ಹುಬ್ಬಳ್ಳಿ: ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Minister Santhosh Lad) ಅವರು ಇತ್ತೀಚೆಗೆ ಪ್ರಬಲ ಮೋದಿ ಟೀಕಾಕಾರನಾಗಿ (Critic of Narendra Modi) ಬದಲಾಗಿದ್ದಾರೆ. ತುಂಬ ಅಧ್ಯಯನ ಮಾಡಿ, ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚರ್ಚೆಗಳಲ್ಲಿ, ಸಭೆಗಳಲ್ಲಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಹಾಗಿದ್ದರೆ ಸಂತೋಷ್ ಲಾಡ್ ಒಮ್ಮಿಂದೊಮ್ಮೆಗೆ ಹೀಗೆ ಪ್ರಖರ ಟೀಕಾಕಾರನಾಗಿ ಬದಲಾಗಿದ್ದು ಹೇಗೆ? ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರಿಗೆ ಸ್ಪಷ್ಟ ಉತ್ತರ ಸಿಕ್ಕಿದೆಯಂತೆ!
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್ ಜೋಶಿ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಂತೋಷ್ ಲಾಡ್ ಬೈಗುಳದ ರಹಸ್ಯ ತೆರೆದಿಟ್ಟಿದ್ದಾರೆ.
ಸಂತೋಷ್ ಲಾಡ್ ಅವರು ಇತ್ತೀಚೆಗೆ ನನ್ನನ್ನು ಮತ್ತು ಮೋದಿಯವರನ್ನು ನಿರಂತರವಾಗಿ ಬಯ್ಯುತ್ತಿದ್ದಾರೆ, ಟೀಕೆ ಮಾಡುತ್ತಿದ್ದಾರೆ. ಅವರು ಈ ರೀತಿಯ ಟೀಕೆ ಮಾಡುತ್ತಿರುವುದು ತಮ್ಮ ಸಚಿವ ಪದವಿ ಉಳಿಸಿಕೊಳ್ಳಲು. ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಜೋಶಿ ಹೇಳಿದರು.
ನಾನು ಮತ್ತು ಲಾಡ್ ಆಗಾಗ ಫ್ಲೈಟ್‌ನಲ್ಲಿ ಸಿಗ್ತಾ ಇರುತ್ತೇವೆ. ದಿಲ್ಲಿಯಿಂದ ಬರುವಾಗ, ಬೆಂಗಳೂರಿನಿಂದ ಬರುವಾಗ ಸಿಗುತ್ತೇವೆ. ಮಾತಾಡಿಕೊಳ್ತೇವೆ. ಒಂದು ದಿನ ನಾನು ಕೇಳಿದೆ. ನೀವು ನನ್ನ ಮೇಲೆ ನಿರಂತರವಾಗಿ ಟೀಕೆ ಮಾಡ್ತಾ ಇರ್ತೀರಿ. ಅದೇನೂ ತೊಂದರೆ ಇಲ್ಲ. ನಾನು ಸಣ್ಣವನು. ಆದರೆ, ಮೋದಿ ಅವರ ಮೇಲೂ ದಾಳಿ ಮಾಡ್ತೀರಲ್ಲಾ, ನಿಮ್ಮ ಪರಿಸ್ಥಿತಿ ಏನು? ಎಂದು ಕೇಳಿದೆ.
ನಾನು ಮತ್ತು ಸಂತೋಷ್ ಲಾಡ್ ಹಿಂದಿಯಲ್ಲಿ ಮಾತಾಡೋದು ಜಾಸ್ತಿ. ಅವರು ಹಿಂದಿಯಲ್ಲಿ ಹೇಳಿದರು: ಕ್ಯಾ ಕರೂ ಸಾಬ್, ಊಪರ್ ಸೇ ಇನ್‌ಸ್ಟ್ರಕ್ಷನ್ ಹೈ, ಮೈ ಡೈಲಿ ಗಾಲಿ ನಹೀ ದಿಯಾ ತೋ ನೌಕರಿ ಚಲೀ ಜಾತೀ ಹೈ! (ಏನು ಮಾಡಲಿ ಸಾಹೇಬ್ರೆ.. ಮೇಲಿನಿಂದ ನನಗೆ ಸೂಚನೆ ಇದೆ. ದಿನಾ ಬಯ್ಯದೆ ಹೋದರೆ ನನ್ನ ಕೆಲಸವೇ ಹೋಗಿ ಬಿಡ್ತದೆ) ಎಂದು ಹೇಳಿದೆ.
