ಬೆಂಗಳೂರು: ಭಾರತದಲ್ಲಿ ವಾಹನಗಳಿಗೆ ಬೆಂಕಿ ಬೀಳುವ ಘಟನೆಗಳ ಸಾಮಾನ್ಯವಾಗುತ್ತಿವೆ. ಅದಕ್ಕೆ ನಾನಾ ಕಾರಣಗಳಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ವರದಿಗಳನ್ನು ನಾವು ಹೆಚ್ಚಾಗಿ ನೋಡುವುದಾದರೂ ಪೆಟ್ರೋಲ್ ವಾಹನಗಳೂ ಬೆಂಕಿಗೆ ಆಹುತಿಯಾದ ಸಾಕಷ್ಟು ಪ್ರಕರಣಗಳಿವೆ. ಬೆಂಕಿ ಬಿದ್ದಾಗ ಸಾಮಾನ್ಯವಾಗಿ ವಿಮಾ ಕಂಪನಿಗಳು ಅದಕ್ಕೆ ಪರಿಹಾರ ನೀಡುತ್ತವೆ. ಆದರೆ, ಹರಿಯಾಣದಲ್ಲಿ ವ್ಯತಿರಿಕ್ತ ಪ್ರಕರಣವೊಂದು ನಡೆದಿದೆ. ಅಲ್ಲಿ ಕೆಲವೇ ತಿಂಗಳುಗಳ ಹಳೆಯದಾದ ಮಹೀಂದ್ರಾ ಥಾರ್ ಬೆಂಕಿಗೆ ಆಹುತಿಯಾಗಿದೆ. ಅಚ್ಚರಿಯೆಂದರೆ ವಿಮಾ ಕಂಪನಿ (Insurance Claim) ಮತ್ತು ತಯಾರಕರು ಅವನ ನಷ್ಟಕ್ಕೆ ಪರಿಹಾರ ಒದಗಿಸಿಲ್ಲ. ಅದಕ್ಕೆ ಕಾರಣವೇನು ಗೊತ್ತೇ? ಅನಧಿಕೃತವಾಗಿ ಕಾರಿಗೆ ಆಕ್ಸೆಸರಿ ಅಳವಡಿಸಿರುವುದು.
ಘಟನೆಯನ್ನು ಪ್ರತೀಕ್ ಸಿಂಗ್ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಮಾಲೀಕರು 2023ರ ಡಿಸೆಂಬರ್ನಲ್ಲಿ ಮಹೀಂದ್ರಾ ಥಾರ್ ಕಾರನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಕಾರನ್ನು ಸುಮಾರು 700 ಕಿ.ಮೀ ಓಡಿಸಿದ್ದರು ಮತ್ತು ಅದನ್ನು ಮೊದಲ ಸರ್ವಿಸ್ಗಾಗಿ ಶೋರೂಮ್ಗೆ ಇಟ್ಟಿದ್ದರು. ಕಾರನ್ನು ಬಿಡುವಾಗ, 50-60 ಕಿ.ಮೀ.ಗಿಂತ ಹೆಚ್ಚು ದೂರ ಓಡಿಸಿದ ನಂತರ ಕಾರನ್ನು ನಿಲ್ಲಿಸಿದಾಗಲೆಲ್ಲಾ ಕ್ಯಾಬಿನ್ ಒಳಗೆ ಸುಟ್ಟ ವಾಸನೆ ಬರುತ್ತಿದೆ ಎಂದು ಸಿಬ್ಬಂದಿಗೆ ತಿಳಿಸಿದ್ದರು.
ಸರ್ವಿಸ್ನಿಂದ ಕಾರನ್ನು ವಾಪಸ್ ತೆಗೆದುಕೊಳ್ಳಲು ಹಿಂತಿರುಗಿದಾಗ, ಅಲ್ಲಿನ ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದರು. ಅಲ್ಲದೆ, ಸುಟ್ಟ ವಾಸನೆ ಹೊಸ ಕಾರುಗಳಲ್ಲಿ ಸಾಮಾನ್ಯ ಎಂದೂ ನಂಬಿಸಿದ್ದರು. ಮಾಲೀಕರು ತಂತ್ರಜ್ಞರ ಮಾತನ್ನು ನಂಬಿ ಕಾರು ವಾಪಸ್ ತೆಗೆದುಕೊಂಡು ಹೋಗಿದ್ದರು.
ಕೆಲವು ದಿನಗಳ ಬಳಿಕ ಮಾಲೀಕರು ತಮ್ಮ ಕುಟುಂಬದೊಂದಿಗೆ ತಮ್ಮ ಮನೆಯಿಂದ 200 ಕಿ.ಮೀ ದೂರದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿ ಕಾರು ಪಾರ್ಕ್ ಮಾಡುವಾಗ ಕಾರಿನೊಳಗೆ ಸುಟ್ಟ ವಾಸನೆ ಜೋರಾಗಿತ್ತು. ಸರ್ವಿಸ್ ಸಿಬ್ಬಂದಿ ಮಾತು ಕೇಳಿ ವಾಸನೆಯನ್ನು ನಿರ್ಲಕ್ಷಿಸಿ ಹೊರಟಿದ್ದರು. ಅವರು ಹೊರಬಂದ ಕೆಲವು ನಿಮಿಷಗಳ ನಂತರ ಥಾರ್ ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಭಸ್ಮವಾಗಿತ್ತು.
