಸ್ತಿಯಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಬಿಹಾರ ಸರ್ಕಾರದ (Bihar Government) ವಿರುದ್ಧ ಮುಗಿಬಿದ್ದಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.

ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದರು. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂದು ಟೀಕಿಸಿದ್ದರು.

ಇದನ್ನೂ ಓದಿ: Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Exit mobile version