Site icon Vistara News

Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

actor darshan Actor Chikkanna

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಆರೆಸ್ಟ್ ಆಗಿರುವ ನಟ ದರ್ಶನ್ (Actor Darshan) ಜೊತೆ ಅದೇ ದಿನ ಪಾರ್ಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ (comedian Chikkana) ಅವರನ್ನು ಪೊಲೀಸ್‌ ತನಿಖೆಯ (police investigation) ಉರುಳು ಸುತ್ತಿಕೊಂಡಿದ್ದು, ನಿನ್ನೆ ಮೂರು ಗಂಟೆಗಳ ಕಾಲ ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸಿದೆ.

ವಿಚಾರಣೆ ಸಂದರ್ಭದಲ್ಲಿ, ಅದೇ ದಿನ ತಾನು ದರ್ಶನ್ ಜೊತೆ ಪಾರ್ಟಿ ಮಾಡಿದ್ದು ನಿಜ ಎಂದು ಚಿಕ್ಕಣ್ಣ ಒಪ್ಪಿಕೊಂಡಿದ್ದಾರೆ. “ಇಬ್ಬರೂ ಪಾರ್ಟಿ ಮುಗಿಸಿ ಒಟ್ಟಿಗೆ ಪಬ್‌ನಿಂದ ಹೋದೆವು ಎಂದು ಚಿಕ್ಕಣ್ಣ ಹೇಳಿದ್ದಾರೆ. 8ನೇ ತಾರೀಕು ಆರ್‌ಆರ್ ನಗರದ ಸ್ಟೋನಿ ಬ್ರೋಕ್ ಪಬ್‌ಗೆ ನಾನು ಬಂದಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಪಬ್‌ಗೆ ಬಂದಿದ್ದೆ. ದರ್ಶನ್ ಮತ್ತು ನಾನು ಒಂದೇ ಟೇಬಲ್ ನಲ್ಲಿ ಪಾರ್ಟಿ ಮಾಡಿದೆವು. ಸುಮಾರು 4:30ರ ಹೊತ್ತಿಗೆ ಅವರು ಹೊರಟರು. ಅವರ ಜೊತೆಗೆ ನಾನೂ ಅಲ್ಲಿಂದ ಹೊರಟೆ. ನಾನು ನಮ್ಮ‌ ಮನೆಗೆ ಹೋದೆ, ದರ್ಶನ್ ಎಲ್ಲಿಗೆ ಹೋದ್ರೋ ನನಗೆ ಗೊತ್ತಿಲ್ಲ” ಎಂದು ಚಿಕ್ಕಣ್ಣ ಹೇಳಿದ್ದಾರೆ.

ʼನಾವು ಸೇರಿದ್ದು ಸಿನಿಮಾ ವಿಚಾರ ಮಾತಾನಾಡೋಕೆ. ಅದನ್ನಷ್ಟೇ ಮಾತಾಡಿ ಅಲ್ಲಿಂದ ಹೊರಟೆʼ ಎಂದು ಚಿಕ್ಕಣ್ಣ ತಿಳಿಸಿದ್ದಾರೆ. ವಕೀಲರ ಜೊತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ ಅವರ ಬಳಿ ಪೊಲೀಸರು ನೂರಾರು ಪ್ರಶ್ನೆಗಳನ್ನು ಹಾಕಿ ವಿಷಯ ಸಂಗ್ರಹಿಸಿದರು. 1.30ರಿಂದ 4.30ರವರೆಗೆ ಏನೆಲ್ಲಾ ಆಯ್ತು? ಮತ್ತೋರ್ವ ನಟ ಹಾಗೂ ನಿರ್ಮಾಪಕ ಇದ್ರಾ? ಯಾವ ಸಿನಿಮಾ ವಿಚಾರಕ್ಕೆ ಮಾತು ಕತೆ ನಡೀತಿತ್ತು? ಬರೀ ಸಿನಿಮಾ‌ ವಿಚಾರವಾ ಅಥವಾ ಬೇರೆ ಏನಾದ್ರೂ ಮಾತು ಕತೆ ನಡೆದಿತ್ತಾ? ಅವತ್ತು ದರ್ಶನ್ ವರ್ತನೆ ಹೇಗಿತ್ತು? ಪಾರ್ಟಿ ವೇಳೆ ದರ್ಶನ್‌ಗೆ ಕರೆಗಳು ಬರ್ತಿದ್ವಾ?ರೇಣುಕಾಸ್ವಾಮಿ ಬಗ್ಗೆ ಅವತ್ತು ಚರ್ಚೆ ಏನಾದ್ರು ಆಗಿತ್ತಾ? ಹೀಗೆ ಹಲವು ವಿಚಾರಗಳ ಬಗ್ಗೆ ಚಿಕ್ಕಣ್ಣನನ್ನು ಪ್ರಶ್ನೆ ಮಾಡಲಾಗಿದೆ.

