ಹುಬ್ಬಳ್ಳಿ: ಪ್ರೇಮಕಲಹ (Lovers Fight) ಬೀದಿಗೆ ಬಂದರೆ ಸಾರ್ವಜನಿಕರಿಂದ ಏಟೂ ತಿನ್ನಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ. ಫೋನ್‌ಗಾಗಿ (mobile phone) ರಸ್ತೆ ಪಕ್ಕದಲ್ಲೇ ಪ್ರೇಮಿಗಳು ಜಗಳ ಮಾಡಿಕೊಂಡಿದ್ದು, ಅದು ಸಾರ್ವಜನಿಕ ಸಭ್ಯತೆ ಮೀರಿದಾಗ ಹುಡುಗನಿಗೆ ಸಾರ್ವಜನಿಕರ ಗೂಸಾ ಬಿದ್ದಿದೆ.
ಹುಬ್ಬಳ್ಳಿಯ (Hubli news) ಕೊಪ್ಪಿಕರ ರಸ್ತೆಯ ಮಾಲ್ ಬಳಿ ಘಟನೆ ನಡೆದಿದೆ. ಕಿತ್ತಾಡುತ್ತಿರುವ ಪ್ರೇಮಿಗಳ ಜಗಳದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್ ಸುತ್ತು ಹಾಕಿ ಎಳೆದಾಡಿದ್ದಾನೆ ಹುಡುಗ.
ಲವರ್ ಬಾಯ್‌ನ ಈ ಕೃತ್ಯ ನೋಡಿದ ಸ್ಥಳೀಯರು ರೊಚ್ಚಿಗೆದ್ದು ಮಧ್ಯಪ್ರವೇಶಿಸಿದ್ದಾರೆ. ನಮ್ಮ ಮಧ್ಯೆ ನೀವು ಬಂದಿದ್ದೇಕೆ ಎಂದು ಉಡಾಫೆಯಿಂದ ಹುಡುಗ ಉತ್ತರಿಸಿದಾಗ ಕ್ರುದ್ಧರಾದ ಸಾರ್ವಜನಿಕರು ಆತನಿಗೆ ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ. ʼಸಾರ್ವಜನಿಕ ಸಭ್ಯತೆ ಪಾಲಿಸಿʼ ಎಂದು ಪಾಠ ಹೇಳಿದ್ದಾರೆ. ಲವರ್ಸ್ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.
ರೀಲ್ಸ್‌ಗಾಗಿ ಗನ್ ತೋರಿಸಿ ಶೋಕಿ ಮಾಡಿದವನು ಜೈಲುಪಾಲು
ಬೆಂಗಳೂರು: ರಿಲ್ಸ್ ಶೋಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದಾರೆ. ಈತ ಎಕೆ 47 (AK 47 Rifle) ರೈಫಲ್ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು.
ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ.
ಈತ ಬಾಡಿಗಾರ್ಡ್ಸ್ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು.
ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿದೆ. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.
ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು