ಬೆಂಗಳೂರು: ನಟಿ ರಚಿತಾ ರಾಮ್ (Rachitha Ram) ಇತ್ತೀಚೆಗೆ ಪರಪ್ಪನ ಅಗ್ರಹಾರ (Parappana Agrhara) ಜೈಲಿಗೆ ಹೋಗಿ, ರೇಣುಕಾ ಸ್ವಾಮಿ ಕೊಲೆ (Renuka Swamy Murder) ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ನನ್ನು (Actor Darshan) ಭೇಟಿಯಾಗಿದ್ದರು. ಅದೇ ದಿನವೇ ನಟ ದರ್ಶನ್ ಸಿಗರೇಟ್ ಪಾರ್ಟಿ ಮಾಡಿದರಾ ಎಂಬ ಅನುಮಾನ ಇದೀಗ ಗಟ್ಟಿಯಾಗುತ್ತಿದೆ.
ದರ್ಶನ್ ಸಿಗರೇಟ್- ಟೀ ಪಾರ್ಟಿಯ ಫೋಟೋ ತೆಗೆದವನು ರೌಡಿಶೀಟರ್ ವೇಲು ಎಂದು ಗೊತ್ತಾಗಿದೆ. ಇದನ್ನು ಆತ ಮೈಸೂರಿನಲ್ಲಿರುವ ದರ್ಶನ್ ಫ್ಯಾನ್ಸ್‌ಗೆ ಕಳಿಸಿದ್ದ. ಅಲ್ಲಿಂದ ಚಾಮರಾಜನಗರದ ಕ್ರೈಂ ಪೊಲೀಸ್ ಒಬ್ಬರಿಗೆ ಫೋಟೋ ತಲುಪಿತ್ತು. ಪೋಟೋ ಲೀಕ್ ಆಗದಂತೆ ತಡೆಯಲು ಲಕ್ಷಾಂತರ ರೂಪಾಯಿಯ ಡೀಲ್ ಸಹ ನಡೆದಿತ್ತು ಎಂದು ಗೊತ್ತಾಗಿದೆ.
ಆದರೆ ಫೋಟೋ ಲೀಕ್ ಆಗಿಯೇ ಬಿಟ್ಟಿದೆ. ಸೋರಿಕೆ ಆದ ಬೆನ್ನಲ್ಲೇ ಎಎಜಿ ಆನಂದ್ ರೆಡ್ಡಿ ಕೈದಿಗಳು ಹಾಗೂ ಅಧಿಕಾರಿಗಳನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಸಿ ಪ್ರಕರಣದ ಬಗ್ಗೆ ಡಿಜಿಗೆ ವರದಿ ಸಲ್ಲಿಸಿದ್ದಾರೆ. ದರ್ಶನ್, ನಾಗ ಸಿಗರೇಟ್ ಪಾರ್ಟಿ ಮಾಡಿರುವ ಫೋಟೋ ಯಾವತ್ತಿನದು, ಯಾರು ಫೋಟೋ ತೆಗದದ್ದು ಎಂಬ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಳೆದ ಗುರುವಾರ ನಟಿ ರಚಿತಾ ರಾಮ್ ಜೈಲಿಗೆ ಎಂಟ್ರಿ ಕೊಟ್ಟಿದ್ದರು. ದರ್ಶನ್ ಭೇಟಿ ಮಾಡಿ ಬಂದಿದ್ದ ದಿನವೇ ಈ ಫೋಟೋ ಘಟನೆ ಆಗಿರಬಹುದು ಎಂದು ಅಲ್ಲಿನ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರಂತೆ. ಸದ್ಯ ಈ ಬಗ್ಗೆ ಜೈಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಹಾಗಾದರೆ ಸಿಗರೇಟ್ ಯಾರ ಮೂಲಕ ಹೋಗಿರಬಹುದು ಎಂಬುದರ ಬಗ್ಗೆಯೂ ಅನುಮಾನ ಮೂಡಿದೆ.
