Site icon Vistara News

Viral News: ಶ್ವಾನದ ಜತೆ ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಯ ವೇಳೆ ಹಲ್ಲೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

Viral News

Viral News

ಹೈದರಾಬಾದ್‌: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ನಾಯಿ ದಾಳಿಯಿಂದ ಮಕ್ಕಳು ಬಲಿಯಾಗಿರುವ ಘಟನೆಯೂ ಅಲ್ಲಲ್ಲಿ ವರದಿಯಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ರಸ್ತೆಯಲ್ಲಿ ಓಡಾಡುವಾಗ ನಾಯಿ ಕಂಡರೆ ಬೆಚ್ಚಿ ಬೀಳುವಂತಾಗಿದೆ. ಈ ಮಧ್ಯೆ ಸಾಕು ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜತೆಗೆ ವ್ಯಕ್ತಿಯನ್ನು ರಕ್ಷಿಸಲು ಬಂದ ಮನೆಯವರಿಗೂ ಹೊಡೆತ ಬಿದ್ದಿದೆ. ಸದ್ಯ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದೆ (Viral News).

ಹೈದರಾಬಾದ್‌ನ ರಹಮತ್‌ನಗರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಗುಂಪು ದೊಣ್ಣೆ ತೆಗೆದುಕೊಂಡು ಹಲ್ಲೆ ನಡೆಸುವ ದೃಶ್ಯ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ವಿವಿಧ ಸೆಕ್ಷನ್‌ ಅಡಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೇ 8ರಂದು ಮಧು, ಆತನ ಸಹೋದರ ಶ್ರೀನಾಥ್‌ ಮತ್ತು ಆತನ ಸ್ನೇಹಿತ ತಮ್ಮ ನೆಚ್ಚಿನ ಸಾಕು ನಾಯಿ ಸೈಬೇರಿಯನ್‌ ಹಸ್ಕಿ ಜತೆ ವಾಕಿಂಗ್‌ ಹೊರಟಿದ್ದರು. ಈ ವೇಳೆ ನಾಯಿ ತಮ್ಮ ಮೇಲೆ ದಾಳಿ ನಡೆಸಿದೆ ಎಂದು ನೆರೆಮನೆಯ ಧನಂಜಯ್‌ ಮತ್ತು ಆತನ ಮನೆಯವರು ಆರೋಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಎರಡೂ ಕಡೆಯವರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಘಟನೆ ವಿವರ

ಶ್ರೀನಾಥ್ ಅವರು ತಮ್ಮ ನಾಯಿಯನ್ನು ಕರೆದುಕೊಂಡು ವಾಕಿಂಗ್‌ ಹೋಗಿದ್ದರು. ಇದೇ ಸಮಯದಲ್ಲಿ ಧನಂಜಯ್ ಮತ್ತು ಆತನ ಇಬ್ಬರು ಸ್ನೇಹಿತರೂ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಈ ವೇಳೆ ಶ್ರೀನಾಥ್ ನಾಯಿಯ ಹಗ್ಗವನ್ನು ಬಿಗಿಯಾಗಿ ಹಿಡಿದಿರುವುದು ಕಂಡು ಬಂದಿದೆ. ಜತೆಗೆ ನಾಯಿ ಧನಂಜಯ್‌ ಮೇಲೆ ದಾಳಿ ನಡೆಸಲು ಮುಂದಾಗಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ. ಬಳಿಕ ಆತ ಅಲ್ಲಿಂದ ಆಚೆ ಬರುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಧನಂಜಯ್‌ ಮತ್ತು ಇತರರು ದೊಣ್ಣೆ ಹಿಡಿದುಕೊಂಡು ಶ್ರೀನಾಥ್‌ ಬಳಿಗೆ ಬರುತ್ತಾರೆ. ನಂತರ ಹಲ್ಲೆ ನಡೆಸುತ್ತಾರೆ. ಶ್ರೀನಾಥ್‌ ನೆಲದ ಮೇಲೆ ಬಿದ್ದಾಗಲೂ ಸುಮ್ಮನಾಗದ ಧನಂಜಯ್‌ ಮತ್ತು ತಂಡ ಮತ್ತೂ ಹೊಡೆಯುತ್ತಾರೆ. ಇದೇ ವೇಳೆ ಶ್ರೀನಾಥ್‌ ಮನೆಯವರು ಆತನ ನೆರವಿಗೆ ಧಾವಿಸುತ್ತಾರೆ. ಧಾವಿಸಿ ಬಂದ ಶ್ರೀನಾಥ್‌ ಕುಟುಂಬದ ಮಹಿಳೆಗೂ ಹೊಡೆತ ಬೀಳುತ್ತದೆ.

ಸ್ವಲ್ಪ ಹೊತ್ತೆನಲ್ಲೇ ನೆರೆಹೊರೆಯವರೆಲ್ಲ ಗುಂಪುಗೂಡುತ್ತಾರೆ. ಬಳಿಕ ಹಲ್ಲೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗುತ್ತಾರೆ. ಗಾಯಗೊಂಡ ಶ್ರೀನಾಥ್‌ ಮತ್ತು ಆತನ ಮನೆಯವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಗೊಳಗಾದ ನಾಯಿಗೂ ಚಿಕಿತ್ಸೆ ನೀಡಲಾಗಿದೆ. ದೂರುಗಳ ಆಧಾರದ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆ ನೆಟ್ಟಿಗರ ಗಮನ ಸೆಳೆದಿದ್ದು ತೀವ್ರ ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: Viral News: ಪಿಟ್‌ಬುಲ್‌ ದಾಳಿಯಿಂದ ಬಾಲಕನ್ನು ರಕ್ಷಿಸಿದ ಬೀದಿ ನಾಯಿಗಳು; ವಿಡಿಯೊ ಇಲ್ಲಿದೆ

Exit mobile version