Site icon Vistara News

Viral photo | ಅಜ್ಜಿಯ ಶವಪೆಟ್ಟಿಗೆಯೊಂದಿಗೆ ನಗುತ್ತಾ ಕುಳಿತ ಕುಟುಂಬಸ್ಥರು!

granny

ಪ್ರತಿದಿನವೂ ಸಾಮಾಜಿಕ ಜಾಲತಾಣದ ಜಗತ್ತಿನಲ್ಲಿ ಒಂದಲ್ಲ ಒಂದು ಸುದ್ದಿಗಳು, ಚಿತ್ರಗಳು, ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಆದರೆ, ಈ ಚಿತ್ರ ವೈರಲ್‌ ಆಗಲು ಕಾರಣವಿದೆ. ಈ ಚಿತ್ರದಲ್ಲೊಂದು ಬೇಸರವಿದೆ. ಆದರೂ ಅಲ್ಲಿ ನಗುಮೊಗಗಳಿವೆ. ಕೇರಳದ ಕುಟುಂಬವೊಂದರ ಇಂಥ ಚಿತ್ರ ವೈರಲ್‌ ಆಗಿದ್ದು, ಇದರಲ್ಲಿ ಶವಪೆಟ್ಟಿಗೆಯ ಸುತ್ತ ನೆರೆದ ಕುಟುಂಬಸ್ಥರ ನಗುಮೊಗದ ಚಿತ್ರವಿದೆ!

ಸಾವಿನ ಮನೆಯಲ್ಲಿ ನಗುವಿನ ಚಿತ್ರಗಳು ಎಂದಿಗಾದರೂ ಸಿಕ್ಕೀತೇ? ಸಂತೋಷದ ಸಂದರ್ಭದಲ್ಲಿ ಅದೆಷ್ಟು ಫೋಟೋಗಳನ್ನು ತೆಗೆದು ನೆನಪಿಸಿಕೊಳ್ಳುತ್ತೇವಾದರೂ, ಸಾವಿನ ಮನೆಯಲ್ಲಿ ಫೋಟೋ ತೆಗೆದು ಯಾರೂ ನೆನಪಿಸಿಕೊಳ್ಳಲು, ಆ ನೆನಪುಗಳನ್ನು ಮೆಲುಕು ಹಾಕಲು ಬಯಸುವುದಿಲ್ಲ. ಆಪ್ತರ ಸಾವು ಎಂಬುದು ಜೀವನದ ಅತ್ಯಂತ ದುಃಖದ ಘಟನೆಯಾಗಿ ನೆನಪಿನಲ್ಲಿ ಚಿತ್ರಗಳಾಗಿ ಉಳಿದುಬಿಡುತ್ತವೆಯೇ ಹೊರತು, ಎಂದಿಗೂ ಅವುಗಳ ಚಿತ್ರ ತೆಗೆದು ಇಟ್ಟುಕೊಂಡಿರಲು ಯಾರೂ ಬಯಸುವುದಿಲ್ಲ. ಆದರೆ ಇಲ್ಲೊಂದು ಇವೆಲ್ಲದಕ್ಕೂ ವೈರುಧ್ಯದ ವಿಚಿತ್ರ ಘಟನೆ ನಡೆದಿದ್ದು, ಈ ಚಿತ್ರದಲ್ಲಿ ಶವಪೆಟ್ಟಿಗೆಯನ್ನು ಮಧ್ಯದಲ್ಲಿರಿಸಿ ಸುತ್ತ ನೆರೆದ ಕುಟುಂಬಸ್ಥರೆಲ್ಲರ ಮೊಗದಲ್ಲಿ ನಗುವಿನ ಕಳೆಯಿದೆ! ಸೂತಕದ ಮನೆಯಲ್ಲಿ ಹೀಗೆ ಯಾರಾದರೂ ನಗುತ್ತಾ ಫೋಟೋ ತೆಗೆಯುತ್ತಾರಾ ಎಂಬುದೇ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿ ವೈರಲ್‌ ಆಗಿದೆ.

ಅಷ್ಟಕ್ಕೂ ಈ ಫೋಟೋ ಹಿಂದಿರುವ ರಹಸ್ಯವಾದರೂ ಏನು? ಎಲ್ಲರೂ ಹೀಗೆ ನಗುತ್ತಾ ಶವಪೆಟ್ಟಿಗೆಯ ಹಿಂದೆ ನಿಂತಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಟುಂಬಸ್ಥರಲ್ಲಿ ಒಬ್ಬರು, “ಮನೆಯ ಹಿರಿಯರಾದ ನಮ್ಮೆಲ್ಲರ ಅಜ್ಜಿಯ ಸಾವಿನ ದಿನ ಫೋಟೋ ಇದು. ಅಜ್ಜಿಗೆ ೯೦ ಮಂದಿಯಿರುವ ದೊಡ್ಡ ಕುಟುಂಬವಿದೆ. ನಲುವತ್ತು ಮಂದಿಯಷ್ಟೆ ಆಕೆಯ ಈ ಸಾವಿನ ಸಂದರ್ಭ ಒಟ್ಟು ಸೇರಿ ಈ ಫೋಟೋ ತೆಗೆಯಲು ಸಾಧ್ಯವಾಯಿತು. ನಮಗೆ ಈ ಫೋಟೋ ವೈರಲ್‌ ಆಗುವುದು ಇಷ್ಟವಿಲ್ಲದಿದ್ದರೂ, ಈ ಚಿತ್ರ ಇದೀಗ ಎಲ್ಲೆಡೆ ಹರಿದಾಡುತ್ತಿದೆ” ಎಂದಿದ್ದಾರೆ.

