ವಾಷಿಂಗ್ಟನ್: ತಲೆಯಲ್ಲಿ ಹರಿದಾಡಿ ಕಿರಿಕಿರಿ ಉಂಟು ಮಾಡುವ ಹೇನಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈ ಚಿಕ್ಕ ಜೀವಿ ವಿಮಾನದ ತುರ್ತು ಭೂ ಸ್ಪರ್ಶ (Emergency Landing)ಕ್ಕೆ ಕಾರಣವಾಗಿದೆ ಎಂದರೆ ನಂಬುತ್ತೀರಾ? ನಂಬಲು ಕಷ್ಟ ಅಲ್ಲವೇ? ಆದರೆ ಇಂತಹದ್ದೊಂದು ವಿಚಿತ್ರ ಪ್ರಸಂಗ ಅಮೆರಿಕದಲ್ಲಿ ನಡೆದಿದೆ. ಅರೇ! ಜುಜುಬಿ ಹೇನಿಗಾಗಿ ವಿಮಾನವನ್ನು ತುರ್ತಾಗಿ ಇಳಿಸಿದ್ದು ಯಾಕೆ? ಏನಿದು ಘಟನೆ? ಮುಂತಾದ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Viral News).
ಕೆಲವು ದಿನಗಳ ಹಿಂದೆ ಅಮೆರಿಕದ ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನ (American Airlines flight)ವನ್ನು ಏಕಾಏಕಿ ಫೋನಿಕ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಮಹಿಳಾ ಪ್ರಯಾಣಿಕರೊಬ್ಬರ ತಲೆಯಲ್ಲಿ ಹರಿದಾಡುತ್ತಿದ್ದ ಹೇನು! ಟಿಕ್‌ಟಾಕ್ ಬಳಕೆದಾರ ಎಥಾನ್ ಜುಡೆಲ್ಸನ್ ಜೂನ್‌ನಲ್ಲಿ ನಡೆದ ಈ ಘಟನೆಯನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಏನಿದು ಘಟನೆ?
ಫೋನಿಕ್ಸ್ ವಿಮಾನ ನಿಲ್ದಾಣಕ್ಕೆ ತಲುಪಿದ ನಂತರ ಎಥಾನ್ ಜುಡೆಲ್ಸನ್ ವಿಡಿಯೊ ಮಾಡಿದ್ದಾರೆ. ʼʼನಾನು ಸುಮಾರು 12 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಇದ್ದೆ. ಇದಕ್ಕೆ ಕಾರಣ ಮಹಿಳಾ ಪ್ರಯಾಣಿಕರೊಬ್ಬರ ತಲೆಯಲ್ಲಿ ಕಂಡು ಬಂದ ಹೇನುʼʼ ಎಂದು ಅವರು ಬರೆದುಕೊಂಡಿದ್ದಾರೆ. ಫೋನಿಕ್ಸ್‌ನಲ್ಲಿ ಏಕಾಏಕಿ ಏಕೆ ವಿಮಾನವನ್ನು ಲ್ಯಾಂಡ್ ಮಾಡಲಾಗುತ್ತಿದೆ ಎನ್ನುವುದಕ್ಕೆ ಸಿಬ್ಬಂದಿ ಸೂಕ್ತವಾದ ಕಾರಣ ನೀಡಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ವಿಮಾನ ತುರ್ತು ಭೂ ಸ್ಪರ್ಶ ಮಾಡಲಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದರು. ನನ್ನನ್ನೂ ಸೇರಿದಂತೆ ಹಲವರಿಗೆ ಏನಾಗಿದೆ ಅನ್ನೋದೇ ಗೊತ್ತಾಗಲಿಲ್ಲ. ಭೂಸ್ಪರ್ಶ ಯಾಕೆ ಎನ್ನುವ ಗೊಂದಲ ಕಾಡಿತ್ತು. ವಿಮಾನದಲ್ಲಿರುವ ಎಲ್ಲ ಪ್ರಯಾಣಿಕರು ಆರೋಗ್ಯವಾಗಿದ್ದಾರೆ. ಯಾರೂ ಅಸ್ವಸ್ಥರಾಗಿಲ್ಲ, ಯಾರಿಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಬಿದ್ದಿಲ್ಲ. ಹೀಗಿದ್ದರೂ ತುರ್ತು ಭೂಸ್ಪರ್ಶವೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದರು. ಫೋನಿಕ್ಸ್ ತಲುಪಿದ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದಷ್ಟೇ ವಿಮಾನದ ಸಿಬ್ಬಂದಿ ತಿಳಿಸಿದ್ದರು ಎಂದು ಅಂದಿನ ಘಟನೆಯನ್ನು ಎಂದು ಜುಡೆಲನ್ಸ್ ವಿವರಿಸಿದ್ದಾರೆ.