ಇದನ್ನೂ ಓದಿ : Tata Motors : ಸನಂದ್ ಘಟಕದಲ್ಲಿ 10 ಲಕ್ಷ ಕಾರು ಉತ್ಪಾದಿಸಿದ ಟಾಟಾ ಮೋಟಾರ್ಸ್
ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮಾಲೀಕರು ಘಟನೆಯ ಬಗ್ಗೆ ವಿಮೆ ಮತ್ತು ಡೀಲರ್ ಇಬ್ಬರಿಗೂ ಮಾಹಿತಿ ನೀಡಿದ್ದರು. ವಿಮಾ ಕಂಪನಿಯು ತನಿಖೆ ನಡೆಸಲು ಕಾರ್ಯನಿರ್ವಾಹಕರನ್ನು ಕಳುಹಿಸಿತು ಮತ್ತು ಉತ್ಪಾದನಾ ದೋಷದಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಡೀಲರ್ ಜೊತೆ ಹೋಗಿ ಮಾತನಾಡಬೇಕೆಂದು ಮಾಲೀಕರಿಗೆ ತಿಳಿಸಿತು. ಅಂತೆಯೇ ಅವರು ಶೋರೂಮ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಅವರಿಗೆ ಆಘಾತ ಎದುರಾಯಿತು.
ಕುತ್ತು ತಂದ ರಿಯರ್ ಕ್ಯಾಮೆರಾ
ಈ ಕಾರಿನಲ್ಲಿ ಆಫ್ಟರ್ ಮಾರ್ಕೆಟ್ ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಶೋ ರೂಮ್ ಸಿಬ್ಬಂದಿ ಹೇಳಿದ್ದಾರೆ. ಕಾರಿನಲ್ಲಿ ಬಾಹ್ಯ ಫಿಟ್ಮೆಂಟ್ ಕಂಡುಬಂದಿದ್ದರಿಂದ ಕ್ಲೈಮ್ ಅನ್ನು ತಿರಸ್ಕರಿಸಿದ್ದಾರೆ. ಈ ಮೂಲಕ ವಿಮೆ ಹಾಗೂ ಮಹೀಂದ್ರಾ ಕಂಪನಿ ಎರಡೂ ಸಮಸ್ಯೆಯಿಂದ ನುಣಚಿಕೊಂಡಿದೆ. ಆದರೆ, ಕ್ಯಾಮೆರಾವನ್ನು ಅಳವಡಿಸಿರುವುದು ಡೀಲರ್ಶಿಪ್ ಕಡೆಯಿಂದ ಎಂಬುದಾಗಿ ಥಾರ್ ಮಾಲೀಕರು ಹೇಳಿಕೊಂಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಬೆಂಕಿ ಬಿದ್ದ ಸುದ್ದಿಯಾದ ಬಳಿಕ ಅವರು ಬಾಹ್ಯ ದೋಷದಿಂದ ಘಟನೆ ಸಂಭವಿಸಿದೆ ಎಂದು ವರದಿ ನೀಡಿದೆ.
ತಯಾರಕರು ಮತ್ತು ವಿಮಾ ಕಂಪನಿ ಎರಡೂ ಅವನಿಗೆ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ. ಹೀಗಾಗಿ ಕಾರಿ ಮಾಲೀಕರಲ್ಲಿ ಈಗ ಸುಟ್ಟ ಕಾರು ಹೊರತುಪಡಿಸಿ ಬೇರೇನೂ ಇಲ್ಲ. ಮಾಲೀಕರು ಅಸ್ತಿತ್ವದಲ್ಲಿಲ್ಲದ ಕಾರಿಗೆ ಇಎಂಐ ಪಾವತಿ ಮಾಡಬೇಕಾಗುತ್ತದೆ.
ತಯಾರಕರು ಶೀಘ್ರದಲ್ಲೇ ಪರಿಹಾರದೊಂದಿಗೆ ಬರುತ್ತಾರೆ ಮತ್ತು ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ. ಸುಟ್ಟ ವಾಸನೆ ಬಗ್ಗೆ ಹೇಳಿದಾಗ ಸರ್ವಿಸ್ ಸ್ಟೇಷನ್ ಸಿಬ್ಬಂದಿ ಪ್ರತಿಕ್ರಿಯಿಸಿರಲಿಲ್ಲ. ಅವರು ಕೆಲಸ ಮಾಡಿದ್ದರೆ ಸಮಸ್ಯೆ ಆಗುತ್ತಿಲ್ಲ ಎಂದು ಕಾರಿನ ಮಾಲೀಕರು ಹೇಳಿದ್ದಾರೆ.