Site icon Vistara News

Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್

maoists killed bastar

ಹೊಸದಿಲ್ಲಿ:‌ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ (Security forces) ನಡೆದ ಗುಂಡಿನ ಚಕಮಕಿಯಲ್ಲಿ (encounter) ಕನಿಷ್ಠ ಏಳು ಮಾವೋವಾದಿಗಳು (Maoists killed) ಹತರಾಗಿದ್ದಾರೆ. ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯ ನಂತರ ಇಬ್ಬರು ಮಹಿಳಾ ಕಾರ್ಯಕರ್ತರು ಸೇರಿದಂತೆ ಏಳು ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿವೆ.

ಹೆಚ್ಚಾಗಿ ನಕ್ಸಲೀಯರ ಓಡಾಟವಿರುವ ನಾರಾಯಣಪುರ-ಕಂಕೇರ್ ಗಡಿಯಲ್ಲಿರುವ ಅಬುಜ್ಮದ್ ಕಾಡಿನಲ್ಲಿ ಈ ಘರ್ಷಣೆ ನಡೆಯಿತು. ಅಲ್ಲಿ ಮೀಸಲು ಪೊಲೀಸ್ ಮಹಾನಿರ್ದೇಶನಾಲಯ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ಶಂಕಿತ ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿದರು.

“ನಾರಾಯಣಪುರ-ಕಂಕೇರ್ ಗಡಿ ಪ್ರದೇಶದ ಅಬುಜ್ಮದ್‌ನಲ್ಲಿ ಇಂದು ಬೆಳಿಗ್ಗೆಯಿಂದ ಡಿಆರ್‌ಜಿ ಮತ್ತು ಎಸ್‌ಟಿಎಫ್ ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ. “ಎಲ್ಲಾ ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಎನ್‌ಕೌಂಟರ್ ಇನ್ನೂ ನಡೆಯುತ್ತಿದೆ. ಸಾವುನೋವುಗಳ ಅಂತಿಮ ಸಂಖ್ಯಯನ್ನು ಈಗ ಹೇಳಲು ಆಗದು” ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚೆಗೆ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳು ಹತರಾದ ಕೆಲವು ದಿನಗಳ ನಂತರ ಈ ಕಾರ್ಯಾಚರಣೆ ನಡೆದಿದೆ. ಅವರಲ್ಲಿ ಹಿರಿಯ ಮಾವೋವಾದಿ ನಾಯಕರಾದ ಶಂಕರ್ ರಾವ್ ಮತ್ತು ಲಲಿತಾ ಮೆರವಿ ಅವರ ತಲೆಯ ಮೇಲೆ ₹8 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು. ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನಕ್ಸಲರನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿಯನ್ನು ಅಭಿನಂದಿಸಿದ್ದು, ಸದ್ಯದಲ್ಲೇ ಛತ್ತೀಗಢ ಮತ್ತು ಭಾರತ ನಕ್ಸಲ್‌ ಮುಕ್ತವಾಗಲಿದೆ ಎಂದು ಹೇಳಿದ್ದರು.

ಛತ್ತೀಸ್‌ಗಢವು ಹಲವು ದಶಕಗಳಿಂದ ನಕ್ಸಲೈಟ್‌, ಮಾವೋವಾದಿಗಳ ಭೀತಿ ಎದುರಿಸುತ್ತಿದೆ. ವಿಶೇಷವಾಗಿ ಬಸ್ತಾರ್ ಪ್ರದೇಶವು ನಕ್ಸಲ್ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಆಗಾಗ ಹಿಂಸಾಚಾರ ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್‌ ನಡೆಯುತ್ತಲೇ ಇರುತ್ತದೆ. ನಕ್ಸಲರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವುದು, ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡುವುದು ಮತ್ತು ಶರಣಾಗುವ ನಕ್ಸಲರಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದಾಗ್ಯೂ ಈ ಪ್ರಯತ್ನಗಳ ಹೊರತಾಗಿಯೂ ರಾಜ್ಯದಲ್ಲಿ ನಕ್ಸಲ್ ಹಾವಳಿ ಮುಂದುವರಿದಿದೆ.

ಇದನ್ನೂ ಓದಿ: Kanker Encounter: ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳ ಹತ್ಯೆಗೈದ ಭದ್ರತಾ ಪಡೆ

Exit mobile version