Site icon Vistara News

Actor Darshan: ದರ್ಶನ್‌ ಡಿಎನ್‌ಎ ಪರೀಕ್ಷೆಗೆ ಮುಂದಾದ ಪೊಲೀಸರು, ಯಾಕೆ ಈ ಟೆಸ್ಟ್?

Actor Darshan

Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder Case) ಪ್ರಕರಣಕ್ಕೆ ಸಂಬಂಧಿಸಿ ಎ2 ನಟ ದರ್ಶನ್‌ (Actor Darshan) ಸೇರಿದಂತೆ 9 ಆರೋಪಿಗಳಿಗೆ ಡಿಎನ್‌ಎ ಪರೀಕ್ಷೆ (DNA test) ನಡೆಸಲು ಪೊಲೀಸರು ಮುಂದಾಗಿದ್ದಾರೆ. ಪವಿತ್ರಾ ಗೌಡ (Pavithra Gowda) ಡಿಎನ್‌ಎ ಟೆಸ್ಟ್‌ ಕೂಡ ನಡೆಯಲಿದೆ.

ಇದಕ್ಕಾಗಿ ಆರೋಪಿಗಳ ರಕ್ತ, ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗೂ ಇದಕ್ಕೂ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯಲಿದೆ. ಎಫ್ಎಸ್ಎಲ್‌ಗೆ ಈ ಕೂದಲು, ರಕ್ತದ ಮಾದರಿ ಕಳುಹಿಸಿ ತಾಳೆ ನೋಡಲಾಗುತ್ತದೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗಳು ಒಂದೇ ಆದಲ್ಲಿ ಕೊಲೆಗೆ ಮತ್ತಷ್ಟು ಸಾಕ್ಷ್ಯ ಲಭ್ಯವಾಗಲಿದೆ. ಹೀಗಾಗಿ ಆರೋಪಿಗಳ ಡಿಎನ್ಎ ಟೆಸ್ಟ್‌ಗೆ ಪೊಲೀಸರು ತೊಡಗಿದ್ದಾರೆ.

ಹಿಂಸೆಯ ಕರಾಳತೆಗೆ ಬೆಚ್ಚಿದ ಪೊಲೀಸರು

ಪ್ರಕರಣದಲ್ಲಿ ದಿನೇ ‌ದಿನೆ ಹೊರಬರುತ್ತಿರುವ, ರೇಣುಕಾಸ್ವಾಮಿಗೆ ನೀಡಿದ ಚಿತ್ರಹಿಂಸೆಯ ಕರಾಳತೆ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ರೇಣುಕಾಸ್ವಾಮಿ ದೇಹವೆಲ್ಲಾ ಛಿದ್ರಛಿದ್ರವಾಗುವಂತೆ ಹಿಂಸಿಸಲಾಗಿದೆ. ಬಾಸುಂಡೆಗಳು ಎದ್ದು ಕಾಣುವಂತಿದ್ದು, ರಕ್ತ ಮೈಮೇಲೆ ಹೆಪ್ಪುಗಟ್ಟಿತ್ತು. ಆರಂಭದಲ್ಲಿ ಒದ್ದು, ಹೊಡೆದು ಕೊಲ್ಲಲಾಯಿತು ಎಂದಿದ್ದ ಪ್ರಕರಣದಲ್ಲಿ ಮುಂದೆ ಮರ್ಮಾಂಗಕ್ಕೆ ಬಿದ್ದ ಹೊಡೆತ, ದೇಹದಲ್ಲಿ ಹರಿದ ಕರೆಂಟ್‌ನ ಮಾಹಿತಿ ಹೊರಬರುತ್ತಾ ಹೋಯಿತು, ದೊಣ್ಣೆ, ಬೂಟು, ರಿಪೀಸ್ ಪಟ್ಟಿಗಳಿಂದ ರೇಣುಕಾಸ್ವಾಮಿಯ ದೇಹದ ಮೇಲೆ ಬಿದ್ದ ಹೊಡೆತದಿಂದ ಬೆನ್ನಿನ ಮೇಲಿನ ಒಂದಡಿ ಜಾಗದ ಚರ್ಮವೇ ಕಾಣದಂತಾಗಿದೆ. ಸಿಗರೇಟ್‌ನಿಂದ ಸುಟ್ಟಂತಿರುವ ಗಾಯಗಳು, ತಲೆ, ಮುಖ, ಹೊಟ್ಟೆಯ ಭಾಗಗಳಿಗೆ ಬಿದ್ದ ಹೊಡೆತ ಮತ್ತು ಗಾಯದ ಗುರುತುಗಳು ರೇಣುಕಾಸ್ವಾಮಿ ಮೇಲೆ ಆದ ಹಲ್ಲೆಯ ತೀವ್ರತೆಯನ್ನು ಸಾರಿ ಸಾರಿ ಹೇಳಿವೆ.

