ಜೈಪುರ: ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತಿದೆ. ಜತೆಗೆ ಗಡಿಯ ಹಂಗೂ ಇಲ್ಲ. ಈಗಾಗಲೇ ಎರಡು ದೇಶಗಳ ಪ್ರೇಮಿಗಳು ಭಾಷೆ, ಧರ್ಮದ ಗಡಿಯನ್ನು ಮೀರಿ ಒಂದಾಗಿರುವುದನ್ನು ನೋಡಿದ್ದೇನೆ. ಬಹುತೇಕ ಸಂದರ್ಭದಲ್ಲಿ ಇದಕ್ಕೆ ಸೋಷಿಯಲ್ ಮೀಡಿಯಾವೇ ತಳಹದಿ ಎನ್ನುವುದು ವಿಶೇಷ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಪಾಕಿಸ್ತಾನದ ಮಹಿಳೆ, ಎರಡು ಮಕ್ಕಳ ತಾಯಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಪ್ರಿಯತಮನ್ನು ಹುಡುಕಿಕೊಂಡು ರಾಜಸ್ಥಾನಕ್ಕೆ ಆಗಮಿಸಿದ್ದಾರೆ (Indo-Pak Romance). ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral News).
ಆನ್‌ಲೈನ್ ಪಬ್ ಜಿ ಗೇಮ್ ಆಡುವಾಗ ಪರಿಚಯವಾದ ಗ್ರೇಟರ್ ನೊಯ್ಡಾದ ಸಚಿನ್ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದರು. ಇದು ಕೂಡ ಅದನ್ನೇ ಹೋಲುವ ಘಟನೆ. ಇದೀಗ ಭಾರತಕ್ಕೆ ಬಂದ ಮಹಿಳೆಯ ಹೆಸರು 25 ವರ್ಷದ ಮೆಹ್ವಿಶ್. ಮೆಹ್ವಿಶ್ ಗಡಿಯನ್ನು ದಾಟಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಬಾಳಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಬಂದಿರುವುದು ಮತ್ತೊಮ್ಮೆ ಸದ್ದು ಮಾಡುತ್ತಿದೆ.
ಲಾಹೋರ್ ಮೂಲದ ಮೆಹ್ವಿಶ್ ಮಾಧ್ಯಮಗಳೊಂದಿಗೆ ತಮ್ಮ ಲವ್‌ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಮೆಹ್ವಿಶ್‌ಗೆ 2 ವರ್ಷ ತುಂಬುವಷ್ಟರಲ್ಲಿ ತಾಯಿ ನಿಧನ ಹೊಂದಿದ್ದರು. 10ನೇ ವರ್ಷದಲ್ಲಿ ಅವರು ತಂದೆಯನ್ನು ಕಳೆದುಕೊಂಡರು. ಬಳಿಕ ಅವರು ಇಸ್ಲಾಮಾಬಾದ್‌ಗೆ ತೆರಳಿ ಸಹೋದರಿ ಶಹಿಮಾ ಅವರೊಂದಿಗೆ ವಾಸಿಸತೊಡಗಿದರು. ಬ್ಯೂಟಿ ಪಾರ್ಲರ್ ಕೋರ್ಸ್ ಮಾಡಿರುವ ಅವರು ಕಳೆದ ಒಂದು ದಶಕದಿಂದ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.
