Site icon Vistara News

Viral Video: ನಡು ರಸ್ತೆಯಲ್ಲಿ ಪಿಸ್ತೂಲ್‌ ತೋರಿಸಿ ವ್ಯಕ್ತಿ ಮೇಲೆ ಹಲ್ಲೆ; ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ನಿಂದ ದಾಂಧಲೆ

Viral Video

ಲಕ್ನೋ: ಉತ್ತರಪ್ರದೇಶ(Uttar Pradesh)ದಲ್ಲಿ ಯೋಗಿ ಆದಿತ್ಯಾನಾಥ್‌(Yogi Adityanath) ನೇತೃತ್ವದ ಸರ್ಕಾರ ಬಂದ ಮೇಲೆ ಪುಡಿರೌಡಿಗಳ ಅಟ್ಟಹಾಸಕ್ಕೆ ಬ್ರೇಕ್‌ ಬಿದ್ದಿರೋದಂತೂ ನಿಜ. ಬುಲ್ಡೋಜರ್‌ ಬಾಬಾನ ಭಯದಿಂದ ಮನೆಯಿಂದ ಹೊರ ಬರೋದಿಕ್ಕೂ ಹೆದರುತ್ತಾರೆ ಅನ್ನೋ ಮಾತಿದೆ. ಅಷ್ಟಾಗಿಯೂ ಅಲ್ಲೊಂದು ಇಲ್ಲೊಂದು ಅನ್ನೋ ಹಾಗೆ ರೌಡಿಗಳು ಬಾಲ ಬಿಚ್ಚುತ್ತಲೇ ಇರುತ್ತಾರೆ. ಅಂತಹದ್ದೇ ಒಂದು ಘಟನೆ ಇದೀಗ ವರದಿ ಆಗಿದೆ. ಅಂತಾರಾಷ್ಟ್ರೀಯ ಮಟ್ಟದ ಪಿಸ್ತೂಲ್‌ ಶೂಟರ್‌ ಒಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಪಿಸ್ತೂಲ್‌ ಹಿಡಿದು ಮತ್ತೋರ್ವನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ವೈರಲ್‌(Viral Video) ಆಗಿದೆ.

ಲಕ್ನೋದಲ್ಲಿರುವ ವೆಬ್‌ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಿಸ್ತೂಲ್‌ ಶೂಟರ್‌ ವಿನೋದ್‌ ಮಿಶ್ರಾ ರಂಜೀತ್‌ ಎಂಬ ಕಾರು ಚಾಲಕನ ಶರ್ಟ್‌ನ ಕಾಲರ್‌ ಹಿಡಿದು ಎಳೆದಾಡಿದ್ದಾನೆ. ಅಷ್ಟೇ ಅಲ್ಲದೇ ಪಿಸ್ತೂಲ್‌ನಲ್ಲಿ ಆತನ ಹೊಟ್ಟೆ, ತಲೆಗೆ ಹಲ್ಲೆ ಮಾಡಿದ್ದಾನೆ. ರಂಜೀತ್‌ನನ್ನು ಕಾರಿನತ್ತ ತಳ್ಳಿದ ಮಿಶ್ರಾ ಪಿಸ್ತೂಲ್‌ ಹಿಂಬಾಗದಿಂದ ಆತನ ಭುಜ, ತಲೆ, ಹೊಟ್ಟೆಗೆ ಹೊಡೆಯುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಪೊಲೀಸರು ಹೇಳೋದೇನು?

ಘಟನೆ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಕುಮಾವತ್‌ ಪ್ರತಿಕ್ರಿಯಿಸಿದ್ದು,ರಂಜೀತ್‌ ತನ್ನ ವ್ಯಾಗನರ್‌ ಕಾರಿನಲ್ಲಿ ಭೂತ್‌ನಾಥ್‌ಗೆ ತೆರಳುತ್ತಿದ್ದರು. ಮಿಶ್ರಾ ಅಲ್ಲಿಂದ ತಮ್ಮ ಟಾಟಾ ಸಫಾರಿ ಕಾರಿನಲ್ಲಿ ವಾಪಾಸಾಗುತ್ತಿದ್ದರು. ಈ ವೇಳೆ ಎರಡೂ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮಿಶ್ರಾ ತನ್ನ ಪಿಸ್ತೂಲನ್ನು ತೆಗೆದು ಮೂರು ಬಾರಿ ಹಲ್ಲೆ ನಡೆಸಿದ್ದಾನೆ. ಆಗ ರಂಜೀತ್‌ ಎಷ್ಟೇ ಕ್ಷಮೆ ಕೇಳಿದರೂ ಮಿಶ್ರಾ ಮಾತ್ರ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಹಿಂಬದಿ ಇದ್ದ ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಘಟನೆ ವಿಡಿಯೋ ರೆಕಾರ್ಡ್‌ ಆಗಿದೆ. ರಂಜಿತ್‌ ಎಫ್‌ಐಆರ್‌ ದಾಖಲಿಸಿದ್ದು, ಮಿಶ್ರಾನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಆತನಿಂದ ಲೈಸೆನ್ಸ್‌ ಪಿಸ್ತೂಲ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇನ್ನು ಮಿಶ್ರಾ ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ ಆಗಿದ್ದು, ಶೂಟಿಂಗ್‌ ತರಬೇತುದಾರನಾಗಿ ಕಾರ್ಯನಿರ್ಹಿಸುತ್ತಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:SBI Warning: ನಕಲಿ ಸಂದೇಶಗಳ ಬಗ್ಗೆ ಎಚ್ಚರ‌ ಇರಲಿ; ಗ್ರಾಹಕರಿಗೆ ಎಸ್ ಬಿ ಐ ಸೂಚನೆ

Exit mobile version