ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ (Renuka Swamy Murder) ಪ್ರಕರಣದಲ್ಲಿ ಇಂದು ಮತ್ತೆ ನ್ಯಾಯಾಲಯದ ಮುಂದೆ ನಟ ದರ್ಶನ್ (Actor Darshan) ಸೇರಿ ಎಲ್ಲ ಬಂಧಿತ 17 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ನ್ಯಾಯಾಲಯ (Court) ಆರೋಪಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ (Police custody) ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ (Judicial custody) ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂದು ತಿಳಿದುಬರಲಿದೆ.
ನಟ ದರ್ಶನ್ ಸೇರಿ ಎಲ್ಲ 17 ಮಂದಿ ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಇಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ದರ್ಶನ್‌ನನ್ನು ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.
ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಜೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲುಗಳು, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಒಂಬತ್ತು ದಿನಗಳ ಕಾಲ ದರ್ಶನ್ ಅಲಿಯಾಸ್ ಡಿ ಬಾಸ್ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾನೆ.
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ಹತ್ಯೆ ಸಂಬಂಧ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿತ್ತು. ಇಂದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರೆ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾನೆ. ಜೈಲಿಗೆ ಕಳಿಸಿದರೆ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ಹೋದಂತಾಗುತ್ತದೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ನಟ ದರ್ಶನ್ ಜೈಲು ಸೇರಿದ್ದ.
ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ವಿಜಯಲಕ್ಷ್ಮಿ ನಿರ್ಬಂಧ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ಕಪೋಲಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.
ರೇಣುಕಾಸ್ವಾಮಿ ಸಾವಿಗೆ ಸಂತಾಪ
ರೇಣುಕಾಸ್ವಾಮಿ ಸಾವಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರೇಣುಕಾಸ್ವಾಮಿ ಸಾವಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ.
ಕಳೆದ ಕೆಲವು ದಿನಗಳಿಂದ ದರ್ಶನ್, ನಾನು, ನನ್ನ ಮಗ ಮತ್ತು ದರ್ಶನ್ ಅವರ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳು ದುಃಖದಲ್ಲಿದ್ದೇವೆ. ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ಪ್ರಕರಣದಲ್ಲಿ ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಕೆಲವು ಸುಳ್ಳು ಮಾಹಿತಿ ಮತ್ತು ಅಸತ್ಯಗಳನ್ನು ಜನರು ವಿಶ್ರಾಂತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿಯನ್ನಷ್ಟೇ ಪ್ರಕಟಿಸಲು ನಾನು ಪ್ರತಿಯೊಬ್ಬರನ್ನೂ ಕೋರುತ್ತೇನೆ. ತಾಯಿ ಚಾಮುಂಡೇಶ್ವರಿ ಮತ್ತು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯವು ಜಯ ಸಾಧಿಸಲಿ. ಸತ್ಯಮೇವ ಜಯತೇ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Actor Darshan: ಕಸ್ಟಡಿಯಲ್ಲಿರೋ ದರ್ಶನ್‌ಗೆ ಹೆಚ್ಚಾಯ್ತು ಬಿಪಿ; ಪವಿತ್ರಾಗೌಡ ಮಾತ್ರ ಕೂಲ್ ಕೂಲ್..!