ಇಬ್ಬರು ಮಕ್ಕಳು
ಅಚ್ಚರಿ ಎಂದರೆ ಮೆಹ್ವಿಶ್ ವಿವಾಹಿತೆ. ಬಾದಮಿ ಬಾಘ್ ಎನ್ನುವವರನ್ನು ಅವರು ಕೆಲವು ವರ್ಷಗಳ ಹಿಂದೆ ವರಿಸಿದ್ದರು. ಈ ದಂಪತಿಗೆ 12 ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. 2018ರಲ್ಲಿ ಈ ದಂಪತಿ ವಿಚ್ಚೇಧನ ಪಡೆದುಕೊಂಡಿದ್ದು, ಬಾದಮಿ ಬಾಘ್ ಮರುಮದುವೆಯಾಗಿದ್ದಾರೆ. ಬಳಿಕ ಮೆಹ್ವಿಶ್‌ಗೆ ಫೇಸ್‌ಬುಕ್‌ನಲ್ಲಿ ರೆಹಮಾನ್ ಪರಿಚಯವಾಗಿತ್ತು. 2022ರಂದು ಮೆಹ್ವಿಶ್ ತನ್ನ ಸಹೋದರಿಯೊಂದಿಗೆ ಚರ್ಚೆ ನಡೆಸಿ ಕುವೈತ್‌ನಲ್ಲಿ ಕೆಲಸ ಮಾಡುವ ರೆಹಮಾನ್ ಬಳಿ ಮದುವೆಯ ಪ್ರಸ್ತಾವ ಇಟ್ಟಿದ್ದರು. 2022ರ ಮಾರ್ಚ್ 16ರಂದು ಇಬ್ಬರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿವಾಹಿತರಾಗಿದ್ದರು. ನಂತರ ಅವರು 2023ರಲ್ಲಿ ಉಮ್ರಾ ತೀರ್ಥಯಾತ್ರೆಯ ಸಮಯದಲ್ಲಿ ಮೆಕ್ಕಾದಲ್ಲಿ ಭೇಟಿಯಾಗಿ ತಮ್ಮ ಮದುವೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು.
ಸ್ವಾಗತ
ಮೆಹ್ವಿಶ್ ಜುಲೈ 25ರಂದು ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್‌ನಿಂದ ವಾಘಾ ಗಡಿಗೆ ಆಗಮಿಸಿದರು. ಪಾಕಿಸ್ತಾನ ಮತ್ತು ಭಾರತೀಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ ನಂತರ 45 ದಿನಗಳ ಪ್ರವಾಸಿ ವೀಸಾದಲ್ಲಿ ಅವರು ಭಾರತ ಪ್ರವೇಶಿಸಿದ್ದರು. ರೆಹಮಾನ್ ಕುಟುಂಬವು ಆಕೆಯನ್ನು ಪಿಥಿಸರ್ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿದೆ.
ಮೆಹ್ವಿಶ್ ಆಗಮನವು ಎಲ್ಲೆಡೆ ಸುದ್ದಿಯಾದ ಹಿನ್ನೆಲೆಯಲ್ಲಿ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ತನಿಖೆ ನಡೆಸುತ್ತಿವೆ. ಸ್ಥಳೀಯ ಪೊಲೀಸರು ಕೂಡ ಪ್ರಶ್ನಿಸಿದ್ದಾರೆ ಹಾಗೂ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪರಿಶೀಲಿಸಿದ್ದಾರೆ. ರೆಹಮಾನ್ 2011ರಲ್ಲಿ ಭದ್ರಾ ಮೂಲದ ಫರೀದಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಫರೀದಾ ತನ್ನ ಮಕ್ಕಳೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಕಾನೂನು ಪ್ರಕಾರ ಇವರು ವಿಚ್ಛೇಧನ ಪಡೆದುಕೊಂಡಿಲ್ಲ. ಇದೀಗ ತನ್ನ ಗಂಡನ ಪ್ರಿಯತಮೆ ಪಾಕಿಸ್ತಾನದಿಂದ ಬಂದಿರುವುದನ್ನು ತಿಳಿದು ಫರೀದಾ ಆಕೆಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮೆಹ್ವಿಶ್ ಗೂಢಚಾರಿಯಾಗಿರಬಹುದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಿನಿಮಾ ಕಥೆಯನ್ನು ಹೋಲುತ್ತದೆ ಎಂದಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: Seema Haider: ಮತ್ತೆ ಸುದ್ದಿಯಾದ ಸೀಮಾ ಹೈದರ್; ಇದು ಗಡಿಯಾಚೆಗಿನ ಪ್ರೇಮ ಕಥೆಯೋ ಅಥವಾ ಪಾಕ್ ಗೂಢಚಾರಿಕೆಯೋ?