Site icon Vistara News

Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

wayanad landslide cow rescues family

ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಸಂಭವಿಸಿದ ರುದ್ರಭಯಾನಕ ಭೂಕುಸಿತದಲ್ಲಿ (Wayanad landslide, Kerala Landslide) ಚಾಮರಾಜನಗರ ಮೂಲದ ಕುಟುಂಬವೊಂದನ್ನು ಅವರು ಸಾಕಿದ ಹಸು ವಿಚಿತ್ರ ರೀತಿಯಲ್ಲಿ ಪಾರು ಮಾಡಿದ ಘಟನೆ (Viral news) ನಡೆದಿದೆ.

ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ. ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಮೇಪ್ಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್‌ಮಲೆಯಲ್ಲಿದ್ದರು. ಚೂರಲ್‌ಮಲೆಗೂ ಮೇಪ್ಪಾಡಿಗೂ 6 ಕಿಮೀ ದೂರವಿದ್ದು, ಭೂಕುಸಿತ ಉಂಟಾಗುವ ಕೆಲವು ಸಮಯಕ್ಕೆ ಮುನ್ನ ಇವರು ಪಾರಾಗಿ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾರೆ.

ಅದು ಘಟಿಸಿದ್ದು ಹೀಗೆ. ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡಿದ್ದಾರೆ. ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ನೋಡನೋಡುತ್ತಿದ್ದಂತೆ ಇವರು ಇದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೇಪ್ಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದಾರೆ. ಪ್ರವಿದಾ, ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರ್ ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ.

ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತರರನ್ನು ರಕ್ಷಣಾ ಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಸಾಕಿದ್ದ ಹಸು ದೇವರಂತೆ ಅಪಾಯದ ಬಗ್ಗೆ ಕುಟುಂಬಕ್ಕೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರುಮಾಡಿದೆ. ಆದರೆ ಇವರನ್ನು ಕಾಪಾಡಿದ ಹಸು ಉಳಿದಿದೆಯೋ ಇಲ್ಲವೋ ತಿಳಿದುಬಂದಿಲ್ಲ.

ನಾಲ್ವರ ಶವ ಪತ್ತೆ, ಉಳಿದವರಿಗೆ ಶೋಧ ಮುಂದುವರಿಕೆ

ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಇವರ ಶವಗಳು ದೊರೆತಿವೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಾಯಗಳಾಗಿವೆ. ರಾಜೇಂದ್ರ, ರತ್ನಮ್ಮ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದವರು. ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ವೈನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು, ತಹಸೀಲ್ದಾರ್ ನೇತೃತ್ವದ ತಂಡ ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಝಾನ್ಸಿ ಪುತ್ರ ನಿಹಾಲ್, ಅತ್ತೆ ಲೀಲಾವತಿ ನಾಪತ್ತೆಯಾಗಿದ್ದಾರೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಝಾನ್ಸಿರಾಣಿಯನ್ನು ಕುಟುಂಬ ಮದುವೆ ಮಾಡಿಕೊಟ್ಟಿತ್ತು. ಕೇರಳದ ಮುಂಡಕೈಯಲ್ಲಿ ಅನಿಲ್, ಪತ್ನಿ ಝಾನ್ಸಿ, ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಮುಂಡಕೈ ಗುಡ್ಡ ಕುಸಿತದಲ್ಲಿ ಅನಿಲ್ ತಾಯಿ ಲೀಲಾವತಿ(55), ಪುತ್ರ ನಿಹಾಲ್(2.5) ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಅನಿಲ್ ಹಾಗೂ ಅವರ ಪತ್ನಿ ಝಾನ್ಸಿ, ತಂದೆ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರನ್ನು ಕಾಣಲು ಝಾನ್ಸಿರಾಣಿ ಕುಟುಂಬಸ್ಥರು ಕೇರಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

Exit mobile version