ಬೆಂಗಳೂರು: ಬೆಂಗಳೂರಿನ (Bangalore crime news) ಬೀದಿಯಲ್ಲಿ ಹಾಡಹಗಲೇ ನಡೆದ ರಾಜಾರೋಷ ಹಲ್ಲೆಯೊಂದರ (Assault Case) ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ (Viral Video) ಹಂಚಿಕೊಂಡಿದ್ದಾರೆ. ಸದ್ಯ ಇದು ಮೆಟ್ರೋ ನಗರದ (Metro City) ಮಾನ ತೆಗೆಯುತ್ತಿದೆ. ವಿದ್ಯಾರಣ್ಯಪುರದಲ್ಲಿ (Vidyaranyapura) ಘಟನೆ ನಡೆದಿದೆ.
15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರಸೀಪುರ ಬಳಿ ನಡೆದ ಘಟನೆಯಿದು. ಹಲ್ಲೆಗೊಳಗಾದವನು ಹಾಗೂ ಹಲ್ಲೆ ಮಾಡಿದವರ ಕುರಿತ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಹಲ್ಲೆಯಿಂದ ಯುವಕನ ಮುಖ ಮತ್ತು ಮೂಗಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಈಶಾನ್ಯ ಡಿಸಿಪಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ. ʼಬಿಎನ್‌ಎಸ್ 109 ಅಂದರೆ ಕೊಲೆ ಯತ್ನ?ʼ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಲಾಗಿದೆ.
ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಕಲಬುರಗಿ: ಜಮೀನೊಂದರಲ್ಲಿ ಸುಟ್ಟಸ್ಥಿತಿಯಲ್ಲಿ ಮಹಿಳೆಯ ಶವ (Dead Body Found) ಪತ್ತೆಯಾಗಿದೆ. ಕಲಬುರಗಿಯ (Kalaburagi News) ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮಹಿಳೆ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಬಳಿಕ ಗುರುತು ಸಿಗಬಾರದೆಂದು ಸುಟ್ಟು ಹಾಕಿದ್ದಾರೆ.
ಕಲಬುರಗಿ ನಗರದ ಜಗತ್ ಬಡಾವಣೆಯ ನಿವಾಸಿ ಬಸಮ್ಮ (45) ಮೃತ ದುರ್ದೈವಿ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಎಸ್ಪಿ ಬಿಂದುರಾಣಿ, ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾಗಾವ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು? ಹತ್ಯೆ ಮಾಡಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಕಲಬುರಗಿಯಲ್ಲಿ ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆಯಿಂದ ಬೆಣ್ಣೆತೋರಾ ನದಿಗೆ ಹಾರಿ ಯುವಕ- ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೀಲ್ ಕುಮಾರ್ ಮೂಲಗೆ (37) ನದಿಗೆ ಹಾರಿ ಮೃತಪಟ್ಟವರು. ಬೆಣ್ಣೆತೋರಾ ನದಿಯಲ್ಲಿ ಅನೀಲ್ ಕುಮಾರ್ ಶವ ಪತ್ತೆಯಾಗಿದೆ. ಅನೀಲ್ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕುಣಿ ಸಂಗಾವಿ ಗ್ರಾಮದ ನಿವಾಸಿಯಾಗಿದ್ದಾರೆ. ಅನೀಲ್ ಜತೆ ನದಿಗೆ ಹಾರಿದ ಯುವತಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಸ್ಥಳಕ್ಕೆ ಮಹಾಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಜು ತಜ್ಞರ ಮೂಲಕ ಶವ ಹುಡುಕಾಟ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ಹಾಸನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಮಗುವಿನ ಅನಾರೋಗ್ಯದಿಂದ ಮನನೊಂದ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಸನದ ಹಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲೇರಿದ ಬಸವರಾಯನಪುರ ಗ್ರಾಮದ ಗಂಗಸ್ವಾಮಿಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಸಮೀಪದ ಗ್ರಾಮದಲ್ಲಿ ಘಟನೆ ನಡೆದಿದೆ. ಗಂಗಸ್ವಾಮಿ ತನ್ನ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹಿಮ್ಸ್‌ಗೆ ದಾಖಲು ಮಾಡಿದ್ದರು. ಆದರೆ ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದರು. ಇತ್ತ ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಗಂಗಸ್ವಾಮಿಯನ್ನು ಮನವೊಲಿಸಿ ಕೆಳಗಿಳಿಸಿ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಲಾಗಿದೆ.
ಇದನ್ನೂ ಓದಿ: Rain News: ಮಳೆಯ ಅಬ್ಬರಕ್ಕೆ ಧಡಾರ್ ಎಂದು ನೆಲಕಚ್ಚಿದ ಕೊಟ್ಟಿಗೆಹಾರ ಬಸ್ ನಿಲ್ದಾಣ!