ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ (Sedition Case) ಮೂವರು ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನಗರದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ (Pro Pak slogans) ಸೋಮವಾರ ಸಂಜೆ ಆರೋಪಿಗಳಾದ ಇಲ್ತಾಜ್, ಮುನಾವರ್ ಹಾಗೂ ಮೊಹಮದ್ ಶಫಿ ನಾಶಿ ಪುಡಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದರು. ನಂತರ ಮೂವರು ಆರೋಪಿಗಳನ್ನು ಕೋರಮಂಗಲದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ಆರೋಪಿಗಳ ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡಿದೆ. ಹೀಗಾಗಿ ವಿಚಾರಣೆ ನಡೆಸಲು ಅಶೋಕ್ ನಗರ ಪೊಲೀಸ್ ಠಾಣೆಗೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ | FSL Report: ರಾಷ್ಟ್ರ ದ್ರೋಹಿಗಳ ರಕ್ಷಣೆಯೇ ಆದ್ಯತೆಯೇ; ಸಿಎಂ ಸಿದ್ದರಾಮಯ್ಯಗೆ ಬಿ.ವೈ. ವಿಜಯೇಂದ್ರ ಪ್ರಶ್ನೆ
ಏನಿದು ಘಟನೆ?
ಫೆ. 27ರಂದು ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿದ್ದರು. ನಮ್ಮ ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ನಡೆದಿತ್ತು. ಇದಕ್ಕೆ ಬಿಜೆಪಿ ಸೇರಿದಂತೆ ನಾಗರಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದಲ್ಲದೆ, ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿಯಲಾಗಿತ್ತು.
ಎಫ್‌ಎಸ್‌ಎಲ್ ವರದಿ, ಲಭ್ಯ ಸಾಕ್ಷ್ಯಾಧಾರಗಳ ಮೇರೆಗೆ ಆರೋಪಿಗಳಾದ ದೆಹಲಿ ಮೂಲದ ಇಲ್ತಾಜ್, ಆರ್.ಟಿ. ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿ ಪುಡಿಯನ್ನು ಪೊಲೀಸರು ಬಂಧಿಸಿದ್ದರು.
ಎಫ್‌ಎಸ್‌ಎಲ್ ವರದಿ ಬಗ್ಗೆ ಗಮನ ಸೆಳೆದಿದ್ದ ವಿಸ್ತಾರ ನ್ಯೂಸ್
“ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ” ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ (FSL Expert) ಡಾ.ಬಿ.ಎನ್.ಫಣೀಂದ್ರ (Dr B N Phaneendar) ಅವರು ಮಾ. 1ರಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದರು. ಎಫ್‌ಎಸ್‌ಎಲ್ ವರದಿಯಲ್ಲೂ (FSL Report) ಇದನ್ನೇ ಉಲ್ಲೇಖಿಸಿರುವುದಾಗಿ ಫಣೀಂದ್ರ ತಿಳಿಸಿದ್ದರು. ಅಲ್ಲದೆ, ಬಿಜೆಪಿ ಸಹ ಇದೇ ವರದಿಯನ್ನು ಉಲ್ಲೇಖಿಸಿ, ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಡಿಜಿಪಿ ಅಲೋಕ್ ಮೋಹನ್‌ಗೆ ಮನವಿಯನ್ನೂ ಸಲ್ಲಿಸಿತ್ತು. ಕೊನೆಗೆ FSL ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನು ಕೂಗಿರುವುದು ದೃಢಪಟ್ಟಿದ್ದರಿಂದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Sedition Case: ಬ್ಯಾಡಗಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿಪುಡಿ ಬಂಧನ; ಕುಟುಂಬಸ್ಥರ ಕಣ್ಣೀರು
ಕಾಂಗ್ರೆಸ್ ವಾದ ಏನಾಗಿತ್ತು?
ಕಾಂಗ್ರೆಸ್ ಪಕ್ಷದ ಪ್ರಕಾರ ಅಲ್ಲಿ ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಲಾಗಿಲ್ಲ. ಬದಲಾಗಿ ನಾಸಿರ್ ಸಾಬ್ ಜಿಂದಾಬಾದ್ (Nasir saab Zindabad) ಎಂಬ ಘೋಷಣೆಯನ್ನು ತಿರುಚಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಂತೆ ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಾದಿಸುತ್ತಾ ಬಂದಿತ್ತು.
ಕಾಂಗ್ರೆಸ್ ನಾಯಕರು ಈ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ, ಜತೆಗೆ ಫ್ಯಾಕ್ಟ್ ಚೆಕ್ ಮಾಡಿದ್ದನ್ನು ಬಿಡುಗಡೆ ಮಾಡಿದ್ದಾರೆ. ಫ್ಯಾಕ್ಟ್ ಚೆಕ್ ವಿಡಿಯೊದಲ್ಲಿ ನಾಸಿರ್ ಸಾಬ್ ಜಿಂದಾಬಾದ್ ಎಂದು ಹೇಳಿದಂತೆ ಕೇಳಿಸಿದೆ ಎಂದು ಕಾಂಗ್ರೆಸ್ ಹೇಳಿತ್ತು.