ಪೊಲೀಸ್‌ ವಿಚಾರಣೆ ಬಳಿಕ ಹೊರಗೆ ಬಂದ ಚಿಕ್ಕಣ್ಣ, “ಇವತ್ತು ಪೊಲೀಸರು ವಿಚಾರಣೆಗೆ ಕರೆದಿದ್ರು, ಹೋಗಿದ್ದೆ. ಅವತ್ತು ಊಟಕ್ಕೆ ಹೋಗಿದ್ದೆ ಅದನ್ನು ಹೇಳಿದೆ. ತನಿಖೆಯಲ್ಲಿರುವ ಕಾರಣ ಬೇರೆ ಏನೂ ಹೇಳುವುದಕ್ಕೆ ಆಗದು. ಅವರು ಕೇಳಿದ್ದಕ್ಕೆ ಉತ್ತರ ಕೊಟ್ಟಿದೀನಿ” ಎಂದು ತಿಳಿಸಿದರು.

ಆ ಭಯಾನಕ ಶೆಡ್!‌

ರೇಣುಕಾಸ್ವಾಮಿ ಕೊಲೆಯಾದ ಪಟ್ಟಣಗೆರೆಯ ಆ ಶೆಡ್ ಬಗ್ಗೆ ಇದೀಗ ಇನ್ನಿತರ ಕೆಲವು ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಇಲ್ಲಿ ಅದೆಷ್ಟೋ ಕನ್ನಡ ಚಿತ್ರ ನಿರ್ಮಾಪಕರು ಕೂಡ ಗೂಸಾ ತಿಂದಿದ್ದಾರೆ ಎಂಬುದು ಬಯಲಾಗಿದೆ. ತನಗೆ ಆಗದವರು, ತನ್ನ ವಿರೋಧಿಗಳು ಹಾಗೂ ಪೇಮೆಂಟ್‌ ಮಾಡದ ನಿರ್ಮಾಪಕರನ್ನು ಅಟ್ಯಾಕ್ ಮಾಡಲು ದರ್ಶನ್‌ ಬಳಸುತ್ತಿದ್ದ ಜಾಗವೇ ಈ ಶೆಡ್ ಎನ್ನಲಾಗಿದೆ.

ನಟ ದರ್ಶನ್ ಎಷ್ಟೋ ಮಂದಿಗೆ ಇಲ್ಲೇ ಹಲ್ಲೆ ಮಾಡಿ, 2ರಿಂದ 3 ದಿನಗಳ ಕಾಲ ಇಲ್ಲೇ ಇರಿಸಿಕೊಳ್ಳುತ್ತಿದ್ದ. ಕಳಿಸಿಕೊಡುವಾಗ ಬ್ಯಾಂಡೇಜ್ ಹಾಕಿಸಿ ಕೈಗೆ ಹಣ ಕೊಟ್ಟು ಕಳುಹಿಸುತ್ತಿದ್ದ ಎಂದು ಕೆಲವರು ಇದೀಗ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ದರ್ಶನ್‌ ಕಾರು ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದುದನ್ನು ಕೆಲವು ಸ್ಥಳೀಯರು ಗಮನಿಸಿದ್ದಾರೆ. ದರ್ಶನ್‌ಗೆ ಇನ್ನೆಷ್ಟು ಕರಾಳ ಮುಖಗಳಿವೆ ಎಂದು ಪೊಲೀಸರೇ ಇದೀಗ ಬೆಚ್ಚಿ ಬೀಳುವಂತಾಗಿದೆ.

ಇದನ್ನೂ ಓದಿ: Actor Darshan: ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

Exit mobile version