ಆಗಿಂದ ನಾನು ತಲೆ ಕೆಡಿಸಿಕೊಂಡಿಲ್ಲ, ನೀವು ತಲೆ ಕೆಡಿಸಿಕೊಳ್ಳಬೇಡಿ. ಉತ್ತರ ಕೊಡುವಾಗ ಕೊಡ್ತೀನಿ ಎಂದು ಜೋಶಿಯವರು ಸಭೆಯಲ್ಲಿ ಹೇಳುವ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : Lok Sabha Election 2024: ಈಶ್ವರಪ್ಪ ಬದಲಾಗುತ್ತಾರೆಂದ ಜೋಶಿ; ಕ್ಷೇತ್ರ ಬದಲಾವಣೆ ಆಗಲ್ಲ ಎಂದ ಬೊಮ್ಮಾಯಿ
Pralhad Joshi : ಸಂತೋಷ್ ಲಾಡ್ ಮಾಡಿದ ಪ್ರಮುಖ ಟೀಕೆಗಳೇನು?
- ಮೋದಿಯವರು ಅವರು ಯಾವುದೇ ಪತ್ರಿಕಾಗೋಷ್ಠಿ ಎದುರಿಸಲ್ಲ. ಎಲ್ಲವೂ ಪೂರ್ವ ನಿರ್ಧರಿತ ಮಾತು ಮಾತ್ರ. ಅವರು ನೇರ ಪ್ರಶ್ನೆಗೆ ಉತ್ತರ ನೀಡಿದರೆ ಅವರ ಬಂಡವಾಳ ಬಯಲಾಗುತ್ತದೆ.
- ಕಳೆದ ಬಾರಿ ಪುಲ್ವಾಮ ದಾಳಿಯಿಟ್ಟುಕೊಂಡು ಚುನಾವಣೆ ಎದುರಿಸಿದ ಬಿಜೆಪಿ, ಬಳಿಕ ಆ ಕುರಿತ ಚರ್ಚೆಯನ್ನೇ ಮಾಡಲಿಲ್ಲ.
- ಕಳೆದ 9 ವರ್ಷಗಳ ಕಾಲ ಶ್ರೀರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಿಲ್ಲ. ಇದೀಗ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ
- ದೇಶದ ಬಹುತೇಕ ಬಿಜೆಪಿ ನಾಯಕರು ಹಿಂದೂ -ಮುಸ್ಲಿಂ ಎಂದು ಮಾತನಾಡುತ್ತಿದ್ದಾರೆಯೇ ವಿನಃ ದೇಶದ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ.
- ಬುಲೆಟ್ ಟ್ರೇನ್ ಬಿಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ವರೆಗೂ ಬುಲೆಟ್ ಟ್ರೇನ್ ಬರಲಿಲ್ಲ. ನಾವು ಟಿಕೆಟ್ ತೆಗೆದುಕೊಂಡು ಕಾಯುತ್ತಿದ್ದೇವೆ.
- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕರ್ನಾಟಕವನ್ನು ತಾಲಿಬಾನ್‌ಗೆ ಹೋಲಿಸಿದ್ದರು. ಆಗ ಯಾರೂ ಖಂಡಿಸಲಿಲ್ಲ. ಕಾಂಗ್ರೆಸ್ ಎಂದಾಕ್ಷಣ ಮಾಧ್ಯಮಗಳ ಎದುರು ಬಿಜೆಪಿ ನಾಯಕರು ಪ್ರತ್ಯಕ್ಷವಾಗಿಬಿಡುತ್ತಾರೆ.