ಫೋನಿಕ್ಸ್‌ನಲ್ಲಿ ಇಳಿದ ಕೂಡಲೇ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆ ಮಾಡಲಾಯಿತು. ಜತೆಗೆ ಅಮೆರಿಕನ್ ಏರ್‌ಲೈನ್ಸ್ ಪ್ರಯಾಣಿಕರಿಗೆ 12 ಡಾಲರ್ ಅನ್ನು ಒದಗಿಸಿತು. ಪ್ರಯಾಣಿಕರೊಬ್ಬರ ವೈದ್ಯಕೀಯ ಅಗತ್ಯಗಳಿಗಾಗಿ ವಿಮಾನ ಇಳಿಸಲಾಗಿದೆ ಎಂದಷ್ಟೇ ತಿಳಿಸಿದ್ದರು. ಆದರೆ ಈ ಉತ್ತರದಿಂದ ತೃಪ್ತರಾಗದ ಜುಡೆಲನ್ಸ್ ಒಂದಿಬ್ಬರ ಬಳಿ ಮತ್ತೂ ವಿಚಾರಿಸಿದ್ದರು. ಆಗ ಇಬ್ಬರು ಮಹಿಳೆಯರು ಹೇನಿನ ರಹಸ್ಯ ತಿಳಿಸಿದ್ದರು. ತಾವು ಮಹಿಳೆಯೊಬ್ಬರ ತಲೆಯಲ್ಲಿ ಹೇನು ಓಡಾಡುತ್ತಿರುವುದನ್ನು ನೋಡಿ ವಿಮಾನ ಸಿಬ್ಬಂದಿಯ ಗಮನಕ್ಕೆ ತಂದಿರುವುದಾಗಿಯೂ ಅದಕ್ಕಾಗಿ ಅವರು ವಿಮಾನವನ್ನು ಫೋನಿಕ್ಸ್‌ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಿದ್ದಾಗಿ ಜುಡೆಲನ್ಸ್ ಅವರಿಗೆ ಹೇಳಿದ್ದರು. ಇದನ್ನೆಲ್ಲ ಜುಡೆಲನ್ಸ್ ವಿಡಿಯೊದಲ್ಲಿ ವಿವರಿಸಿದ್ದಾರೆ.
ನಿಜವಾದ ಕಾರಣ ಬಹಿರಂಗ ಪಡಿಸದ ಏರ್‌ಲೈನ್ಸ್
ಅಮೆರಿಕನ್ ಏರ್‌ಲೈನ್ಸ್‌ನ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ನಿಜವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ʼʼಜೂನ್ 15ರಂದು ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ 2201 ಅನ್ನು ಗ್ರಾಹಕರ ವೈದ್ಯಕೀಯ ಅಗತ್ಯಗಳಿಂದಾಗಿ ಫೋನಿಕ್ಸ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಯಿತುʼʼ ಎಂದಷ್ಟೇ ತಿಳಿಸಿದ್ದಾರೆ. ಒಟ್ಟಿನಲ್ಲಿ ಹೇನಿನಿಂದಾಗಿ ವಿಮಾನವನ್ನೇ ತುರ್ತು ಭೂ ಸ್ಪರ್ಶ ಮಾಡಿಸಿದ ಈ ಘಟನೆಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.