ವಿಕ್ಟೋರಿಯಾದಲ್ಲಿ ಪರೀಕ್ಷೆ

ನಿನ್ನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಿಗೆ ಹಲವು ಟೆಸ್ಟ್‌ಗಳನ್ನು ಮಾಡಲಾಗಿದೆ. ದರ್ಶನ್ ತಲೆಗೆ ವಿಗ್‌ ಅಳವಡಿಸಿಕೊಂಡಿದ್ದು, ವಿಗ್ ಹೇರ್ ಸ್ಯಾಂಪಲ್ ಅನ್ನು ಕೂಡ ಪೊಲೀಸರು ಪಡೆದಿದ್ದಾರೆ.

ಆರೋಪಿಯ ಉದ್ದದ ಅಳತೆ, ತೂಕ, ಕೂದಲಿನ ಸುತ್ತಳತೆ, ತಲೆಯಲ್ಲಿ ಕೂದಲಿನ ಉಪಸ್ಥಿತಿ, ಆರೋಪಿ ಹೊಂದಿರುವ ಸ್ವಾಭಾವಿಕ ಕೂದಲಿನ ಪ್ರದೇಶ, ತಲೆಯ ಮೇಲಿರುವ ಅಸ್ವಾಭಾವಿಕ ಕೂದಲಿನ (ವಿಗ್) ಪ್ರದೇಶ, ಸ್ವಾಭಾವಿಕ ಮತ್ತು ಅಸ್ವಾಭಾವಿಕ ಕೂದಲಿನ ಮಾದರಿ ಸಂಗ್ರಹಣೆ ಮತ್ತು ಬಾಚಣಿಕೆಯಲ್ಲಿ ಬಾಚಿದಾಗ ಬರುವ ರೀತಿಯಲ್ಲೂ ಸಂಗ್ರಹಿಸಲಾಗಿದೆ. ರಕ್ತದ ಗುಂಪಿನ ಮತ್ತು ಡಿಎನ್ಎ ಮಾಹಿತಿಗಾಗಿ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಕಣ್ಣಿನ ಪರೀಕ್ಷೆ ನಡೆಸಲಾಗಿದೆ.

ಸಂಗ್ರಹಿಸಿರುವ ಎಲ್ಲಾ ಸ್ಯಾಂಪಲ್‌ಗಳನ್ನು ಪೊಲೀಸರು ಎಫ್ಎಸ್ಎಲ್‌ಗೆ ಕಳಿಸಿದ್ದಾರೆ. ಆರೋಪಿಗಳಿಂದ ಪಡೆದಿರುವ ಮತ್ತು ಘಟನಾ ಸ್ಥಳಗಳಲ್ಲಿ ಸಿಕ್ಕಿರುವ ಮಾದರಿಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು, ಎರಡನ್ನೂ ತಾಳೆ ಹಾಕಿ ಘಟನೆಯ ಸ್ಥಳದಲ್ಲಿ ಆರೋಪಿಯ ಭಾಗವಹಿಸಿರುವಿಕೆಯನ್ನು ದೃಢೀಕರಿಸುತ್ತಾರೆ. ಆ ಮೂಲಕ ಈಗಾಗಲೇ ಸಿಕ್ಕಿರುವ ಸಾಕ್ಷ್ಯಗಳಿಗೆ ಪುಷ್ಟಿ ಸಿಕ್ಕಂತಾಗುತ್ತದೆ.

ಇಂದು ಕೋರ್ಟ್‌ ಮುಂದೆ ದರ್ಶನ್‌ ಹಾಜರು, ಕಸ್ಟಡಿಗೋ ಜೈಲಿಗೋ ತೀರ್ಮಾನ

ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ (Renuka Swamy Murder) ಪ್ರಕರಣದಲ್ಲಿ ಇಂದು ಮತ್ತೆ ನ್ಯಾಯಾಲಯದ ಮುಂದೆ ನಟ ದರ್ಶನ್‌ (Actor Darshan) ಸೇರಿ ಎಲ್ಲ ಬಂಧಿತ 17 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂದು ತಿಳಿದುಬರಲಿದೆ.

ನಟ ದರ್ಶನ್ ಸೇರಿ ಎಲ್ಲ 17 ಮಂದಿ ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಇಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ದರ್ಶನ್‌ನನ್ನು ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.

ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಜೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲುಗಳು, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಒಂಬತ್ತು ದಿನಗಳ ಕಾಲ ದರ್ಶನ್‌ ಅಲಿಯಾಸ್‌ ಡಿ ಬಾಸ್‌ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾನೆ.

ಇದನ್ನೂ ಓದಿ: Actor Darshan: ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು ಎಂದು ದರ್ಶನ್‌ಗೆ ತಿರುಗೇಟು ಕೊಟ್ಟ ಉಮಾಪತಿ!

Exit mobile version