ಲಕ್ನೋ: ಪ್ರತ್ಯಕ್ಷ ದೇವರು ಎಂದರೆ ಅದು ತಾಯಿ. ತನ್ನೆಲ್ಲ ಕಷ್ಟಗಳನ್ನು ನುಂಗಿ ಮಕ್ಕಳು ಚೆನ್ನಾಗಿರಬೇಕು ಎಂದು ಸದಾ ಹಾರೈಸುವ ನಿಸ್ವಾರ್ಥ ಜೀವ ಅದು. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತೇ ಸಾಕು ತಾಯಿಯ ನಿಷ್ಕಲ್ಮಶ ಪ್ರೀತಿಯನ್ನು ಸಾರಲು. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ. ಯಾಕೆಂದರೆ ಪಾಪಿ ಮಗನೊಬ್ಬ ದೊಣ್ಣೆ ಹಿಡಿದು ತನ್ನ ತಾಯಿಯನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾನೆ. ಅದೂ ದೇವಸ್ಥಾನದ ಮುಂದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral News). ನೆಟ್ಟಿಗರು ಈ ಪಾಪಿ ಮಗನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ವಿವರ
ಉತ್ತರ ಪ್ರದೇಶದ ಬುಲಂದ್ಶಹರ್ (Bulandshahr)ನಲ್ಲಿ ಈ ಅಮಾನುಷ ಘಟನೆ ನಡೆದಿದೆ. ಇದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ವ್ಯಕ್ತಿಯೊಬ್ಬ ದೊಣ್ಣೆ ಹಿಡಿದುಕೊಂಡು ತನ್ನ ತಾಯಿಯನ್ನು ದೇವಸ್ಥಾನದ ಸುತ್ತ ಅಟ್ಟಾಡಿಸಿಕೊಂಡು ಹೋಗುತ್ತಾನೆ. ಈ ಬಡಪಾಯಿ ತಾಯಿ ಮಗನಿಂದ ತಪ್ಪಿಸಿಕೊಳ್ಳಲು ದೇವಸ್ಥಾನದ ಸುತ್ತ ಓಡುತ್ತಾರೆ. ಕೊನೆಗೆ ಸುಸ್ತಾಗಿ ದೇವಸ್ಥಾನ ಮುಂದೆ ನಿಂತು ಬಿಡುತ್ತಾರೆ. ಆಗ ಅಲ್ಲಿಗೆ ಆಗಮಿಸಿದ ಮಗ ಜನರೆಲ್ಲ ನೋಡುತ್ತಿದ್ದಂತೆ ದೊಣ್ಣೆಯನ್ನು ಬೀಸಿ ತಾಯಿಗೆ ಹೊಡೆಯುತ್ತಾನೆ. ತಾಯಿ ಅಂಗಲಾಚಿ ಬೇಡುತ್ತಿದ್ದರೂ ಸ್ವಲ್ಪವೂ ಕರುಣೆ ಇಲ್ಲದೆ ಹಲ್ಲೆ ನಡೆಸುತ್ತಾನೆ.
बुलन्दशहर : कलयुगी बेटे ने विधवा मां को पीटा
— News1Indiatweet (@News1IndiaTweet) April 2, 2024
मंदिर के सामने मां को डंडे से पीटा
बेटे की पीटाई के डर से दौड़ती रही बुजुर्ग मां
बेरहम बेटे को नहीं आया बुजुर्ग मां पर रहम
आरोपी को भीड़ ने पकड़कर पुलिस को सौंपा
पुलिस ने वायरल वीडियो को देखा
कलयुगी बेटे के खिलाफ दर्ज की एफआईआर… pic.twitter.com/oIRAYZtFrx
ಪಾಪಿ ಮಗನನ್ನು ದುರ್ಗೇಶ್ ಶರ್ಮಾ ಎಂದು ಗುರುತಿಸಲಾಗಿದೆ. ಮಗನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓಡುವ ಮಹಿಳೆ ತನ್ನ ಬಟ್ಟೆ ಜಾರಿ ಬೀಳದಂತೆ ತಡೆಯಲು ಪ್ರಯತ್ನಿಸುತ್ತಿರುವುದೂ ವಿಡಿಯೊದಲ್ಲಿ ಕಂಡು ಬಂದಿದೆ. ಮನೆಯೊಳಗೆ ತನ್ನ ತಾಯಿಯನ್ನು ಹಿಂಬಾಲಿಸಿದ ದುರ್ಗೇಶ್ ಶರ್ಮಾ ಅಲ್ಲೂ ತನ್ನ ತಾಯಿಗೆ ಹೊಡೆಯುತ್ತಾನೆ. ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಮೊಳಗುವ ಮಂತ್ರದ ಧ್ವನಿಯೂ ಕೇಳಿಸುತ್ತಿದೆ. ಕೊನೆಗೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತ ಯಾಕಾಗಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ಈ ವೈರಲ್ ವಿಡಿಯೊವನ್ನು 10 ಸಾವಿರಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ತಾಯಿ ಮೇಲೆ ಹಲ್ಲೆ ನಡೆಸಿದ ದುರ್ಗೇಶ್ ಶರ್ಮಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ʼʼಪೊಲೀಸರ ಬಳಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆತನಿಗೆ ಸರಿಯಾಗಿ ಪಾಠ ಕಲಿಸಿ. ನಡೆದಾಡಲೂ ಆತನಿಗೆ ಸಾಧ್ಯವಾಗಬಾರದು. ಆ ರೀತಿ ಆತನಿಗೆ ಹೊಡೆಯಿರಿʼʼ ಎಂದು ಒಬ್ಬರು ಆಕ್ರೋಶದಿಂದ ಕಮೆಂಟ್ ಮಾಡಿದ್ದಾರೆ. ʼʼಇಂತಹ ಜನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಜಿಲ್ಲೆಯಿಂದ ಹೊರಹಾಕಬೇಕುʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Viral News : ಟಾಯ್ಲೆಟ್ಗೆ ಹೋಗುವ ಅರ್ಜೆಂಟಲ್ಲಿ ಸ್ಪೈಡರ್ ಮ್ಯಾನ್ ಆದ ರೈಲು ಪ್ರಯಾಣಿಕ!
ಕಲಿಯುಗದ ಪುತ್ರನೊಬ್ಬ ತನ್ನ ತಾಯಿಯನ್ನು ಗೌರವಿಸುವ ರೀತಿ ಇದು ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದ್ದು, ದುರ್ಗೇಶ್ ಶರ್ಮಾ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಇನ್ನೆಂದೂ ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.