ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ನಟ ದರ್ಶನ್ (Actor Darshan) ಸೆಲ್‌ಗೆ ಜೈಲಾಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ದರ್ಶನ್ ಕೊಠಡಿಗೆ ಹೊಸದಾಗಿ ಏಳು ಜನ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಹಳೆಯ ಸಿಬ್ಬಂದಿಯನ್ನು ಬದಲಾಯಿಸಲಾಗಿದೆ.
ಈ ಹಿಂದೆ ಸಿದ್ದಾರೂಢ ಎಂಬ ಕೈದಿ ಹೊರ ಬಂದ ಬಳಿಕ ಒಂದಷ್ಟು ಜೈಲು ವಿಚಾರಗಳನ್ನು ಹಂಚಿಕೊಂಡಿದ್ದ. ತಾನು ದರ್ಶನ್ ಭೇಟಿ ಮಾಡಿದ್ದೆ ಎಂದು ಹೇಳಿಕೊಂಡಿದ್ದ. ಹೀಗಾಗಿ ಇಂಥ ಘಟನೆ ಮರುಕಳಿಸದಂತೆ ದರ್ಶನ್ ಕೊಠಡಿಯ ಹೊರ ಭಾಗದಲ್ಲಿ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. ಇದೀಗ ಬೇರೆ ಯಾವ ಕೈದಿಯೂ ಭೇಟಿ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ದರ್ಶನ್ ಸೆಲ್‌ಗೆ ಹೊಸ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಹೊರಗಿನವರು ಯಾರಾದರೂ ಭೇಟಿಗೆ ಬಂದರೆ ಜೊತೆಗೆ ಜೈಲಿನ ಸಿಬ್ಬಂದಿ ಇರುತ್ತಾರೆ. ಇಬ್ಬರು ಸಿಬ್ಬಂದಿಯ ಭದ್ರತೆಯಲ್ಲಿ ದರ್ಶನ್ ಕರೆತರಲಾಗುತ್ತದೆ. ಹೊರಗಿನಿಂದ ಬಂದವರ ಭೇಟಿ ಬಳಿಕ ಮತ್ತೆ ಭದ್ರತೆಯಲ್ಲೇ ವಾಪಸ್ಸಾಗುತ್ತಾನೆ.
ಈ ನಡುವೆ. ಮನೆಯೂಟಕ್ಕಾಗಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನೂ ವಾಪಸ್ ಪಡೆಯಲಾಗಿದೆ. ಮನೆಯೂಟ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ದರ್ಶನ್ (Actor Darshan) ಪರ ವಕೀಲರು ವಾಪಸ್ ಪಡೆದಿದ್ದಾರೆ. ತಾಂತ್ರಿಕ ಕಾರಣದಿಂದ ನಟ ದರ್ಶನ್ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ
ರೇಣುಕಾಸ್ವಾಮಿ ಕೊಲೆ ಸಂಬಂಧ ನಟ ದರ್ಶನ್ ಹಾಗೂ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಹುತೇಕ ಆಗಸ್ಟ್‌ನಲ್ಲಿ ಚಾರ್ಜ್‌ಶೀಟ್ ಮಾಡಲು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಕ್ರೋಢೀಕರಣದಲ್ಲಿ ಪೊಲೀಸರು ತೊಡಗಿದ್ದಾರೆ. ಆರೋಪಿಗಳ ಹೇಳಿಕೆಗಳು, ಸಾಕ್ಷಿಗಳ ಹೇಳಿಕೆಗಳು, 164 ಹೇಳಿಕೆ ಪ್ರತಿಗಳು, ಮಹಜರು ಕಾಪಿಗಳು, ಸಿಡಿಆರ್ ರಿಪೋರ್ಟ್, ಆರ್‌ಟಿಓ ರಿಪೋರ್ಟ್‌ಗಳು, ಮೆಡಿಕಲ್ ರಿಪೋರ್ಟ್ಸ್ ಸೇರಿದಂತೆ ಹಲವು ದಾಖಲೆಗಳು ಅಡಕವಾಗಬೇಕಿವೆ.
