Site icon Vistara News

Agni-Prime: ಹೊಸ ತಲೆಮಾರಿನ ಬ್ಯಾಲಿಸ್ಟಿಕ್‌ ಕ್ಷಿಪಣಿ ಅಗ್ನಿ- ಪ್ರೈಮ್‌ ಯಶಸ್ವಿ ಪರೀಕ್ಷೆ

agni- prime launch

ನವದೆಹಲಿ: ಭಾರತವು ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic Missile) ಅಗ್ನಿ-ಪ್ರೈಮ್ (Agni-Prime) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಬುಧವಾರ ಸಂಜೆ ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಇದರ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಪರೀಕ್ಷೆಯು ಎಲ್ಲಾ ಪ್ರಯೋಗದ ಉದ್ದೇಶಗಳನ್ನು ಪೂರೈಸಿದ್ದು, ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ದೃಢೀಕರಿಸಿದೆ. ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ಶ್ರೇಣಿಯ ಸೆನ್ಸರ್‌ಗಳಿಂದ ಸೆರೆಹಿಡಿಯಲಾದ ಡೇಟಾಗಳು ಇದನ್ನು ದೃಢೀಕರಿಸಿವೆ.

“ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೊತೆಗೆ ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್‌ನ ಯಶಸ್ವಿ ಹಾರಾಟ- ಪರೀಕ್ಷೆಯನ್ನು ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಏಪ್ರಿಲ್ 3ರಂದು ಸುಮಾರು 7 ಗಂಟೆಗೆ ನಡೆಸಿತು,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಉಡಾವಣೆಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಮುಖ್ಯಸ್ಥರು, DRDO ಮತ್ತು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು. ಈ ಕ್ಷಿಪಣಿಯ ಸೇರ್ಪಡೆಯು ಭಾರತೀಯ ಸಶಸ್ತ್ರ ಪಡೆಗಳಿಗೆ ಅತ್ಯುತ್ತಮ ಬಲವರ್ಧಕವಾಗಲಿದೆ ಎಂದು ಹೇಳಲಾಗಿದೆ.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಚೌಹಾಣ್ ಮತ್ತು ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ. ಕಾಮತ್ ಯಶಸ್ವಿ ಹಾರಾಟ ಪರೀಕ್ಷೆಗಾಗಿ ಎಸ್‌ಎಫ್‌ಸಿ ಮತ್ತು ಡಿಆರ್‌ಡಿಒ ಪ್ರಯತ್ನಗಳನ್ನು ಶ್ಲಾಘಿಸಿದರು.

ಇತ್ತೀಚೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ್ದ ಮೇಡ್ ಇನ್ ಇಂಡಿಯಾ ಅಗ್ನಿ- 5 ಕ್ಷಿಪಣಿಯಾಗಿರುವ ಮಿಷನ್​ ದಿವ್ಯಾಸ್ತ್ರದ (Mission Divyastra) ಮೊದಲ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಮಾಡಲಾಗಿತ್ತು. ಬಹು ಸ್ವತಂತ್ರ ಗುರಿಯ ಮರು-ಪ್ರವೇಶ ವಾಹನ (MIRV) ತಂತ್ರಜ್ಞಾನದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ -5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯಾದ ಮಿಷನ್ ದಿವ್ಯಾಸ್ತ್ರವನ್ನು ಭಾರತದ ಮಿಲಿಟರಿ ಶಕ್ತಿಯಲ್ಲಿ ಹೊಸ ಮೈಲುಗಲ್ಲು ಎಂದು ಗುರುತಿಸಲಾಗಿದೆ. ಇದರಲ್ಲಿ ಒಂದೇ ಕ್ಷಿಪಣಿಯು ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿ ತಲೆಗಳನ್ನು ನಿಯೋಜಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ ಈ ಯೋಜನೆಯ ನಿರ್ದೇಶಕರು ಮಹಿಳೆಯಾಗಿದ್ದು, ಭಾರತದಲ್ಲಿ ಮಹಿಳಾ ಶಕ್ತಿಯ ಕೊಡುಗೆಯನ್ನು ಈ ಮೂಲಕ ಪ್ರತಿಬಿಂಬಿಸಲಾಗಿದೆ.

ಇದನ್ನೂ ಓದಿ: Mission Divyastra : ಏನಿದು ಮಿಷನ್​ ದಿವ್ಯಾಸ್ತ್ರ, ಸೇನೆ ಸೇರಲಿರುವ ಹೊಸ ಅಸ್ತ್ರ? ಇಲ್ಲಿದೆ ಪೂರ್ಣ ಮಾಹಿತಿ

Exit mobile version