ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣವನ್ನು ಮುಚ್ಚಿ ಹಾಕಲು ನಟ ದರ್ಶನ್ (Actor Darshan) ತನ್ನ ಸಹಚರರಿಗೆ ನೀಡಿದ್ದ 30 ಲಕ್ಷ ರೂ. ಹಣವನ್ನು ಒಬ್ಬ ಮಾಜಿ ಕಾರ್ಪೊರೇಟರ್‌ನಿಂದ ಪಡೆದಿದ್ದು ಗೊತ್ತಾಗಿದೆ. ಈ ಕುರಿತು ಈ ವ್ಯಕ್ತಿಯನ್ನು ಪೊಲೀಸರು ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಈ ಆಸಾಮಿ ಯಾರ ಕಣ್ಣಿಗೂ ಬೀಳದೆ (Absconded) ನಾಪತ್ತೆಯಾಗಿದ್ದಾರೆ.
ರೇಣುಕಾ ಸ್ವಾಮಿ ಕೇಸ್‌ನಲ್ಲಿ ಮತ್ತೊಬ್ಬ ವ್ಯಕ್ತಿಯ ಕೈವಾಡ ಇರುವುದು ಪತ್ತೆಹಚ್ಚಿದ ಪೊಲೀಸರಿಗೆ ಗೊತ್ತಾಗಿರುವುದು ದರ್ಶನ್‌ಗೆ ಲಕ್ಷ ಲಕ್ಷ ಹಣ ನೀಡಿದ ಆ ವ್ಯಕ್ತಿಯ ಬಗ್ಗೆ. ಕೊಲೆ ನಡೆದ ಬೆನ್ನಲ್ಲೇ ದರ್ಶನ್ ಆ ವ್ಯಕ್ತಿಯಿಂದ ಹಣ ಪಡೆದಿದ್ದಾನೆ. ಸಾಕ್ಷಿ ನಾಶ ಮಾಡುವುದಕ್ಕೆಂದೇ 40 ಲಕ್ಷ ರೂ. ಹಣವನ್ನು ಇವರಿಂದ ದರ್ಶನ್ ಪಡೆದಿದ್ದ. ಆ 40 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇದೀಗ ಹಣದ ಬಗ್ಗೆ ಆ ವ್ಯಕ್ತಿಯನ್ನು ಪ್ರಶ್ನಿಸಬೇಕಿದೆ.
ಮಾಜಿ ಕಾರ್ಪೊರೇಟರ್ ಆಗಿರುವ ಮೋಹನ್ ರಾಜ್ ಎಂಬಾತನೇ ಈ ವ್ಯಕ್ತಿಯಾಗಿದ್ದು, ಈತನಿಂದ ದರ್ಶನ್‌ಗೆ ಹಣ ಸಂದಾಯವಾಗಿದೆ. ದರ್ಶನ್‌ಗೆ ಆಪ್ತ ಸ್ನೇಹಿತ ಆಗಿರುವ ಮೋಹನ್ ರಾಜ್, ಆತನಿಗೆ 40 ಲಕ್ಷ ರೂ. ಹಣ ನೀಡಿದ್ದಾನೆ. ಈ ಹಣವನ್ನು ತನ್ನ ಸಹಚರರಿಗೆ ನೀಡಿರುವ ದರ್ಶನ್, ತನ್ನ ಹೆಸರು ಎಲ್ಲಿಯೂ ಕಾಣಿಸಿಕೊಳ್ಳದಂತೆ ತಿಳಿಸಿದ್ದಾನೆ. ಇದೀಗ ಇರುವ ಪ್ರಶ್ನೆಯೆಂದರೆ, ಈ ಹಣ ಪಡೆಯುವಾಗ ಮೋಹನ್ ರಾಜ್‌ಗೆ ಈ ಕೊಲೆಯ ಬಗ್ಗೆ ತಿಳಿದಿತ್ತೇ ಇಲ್ಲವೇ ಎಂಬುದು. ತಿಳಿದಿತ್ತು ಎಂದಾದರೆ, ಕೊಲೆ ಪ್ರಕರಣ ಮೋಹನ್ ರಾಜ್ ಕೊರಳಿಗೂ ಸುತ್ತಿಕೊಳ್ಳಲಿದೆ.
ಹಣದ ಬಗ್ಗೆ ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ. ಮೋಹನ್ ರಾಜ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಬಂಧನ ಸಾಧ್ಯತೆಯೂ ಇದೆ. ಈ ಮೋಹನ್ ರಾಜು 2019ರಲ್ಲಿ ಬೆಂಗಳೂರಿನ ಉಪಮೇಯರ್ ಆಗಿದ್ದ. ಬೊಮ್ಮನಹಳ್ಳಿ ವಾರ್ಡ್ ಕಾರ್ಪೋರೇಟರ್ ಆಗಿದ್ದ. ರಾಜಕೀಯ ವಲಯದಲ್ಲಿ ಸಾಕಷ್ಟು ಪ್ರಭಾವಿಯೂ ಆಗಿದ್ದಾನೆ.
ಪ್ರಕರಣದಲ್ಲಿ ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್ ರಾಜು ಫೋನ್ ಸ್ವಿಚಾಫ್ ಮಾಡಿಕೊಂಡಿದ್ದಾನೆ. ಫೋನ್ ಸ್ವಿಚಾಫ್ ಆಗಿರುವುದರಿಂದ ಮನೆಗೆ ಹೋಗಿ ನೋಟಿಸ್ ನೀಡಲು ಕಾಮಾಕ್ಷಿ ಪಾಳ್ಯ ಪೊಲೀಸರು ಮುಂದಾಗಿದ್ದಾರೆ. ಬಂಧಿತರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.
ವಿಶೇಷವೆಂದರೆ, 2018ರಲ್ಲಿ ಇದೇ ಮೋಹನ್ ರಾಜ್ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಜಮೀನು ವಿಚಾರವಾಗಿ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ, ಬೊಮ್ಮನಹಳ್ಳಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ಪೊಲೀಸ್ ಸಿಬ್ಬಂದಿ ಎದುರೇ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ಮೈಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಇದನ್ನೂ ಓದಿ: Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್ ಕೊಟ್ಟ ಸಂಜನಾ ಗಲ್ರಾನಿ!