ಲಕ್ನೋ: ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಕಾರಣಕ್ಕೂ ಜಗಳ ನಡೆಯುವುದು ಸಾಮಾನ್ಯ ಎಂಬಂತಾಗಿದೆ. ಮದುವೆ ಮನೆಯಲ್ಲಿ ನೆಚ್ಚಿನ ತಿಂಡಿ ಬಡಿಸಲಿಲ್ಲ, ಸರಿಯಾಗಿ ಉಪಚಾರ ಮಾಡಲಿಲ್ಲ ಎಂಬಿತ್ಯಾದಿ ಕಾರಣಕ್ಕೆ ಜಗಳ ನಡೆದು ಸಂಭ್ರಮದ ಮನೆ ಸ್ಮಶಾನವಾಗಿ ಮಾರ್ಪಟ್ಟಿದ್ದನ್ನು ನೋಡಿದ್ದೇವೆ. ಇಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಕಲಹ ವ್ಯಕ್ತಿಯೊಬ್ಬನ ಜೀವವನ್ನೇ ಬಲಿ ಪಡೆದಿದೆ. ಉತ್ತರಪ್ರದೇಶದ ಬಾರಾಬಂಕಿ ಗ್ರಾಮದಲ್ಲಿ ಮದುವೆ ಮನೆಯೊಂದರಲ್ಲಿ ಉಡುಗೊರೆ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆ ಮೂಲಕ ಸಂಭ್ರಮದಿಂದ ಕೂಡಿದ್ದ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ (Viral News).
ಘಟನೆ ವಿವರ
ಚಂದ್ರಪ್ರಕಾಶ್ ಮಿಶ್ರಾ (35) ಕೊಲೆಯಾದ ವ್ಯಕ್ತಿ. ತನ್ನ ಸಹೋದರಿಯ ಮದುವೆಯ ಸಂದರ್ಭದಲ್ಲಿ ಆಕೆಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದೇ ಆತ ಮಾಡಿದ ದೊಡ್ಡ ತಪ್ಪು! ಹೌದು, ಚಂದ್ರಪ್ರಕಾಶ್ ಮಿಶ್ರಾ ತನ್ನ ತಂಗಿಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ನೀಡಲು ಚಿಂತನೆ ನಡೆಸಿದ್ದರು. ಇದರಿಂದ ಕೋಪಗೊಂಡ ಆತನ ಪತ್ನಿ ಚಾಬಿ ಈ ವಿಚಾರವನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಅಸಮಾಧಾನಗೊಂಡ ಆಕೆಯ ಮನೆಯವರು ಚಂದ್ರಪ್ರಕಾಶ್ ಮಿಶ್ರಾ ಅವರನ್ನು ಚೆನ್ನಾಗಿ ಥಳಿಸಿದ್ದರು. ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ʼʼಏಪ್ರಿಲ್ 26ಕ್ಕೆ ಚಂದ್ರಪ್ರಕಾಶ್ ಮಿಶ್ರಾ ಅವರ ತಂಗಿಯ ಮದುವೆ ನಿಗದಿಯಾಗಿದೆ. ಹೀಗಾಗಿ ಅವರು ಪ್ರೀತಿಯ ತಂಗಿಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ಕೊಡಲು ಯೋಜನೆ ಹಾಕಿಕೊಂಡಿದ್ದರು. ಅದನ್ನು ಪತ್ನಿ ಚಾಬಿ ಬಳಿ ಹೇಳಿಕೊಂಡಿದ್ದರು. ಆದರೆ ಇದನ್ನು ಕೇಳಿ ಚಾಬಿ ಉರಿದು ಬಿದ್ದಳು. ಈ ವಿಚಾರವಾಗಿ ದಂಪತಿಯ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವೇ ನಡೆಯಿತುʼʼ ಎಂದು ಪೊಲೀಸರು ತಿಳಿಸಿದ್ದಾರೆ.
ʼʼಅಷ್ಟಕ್ಕೇ ಸುಮ್ಮನಾಗದ ಚಾಬಿ ತನ್ನ ಸಹೋದರರನ್ನು ಕರೆದು ಚಂದ್ರಪ್ರಕಾಶ್‌ಗೆ ಪಾಠ ಕಲಿಸುವಂತೆ ಹೇಳಿದ್ದಾಳೆ. ತಂಗಿಯ ಕರೆಗೆ ಓಗೊಟ್ಟು ಬಂದ ಚಾಬಿಯ ಸಹೋದರರು ಚಂದ್ರಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಕೋಲುಗಳಿಂದ ಥಳಿಸಿದ್ದಾನೆ. ಕೊನೆಗೆ ಚಂದ್ರಪ್ರಕಾಶ್ ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದರೆ ಆಸ್ಪತ್ರೆಯಲ್ಲಿ ನಿಧನರಾದರುʼʼ ಎಂದು ಅಧಿಕಾರಿಗಳು ಘಟನೆಯನ್ನು ವಿವರಿಸಿದ್ದಾರೆ.
ಸದ್ಯ ಪೊಲೀಸರು ಘಟನೆಯ ಸಂಬಂಧ ಐವರನ್ನು ಬಂಧಿಸಿದ್ದಾರೆ. ಚಾಬಿ ಮತ್ತು ಆಕೆಯ ಸಹೋದರರು ಸೇರಿ 5 ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಮದುವೆ ಮನೇಲಿ ರಸಗುಲ್ಲಾಗಾಗಿ ಹೊಡೆದಾಟ; ಆರು ಮಂದಿಯ ಪರಿಸ್ಥಿತಿ ಗಂಭೀರ!
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ವಿವಾಹ ವಾರ್ಷಿಕೋತ್ಸವದ ಉಡುಗೊರೆಯನ್ನು ನೀಡದ ಕಾರಣಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ತನ್ನ ಪತಿಗೆ ಚಾಕುವಿನಿಂದ ಇರಿದಿದ್ದಳು. ಕೂಡಲೇ ಎಚ್ಚೆತ್ತುಕೊಂಡ ಆತ ತಪ್ಪಿಸಿಕೊಂಡು ಪಾರಾಗಿದ್ದ. ಬಳಿಕ ನೆರೆಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತನ್ನ ಅಜ್ಜ ನಿಧನ ಹೊಂದಿದ್ದರಿಂದ ಪತ್ನಿಗೆ ಉಡುಗೊರೆ ನೀಡಿರಲಿಲ್ಲ. ಇದೇ ಕಾರಣಕ್ಕೆ ಆಕೆ ಹಲ್ಲೆ ನಡೆಸಿದ್ದಳು ಎಂದು ಬಳಿಕ ಆತ ದೂರು ನೀಡಿದ್ದ.