ರೋಮ್: ಇಟಲಿಯಲ್ಲಿ ನಡೆದ 50ನೇ ಆವೃತ್ತಿಯ ಜಿ 7 ಶೃಂಗಸಭೆಯಲ್ಲಿ (G 7 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದಾರೆ. ಈ ವೇಳೆ ಮೋದಿ ಮತ್ತು ಇಟಲಿ ಪ್ರಧಾನಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಜತೆಯಾಗಿ ಸೆಲ್ಫಿಗೆ ಪೋಸ್ ನೀಡಿದ್ದು, ಸದ್ಯ ಈ ವಿಡಿಯೊ, ಫೋಟೊ ಭಾರಿ ಸದ್ದು ಮಾಡುತ್ತಿದೆ (Viral News). ಮೋದಿ ಹಾಗೂ ಮೆಲೋನಿ ಅವರು ಹಿಂದಿನಿಂದಲೂ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರ ಹೆಸರನ್ನು ಸೇರಿಸಿ ಮೆಲೋಡಿ (Melodi) ಎಂದೇ ನೆಟ್ಟಿಗರು ಸಂಬೋಧಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೆಲೋಡಿ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ನರೇಂದ್ರ ಮೋದಿ ಅವರೊಂದಿಗೆ ನಿಂತಿರುವ ವಿಡಿಯೊವನ್ನು ಮಲೋನಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ʼHello from the Melodi teamʼ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ನಗು ನಗುತ್ತಾ ಮೋದಿ ಪೋಸ್ ನೀಡುತ್ತಿರುವುದು ಕಂಡು ಬಂದಿದ್ದು, ನೆಟ್ಟಿಗರ ಗಮನ ಸೆಳೆದಿದೆ.
Hi friends, from #Melodi pic.twitter.com/OslCnWlB86
— Giorgia Meloni (@GiorgiaMeloni) June 15, 2024
ಇದಕ್ಕೂ ಮುನ್ನ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಇಬ್ಬರೂ ಸೆಲ್ಫಿ ಕ್ಲಿಕ್ಕಿಸುತ್ತಿರುವ ಫೋಟೊ ಕೂಡ ವೈರಲ್ ಆಗಿತ್ತು. ಮೆಲೋನಿ ಫೋಟೊ ಕ್ಲಿಕ್ಕಿಸುತ್ತಿದ್ದಂತೆ ಇಬ್ಬರು ನಾಯಕರು ನಗುತ್ತ ಕ್ಯಾಮೆರಾದತ್ತ ಮುಖ ಮಾಡುತ್ತಿರುವುದು ಕಂಡು ಬಂದಿತ್ತು.
ಭಾರತ ಜಿ 7ಯ ಸದಸ್ಯ ರಾಷ್ಟ್ರವಲ್ಲದಿದ್ದರೂ ಮೆಲೋನಿ ಅವರ ವಿಶೇಷ ಆಹ್ವಾನದ ಮೇರೆಗೆ ಮೋದಿ ಇಟಲಿಗೆ ತೆರಳಿದ್ದರು. ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೋದಿ ಅವರ ಮೊದಲ ವಿದೇಶ ಪ್ರವಾಸ ಇದಾಗಿತ್ತು. ಶೃಂಗಸಭೆ ನಡೆಯುವ ಸ್ಥಳಕ್ಕೆ ತೆರಳಿದ ನರೇಂದ್ರ ಮೋದಿ ಅವರಿಗೆ ಮೆಲೋನಿ ಅವರು ನಮಸ್ತೆ ಎಂದು ಕೈಮುಗಿದು ಭಾರತದ ಸಂಪ್ರದಾಯದಂತೆ ಸ್ವಾಗತ ಕೋರಿದ್ದರು.