“ಈ ಫೋಟೋ ತೆಗೆಯಲು ಕಾರಣ ಇಷ್ಟೆ. ಈ ಅಜ್ಜಿಯೆಂದರೆ ಎಲ್ಲರಿಗೂ ಬಹಳ ಪ್ರಿಯ. ತನ್ನ ಮೊಮ್ಮಕ್ಕಳು, ಮಕ್ಕಳು, ಮರಿಮೊಮ್ಮಕ್ಕಳು ಹೀಗೆ ಅಜ್ಜಿಯದ್ದು ತುಂಬಿದ ಸಂಸಾರ. ಅಜ್ಜಿಯ ಜೊತೆ ಕಳೆದ ಎಲ್ಲರ ನೆನಪುಗಳು ಚಿರಸ್ಮರಣೀಯ. ಹಾಗಾಗಿ ಈ ನೆನಪನ್ನು ಶಾಶ್ವತವಾಗಿರಿಸಲು, ಆಕೆಯ ಜೊತೆಗೆ ಕೊನೆಯ ಬಾರಿ ಗ್ರೂಪ್‌ ಫೋಟೋ ತೆಗೆದುಕೊಂಡೆವು” ಎಂದಿದ್ದಾರೆ.

ಇದನ್ನೂ ಓದಿ | Life story | ಕಳ್ಳತನ ಮಾಡಿದಾತನೇ ಪೊಲೀಸ್‌ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ!

”ಸಾವಿನ ಮನೆ ಎಂದರೆ ಎಲ್ಲರೂ ಅಳುವುದಷ್ಟೆ ಕಣ್ಣಿಗೆ ಕಾಣುತ್ತದೆ ನಿಜ. ಮನೆಯ ಸದಸ್ಯರ ಅಗಲಿಕೆ ದುಃಖ ತರುತ್ತದೆ ಎಂಬುದೂ ನಿಜ. ಆದರೆ, ಸಾವು ಎಂಬುದು ವಿದಾಯ ಎಂಬುದಾಗಿಯೂ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬನನ್ನೂ ನಗುಮೊಗದಿಂದಲೇ ಕಳಿಸಿಕೊಡಬೇಖು. ಬಹುಶಃ ಇದನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ, ನಾವು ಹೀಗೆ ಭಾವಿಸಿ, ಎಲ್ಲರೂ ಬೇಸರವಾದರೂ, ಆಕೆಯ ಮುಂದಿನ ಪಯಣವನ್ನು ನಗುಮೊಗದಿಂದ ಆಕೆಯೊಂದಿಗೆ ಕಳೆದ ದಿನಗಳನ್ನು, ಖುಷಿಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಸಂತೋಷದಿಂದ ಕಳುಹಿಸಿಕೊಡಲು ತೀರ್ಮಾನಿಸಿದೆವು. ಹಾಗಾಗಿ ಕುಟುಂಬಸ್ಥರೆಲ್ಲ ಆಕೆಯ ಕೊನೆಯ ಪಯಣಕ್ಕೆ ವಿದಾಯ ಹೇಳಲು ಜೊತೆಯಾಗಿ ಕೂತು ತೆಗೆದ ಕ್ಷಣಗಳಿವು” ಎಂದು ವಿವರಿಸಿದ್ದಾರೆ.

ಕುಟುಂಬದ ಇನ್ನೊಬ್ಬರು, ವ್ಯಕ್ತಿಯ ವಿದಾಯವನ್ನು ನಾವು ದುಃಖದಾಯಕವಾಗಿ ಏಕೆ ಮಾಡಬೇಕು? ಕಳೆದ ಅಮೂಲ್ಯ ದಿನಗಳ ಬಗೆಗೆ ಖುಷಿಯಿರಬೇಕು ಎಂದಿದ್ದಾರೆ. ಕೇರಳದ ಶಿಕ್ಷಣ ಮಂತ್ರಿ ಶಿವನ್‌ಕುಟ್ಟಿ ಕೂಡಾ ಈ ಚಿತ್ರದ ಬಗ್ಗೆ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಚಿತ್ರದ ಬಗ್ಗೆ ನೆಗೆಟಿವ್‌ ಕಮೆಂಟ್‌ ಬೇಡ. ವಿದಾಯವನ್ನು ಕಣ್ಣೀರಿನಿಂದ ತೊಳೆಯಬೇಕಾಗಿಲ್ಲ. ಅವರ ಜೊತೆಗಿನ ಒಳ್ಳೆಯ ದಿನಗಳನ್ನು ನೆನೆಸಿಕೊಂಡು, ಆ ಖುಷಿ ದಕ್ಕಿದ್ದಕ್ಕೆ ಸಂತಸ ಪಡಬೇಕು ಎಂದಿದ್ದಾರೆ.

ಇದನ್ನೂ ಓದಿ | Dosa maker | ಇನ್ಮೇಲೆ ದೋಸೆ ಹುಯ್ಯೋದಲ್ಲ, ಎ-4 ಸೈಜ್‌ ಗರಿಗರಿ ದೋಸೆ ಪ್ರಿಂಟ್‌ ಮಾಡಿ!

Exit mobile version