ಹಲವಾರು ದಾಖಲೆಗಳು ಇನ್ನೂ ಪೊಲೀಸರ ಕೈ ಸೇರಬೇಕಿವೆ. ಸಿಸಿಟಿವಿ ಫೂಟೇಜ್ ರಿಪೋರ್ಟ್, ಬಟ್ಟೆಗಳ ರಿಪೋರ್ಟ್, ಸ್ಥಳದಲ್ಲಿ ಸಂಗ್ರಹಿಸಿದ ಸ್ಯಾಂಪಲ್‌ಗಳ ರಿಪೋರ್ಟ್, ಮರಣೋತ್ತರ ಪರೀಕ್ಷೆಯಲ್ಲಿ ಸಂಗ್ರಹಿಸಿದ ಸ್ಯಾಂಪಲ್ ರಿಪೋರ್ಟ್ಸ್, ಮೊಬೈಲ್ ರಿಟ್ರೀವ್ ರಿಪೋರ್ಟ್, ಎಫ್ಎಸ್ಎಲ್‌ಗೆ ರವಾನಿಸಿದ ಸ್ಯಾಂಪಲ್ ರಿಪೋರ್ಟ್ಸ್‌ಗೆ ಪೊಲೀಸರು ಕಾದಿದ್ದಾರೆ. ವರದಿಗಳು ಬಂದ ನಂತರ ಪರಿಶೀಲನೆ ನಡೆಸಿ ಚಾರ್ಜ್‌ಶೀಟ್ ತಯಾರಿಸಲಿದ್ದಾರೆ.
ರಿಪೋರ್ಟ್‌ಗಳನ್ನು ಆದಷ್ಟು ಬೇಗ ನೀಡುವಂತೆ ಎಫ್ಎಸ್ಎಲ್ ಹಾಗೂ ಸಿಐಡಿ ಟೆಕ್ನಿಕಲ್ ಸೆಲ್‌ಗೆ ಪೊಲೀಸರು ಮನವಿ ಮಾಡಿದ್ದಾರೆ. ಇನ್ನೂ ಕೆಲವು ವರದಿಗಳು ಹೈದರಾಬಾದ್ ಎಫ್ಎಸ್ಎಲ್‌ನಿಂದ ಬರಬೇಕಿದೆ. ಸುಮಾರು 66ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಎಫ್ಎಸ್ಎಲ್‌ಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಹಲವಾರು ಪ್ರತ್ಯಕ್ಷ ಪರೋಕ್ಷ ಸಾಕ್ಷಿಗಳ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.
ಈಗಾಗಲೇ ಪ್ರಕರಣ ದಾಖಲಾಗಿ ಒಂದೂವರೆ ತಿಂಗಳಿಗೂ ಅಧಿಕ ಕಾಲವಾಗಿದೆ. ಸೆಪ್ಟೆಂಬರ್ 8ರೊಳಗೆ ಚಾರ್ಜ್‌ಶೀಟ್ ಮಾಡಬೇಕು. ಆದ್ದರಿಂದ ಕೊನೆ ದಿನದವರೆಗೂ ಕಾಯದೆ ಆದಷ್ಟು ಬೇಗ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದು, ಆಗಸ್ಟ್ ಮಧ್ಯ ವಾರದಲ್ಲಿ ಸಲ್ಲಿಸಬಹುದು.
ಪಶ್ಚಿಮ ವಿಭಾಗ ಪೊಲೀಸರು ಎಸಿಪಿ ಚಂದನ್, ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್ ನಾಗೇಶ್ ಹಾಗೂ ತಂಡದಿಂದ ಚಾರ್ಜ್‌ಶೀಟ್ ತಯಾರಿ ನಡೆದಿದ್ದು, ಹಲವು ಸಿಬ್ಬಂದಿ ನಿಯೋಜಿಸಲಾಗಿದೆ. 20ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿ ಬಳಸಿಕೊಂಡು, ಪ್ರತಿ ಠಾಣೆಯ ಇನ್‌ಸ್ಪೆಪೆಕ್ಟರ್ ಹಾಗು ಪಿಎಸ್ಐಗಳಿಗೆ ಒಂದೊಂದು ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಸದ್ಯಕ್ಕಿಲ್ಲ ಮನೆಯೂಟದ ಭಾಗ್ಯ; ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಾಪಸ್!