Had a very good meeting with PM @GiorgiaMeloni. Thanked her for inviting India to be a part of the G7 Summit and for the wonderful arrangements. We discussed ways to further cement India-Italy relations in areas like commerce, energy, defence, telecom and more. Our nations will… pic.twitter.com/PAe6sdNRO9
— Narendra Modi (@narendramodi) June 14, 2024
ಮಹತ್ವದ ಮಾತುಕತೆ
ಈ ವೇಳೆ ಮೋದಿ ಮತ್ತು ಮೆಲೋನಿ ಅವರು ರಕ್ಷಣಾ ಮತ್ತು ಭದ್ರತಾ ಸಹಕಾರದ ಬಗ್ಗೆ ಚರ್ಚೆ ನಡೆಸಿದರು. ಇಟಲಿಯ ಮಾಂಟೋನ್‌ನಲ್ಲಿರುವ ಯಶವಂತ್ ಘಡ್ಗೆ ಸ್ಮಾರಕವನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದರು. ಎರಡೂ ದೇಶಗಳ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಯೋಗದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಉಭಯ ನಾಯಕರು, ಇಂಧನ, ಉತ್ಪಾದನೆ, ಬಾಹ್ಯಾಕಾಶ, ಟೆಲಿಕಾಂ, ಎಐ ಮುಂತಾದ ಕ್ಷೇತ್ರಗಳಲ್ಲಿ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸಯವ ಬಗ್ಗೆ ಮಾತುಕತೆ ನಡೆಸಿದರು.
“ವಾಣಿಜ್ಯ, ಇಂಧನ, ರಕ್ಷಣೆ, ಟೆಲಿಕಾಂ ಮತ್ತಿತರ ಕ್ಷೇತ್ರಗಳಲ್ಲಿ ಭಾರತ-ಇಟಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಜೈವಿಕ ಇಂಧನಗಳು, ಆಹಾರ ಸಂಸ್ಕರಣೆ ಮತ್ತು ನಿರ್ಣಾಯಕ ಖನಿಜಗಳಂತಹ ಭವಿಷ್ಯದ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆʼʼ ಎಂದು ಮೋದಿ ತಿಳಿಸಿದ್ದಾರೆ.
ಈ ಬಾರಿಯ ಜಿ 7 ಶೃಂಗಸಭೆಯಲ್ಲಿ ಯುರೋಪಿಯನ್ ಯೂನಿಯನ್ ಜತೆಗೆ ಅಮೆರಿಕ, ಇಂಗ್ಲೆಂಡ್, ಕೆನಡಾ, ಜರ್ಮನಿ, ಇಟಲಿ, ಜಪಾನ್ ಮತ್ತು ಫ್ರಾನ್ಸ್‌ನ ನಾಯಕರು ಭಾಗವಹಿಸಿದ್ದರು. ಇದು ಜಿ 7 ಶೃಂಗಸಭೆಯಲ್ಲಿ ಭಾರತದ 11ನೇ ಮತ್ತು ಪ್ರಧಾನಿ ಮೋದಿ ಅವರ ಸತತ ಐದನೇ ಭಾಗವಹಿಸುವಿಕೆ ಎನಿಸಿಕೊಂಡಿದೆ.
#WATCH | Italy: Prime Minister of Italy Giorgia Meloni receives Prime Minister Narendra Modi as India participates as an 'Outreach nation' in G7 Summit pic.twitter.com/Sqna3AEu9X
— ANI (@ANI) June 14, 2024
2023ರ ಡಿಸೆಂಬರ್ 2ರಂದು ಯುಎಇ ದೇಶದ ರಾಜಧಾನಿ ದುಬೈನಲ್ಲಿ ನಡೆದ 28ನೇ ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ (COP28) ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದೇ ವೇಳೆ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. “ಸಿಒಪಿ28 ಸಭೆಯಲ್ಲಿ ಆತ್ಮೀಯ ಸ್ನೇಹಿತರು” ಎಂದು ಒಕ್ಕಣೆ ಬರೆದಿದ್ದರು. ಅಷ್ಟೇ ಅಲ್ಲ, ಮೆಲೋನಿ+ಮೋದಿ= ಮೆಲೋಡಿ ಎಂಬ ಅರ್ಥ ಬರುವ ಕಾರಣ ಮೆಲೋಡಿ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದರು. ಈ ಫೋಟೊ ಭಾರಿ ವೈರಲ್ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: Narendra Modi: ಸ್ನೇಹಿತ ಮೋದಿಯನ್ನು ಕೈಮುಗಿದು ಆತ್ಮೀಯವಾಗಿ ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ; Video ಇದೆ