ಸದ್ಯ ಪ್ರಕರಣದಲ್ಲಿ ಅಮಾನತಾಗಿರುವ ಜೈಲರ್‌ಗಳಾದ ಪ್ರಭು ಖಂಡ್ರೆ ಹಾಗೂ ಶರಣಬಸಪ್ಪ ಎರಡು ಪಾಳಿಯಲ್ಲಿ ಜೈಲಿನ ಮೇಲ್ವಿಚಾರಕರಾಗಿ ಕೆಲಸ ಮಾಡ್ತಾರೆ. ಇವರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಜೈಲರ್ ಶರಣಬಸವ ಅಮೀನಗಡ, ಅಸಿಸ್ಟೆಂಟ್ ಜೈಲರ್ ಎಲ್ಎಸ್ ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಹೆಡ್ ವಾರ್ಡರ್ಸ್ ಸಂಪತ್ ಕುಮಾರ್ ಕಡಪಟ್ಟಿ, ಬಸಪ್ಪ ಕೂಡ ಅಮಾನತಾಗಿದ್ದಾರೆ.
ಜೈಲಿನಲ್ಲಿ ದರ್ಶನ್ ಸಿಗರೇಟ್ ಪಾರ್ಟಿ, 7 ಅಧಿಕಾರಿಗಳು ಅಮಾನತು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲಿನೊಳಗೇ ಐಷಾರಾಮಿ ಜೀವನ ನಡೆಸಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲೇ, ಜೈಲಿನ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ಈ ಕುರಿತು ಹೇಳಿಕೆ ನೀಡಿದ್ದಾರೆ.
ನಿನ್ನೆ ಸಂಜೆ 4.30ಕ್ಕೆ ಸುದ್ದಿ ಬಂತು. ಈ ಕುರಿತು ರಾತ್ರಿ 1 ಗಂಟೆವರೆಗೂ ಆಂತರಿಕ ತನಿಖೆ ನಡೆಸಲಾಗಿದೆ. ಜೈಲಿನಲ್ಲಿ ದರ್ಶನ್ ಮತ್ತು ಅವರ ಸ್ನೇಹಿತರ ಜೊತೆ ಟೀ ಕುಡಿಯುವ ಫೋಟೋ ವೈರಲ್ ಆಗಿದೆ. ಈ ಕುರಿತು 7 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಶರಣ ಬಸವ ಅಮೀನಗಡ, ಪ್ರಭು, ತಿಪ್ಪೇಸ್ವಾಮಿ, ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್, ಶ್ರೀಕಾಂತ್ ತಲವಾರ್, ಬಸಪ್ಪ ತೇಲಿ ಇವರನ್ನು ಅಮಾನತು ಮಾಡಿದ್ದೇವೆ ಎಂದು ಗೃಹ ಸಚಿವರು ತಿಳಿಸಿದರು.
ಇದು ಹೇಗೆ ಸಾಧ್ಯವಾಯಿತು ಎಂದು ವರದಿ ಕೇಳಿದ್ದೇನೆ. ಈ 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಬಳಿಕ ಅವರ ಮೇಲೆ ಕ್ರಮ ಆಗಿದೆ. ಜೈಲ್ ಸೂಪರಿಂಟೆಂಡೆಂಟ್ ಅವರನ್ನು ಶಿಫ್ಟ್ ಮಾಡುತ್ತೇವೆ. ಇಂತಹ ಘಟನೆ ನಡೆಯಬಾರದು. ಪದೇ ಪದೆ ಈ ರೀತಿ ಆಗಬಾರದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ದರೂ ಅವರ ವಿರುದ್ಧ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ನುಡಿದರು.
ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮರಾ ಹಾಕಿದರೂ ಹೀಗೆ ಆಗೋದು ಸರಿಯಲ್ಲ. ತನಿಖೆ ಬಳಿಕ ಫೋನ್ ಎಲ್ಲಿಂದ ಬಂತು, ಸಿಗರೇಟ್ ಹೇಗೆ ಬಂತು ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಜೈಲಿನಲ್ಲಿ 24 ಗಂಟೆ ಮಾನಿಟರ್ ನಡೆಯುತ್ತಿರುತ್ತದೆ. ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಆಗಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ: Actor Darshan: ನಟನ ಐಷಾರಾಮಿ ʼಜೈಲು ದರ್ಶನʼ, 7 ಅಧಿಕಾರಿಗಳು ಅಮಾನತು