ಮೈಸೂರು: ಚಾಮರಾಜನಗರ ಸಂಸದರು (Chamarajanagar MP) ದೇವಾಲಯದ ಗರ್ಭಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟ ಘಟನೆ ನಡೆದಿದೆ. ಇದು ವಿಶೇಷ ಸುದ್ದಿಯಾಗುವ ಸಂಗತಿಯೇನೂ ಅಲ್ಲ. ಆದರೆ, ತನಗೆ ಮದುವೆಯೇ ಆಗಿಲ್ಲ ಎಂದು ಸಂಸದರು ಹೇಳಿಕೊಂಡಿದ್ದರು. ಹೀಗಾಗಿ ಇದೀಗ ಸುದ್ದಿಯಾಗಿದೆ. ಇವರಿಬ್ಬರ ಫೋಟೋ ಕೂಡ ವೈರಲ್ (Viral News) ಆಗಿದೆ.
ಮೈಸೂರಿನ ಚಾಮುಂಡೇಶ್ವರಿ ತಾಯಿ (Mysore Chamundeshwari Temple) ಗರ್ಭಗುಡಿಯಲ್ಲೇ ಈ ಘಟನೆ ನಡೆದಿದೆ. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಅವರ ಹಣೆಗೆ ಚಾಮರಾಜನಗರ ಸಂಸದ ಸುನೀಲ್ ಬೋಸ್ (Sunil Bose) ಕುಂಕುಮ ಇಟ್ಟಿದ್ದಾರೆ. ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇವರಿಬ್ಬರೂ ಜತೆಯಾಗಿ ಬಂದಿದ್ದರು.
ಈ ವೇಳೆ ಗರ್ಭಗುಡಿಯಲ್ಲಿ ಇವರು ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆ ನೆರವೇರಿಸುವ ವೇಳೆ ಬೆಂಬಲಿಗರ ಸಮ್ಮುಖದಲ್ಲೇ ಸವಿತಾ ಹಣೆಗೆ ಸುನೀಲ್ ಬೋಸ್ ಕುಂಕುಮ ಇಟ್ಟರು. ಸಾರ್ವಜನಿಕ ವಲಯದಲ್ಲಿ ಸುನೀಲ್ ಬೋಸ್ ನಡೆ ಇದೀಗ ಚರ್ಚೆಗೆ ಕಾರಣವಾಗಿದೆ.
ಯಾಕೆಂದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ತಮಗೆ ಮದುವೆ ಆಗಿಲ್ಲ ಎಂದು ಸುನೀಲ್ ಬೋಸ್ ಅಫಿಡೆವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರನ್ನೂ ಚಾಮರಾಜನಗರ ಬಿಜೆಪಿ ಸದಸ್ಯರು ನೀಡಿದ್ದರು. ಸುನೀಲ್ ಬೋಸ್ ಹಾಗೂ ಸವಿತಾ ಜತೆಯಲ್ಲಿ ಇರುವ ಫೋಟೋಗಳನ್ನು ನೀಡಿ ದೂರು ಕೊಟ್ಟಿದ್ದರು. ಸುನೀಲ್ ಬೋಸ್‌ಗೆ ಮದುವೆಯಾಗಿದೆ, ಆದರೆ ಅಫಿಡವಿಟ್‌ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ದೂರಿದ್ದರು.
ʼಇದೀಗ, ಚಾಮುಂಡೇಶ್ವರಿ ಗರ್ಭಗುಡಿಯಲ್ಲಿ ನಡೆದದ್ದು ಸುಳ್ಳು ಅಲ್ಲ ತಾನೆ?ʼ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದ್ದಾರೆ. ʼಮದುವೆ ಆಗಿದ್ದರೆ, ಆಗಿದೆ ಎಂದು ಹೇಳಲಿ. ಇದರಲ್ಲಿ ಅಡಗಿಸಿ ಇಡುವ ಮುಜುಗರದ ಸಂಗತಿ ಏನಿದೆ?ʼ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವರಿಗೆ ಅವಮಾನ, ಎಚ್‌ಡಿಕೆ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ
ಮೈಸೂರು: ಕೇಂದ್ರ ಸಚಿವರೇ ವಿಶ್ರಾಂತಿಗಾಗಿ ಬಂದರೂ ಬಾಗಿಲು ಬೀಗ ತೆಗೆಯದೆ ಅಧಿಕಾರಿಗಳು ಅವಮಾನ ಮಾಡಿ ಕಳಿಸಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಕೇಂದ್ರ ಸಚಿವ, ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ನಂಜನಗೂಡು ಪ್ರವಾಸದಲ್ಲಿದ್ದು, ಕೆಲ ನಿಮಿಗಳ ವಿಶ್ರಾಂತಿಗಾಗಿ ನಂಜನಗೂಡು ಪ್ರವಾಸಿ ಮಂದಿರಕ್ಕೆ ತೆರಳಿದ್ದರು.
ಕೇಂದ್ರ ಸಚಿವರ ಭೇಟಿ ವಿಚಾರವನ್ನು ಪ್ರವಾಸಿ ಮಂದಿರದ ಅಧಿಕಾರಿಗಳಿಗೆ ಸಾಕಷ್ಟು ಮೊದಲೇ ತಿಳಿಸಲಾಗಿತ್ತು. ಈ ಬಗ್ಗೆ ಪ್ರವಾಸ ಪಟ್ಟಿಯನ್ನೂ ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಆದರೆ ಎಚ್‌ಡಿಕೆ ತೆರಳುವ ಹೊತ್ತಿಗೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಯಾರೂ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ.
10 ನಿಮಿಷಕ್ಕೂ ಅಧಿಕ ಸಮಯ ಕಾದರೂ ಯಾವುದೇ ಸಿಬ್ಬಂದಿ ಬಾಗಿಲು ತೆಗೆಯಲು ಬರಲಿಲ್ಲ. ಈ ಸಂದರ್ಭದಲ್ಲಿ ಎಚ್‌ಡಿಕೆ ಕಾರಿನಲ್ಲೇ ಕುಳಿತಿದ್ದರು. ಜೊತೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಅವರೂ ಇದ್ದರು. ಕಾದು ಸುಸ್ತಾದ ಎಚ್‌ಡಿ ಕುಮಾರಸ್ವಾಮಿ ಬಳಿಕ ಅಲ್ಲಿಂದ ತೆರಳಿದರು.
ಈ ಬಗ್ಗೆ ಸಾ.ರಾ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರು ಬಂದರೂ ಬಾಗಿಲು ತೆರೆಯದೆ ಇರುವುದರ ಹಿಂದೆ ರಾಜ್ಯ ಸರಕಾರದ ಚಿತಾವಣೆ ಇದೆ. ಅವಮಾನ ಮಾಡುವ ಉದ್ದೇಶಕ್ಕಾಗಿಯೇ ಹೀಗೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ: Political Rivalry : ರಾಜಕೀಯ ವೈಷಮ್ಯ; ಗುತ್ತಿಗೆ ನೌಕರಿಯಿಂದ JDS ಬೆಂಬಲಿಗನ ಹೊರಗಟ್ಟಿದ ಸುನಿಲ್ ಬೋಸ್?