ಅಕ್ಷಯ ತೃತೀಯ (Akshaya Tritiya 2024) ಅಂದರೆ ಚಿನ್ನ- ಬೆಳ್ಳಿ (gold, silver) ಖರೀದಿಸಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ಮಾತ್ರವಲ್ಲ. ಸಂಪತ್ತು ಎಂದು ಕರೆಸಿಕೊಳ್ಳುವ ಯಾವುದನ್ನೇ ಆದರೂ ಇಂದು ನೀವು ಖರೀದಿಸಬಹುದು ಅಥವಾ ಹೊಂದಬಹುದು. ಅದರಿಂದ ಆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಈ ಹಿಂದಿನ ಕಾಲದಲ್ಲಿ ಕೃಷಿಪ್ರಧಾನ ಸಮಾಜದಲ್ಲಿ ಅಕ್ಕಿ ರಾಗಿ ಗೋಧಿಯಂಥ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದರು.
ಹಿಂದೂಗಳಿಗೆ ಸಂಪತ್ತಿನ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು (Akshaya Tritiya 2024) ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು ಎಂಬ ಮಾತಿದೆ. ಉತ್ತರ ಭಾರತದಲ್ಲಿ ಅಖಾ ತೀಜ್ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಕಾರ್ಯ ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಖರೀದಿಸಿದ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.
ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯವನ್ನು ಭಾರತ ಮತ್ತು ನೇಪಾಳದ ಅನೇಕ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಜೈನರು ಹೊಸ ಉದ್ಯಮಗಳು, ಮದುವೆಗಳು, ದಾನ, ಮತ್ತು ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಅಂದು ಚಿನ್ನ, ಬೆಳ್ಳಿ, ವಾಹನ ಖರೀದಿಸಿ ತಂದರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ.
ಸಂಸ್ಕೃತದಲ್ಲಿ ಅಕ್ಷಯ ಪದವು “ಅಭ್ಯುದಯ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥದಲ್ಲಿ “ಎಂದಿಗೂ ಕಡಿಮೆಯಾಗುವುದಿಲ್ಲ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ನೆಲೆಯಲ್ಲಿರುತ್ತಾರೆ ಎಂದು ನಂಬಲಾಗಿದೆ.
ಅಕ್ಷಯ ತೃತೀಯ ಆಚರಣೆಯ ಇತಿಹಾಸದ ಪ್ರಕಾರ ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ಅಕ್ಷಯ ತೃತೀಯವನ್ನು ಪರಶುರಾಮನ ಜನ್ಮ ದಿನವಾಗಿ ಆಚರಿಸುತ್ತಾರೆ. ಅಕ್ಷಯ ತೃತೀಯದ ಆಚರಣೆಗಳು ಅಕ್ಷಯ ತೃತೀಯದಂದು ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಮತ್ತು ಹಳದಿ ವೇಷಭೂಷಣದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ದಿನ ವಿಶೇಷವಾಗಿ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಚಾಲೀಸಾದ ಪಠಣಗಳೊಂದಿಗೆ ಭಗವಾನ್ ವಿಷ್ಣುವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.
ಚಿನ್ನ, ಬೆಳ್ಳಿ ಏಕೆ ಖರೀದಿಸಬೇಕು?
ದಂತಕಥೆಯ ಪ್ರಕಾರ, ಅಕ್ಷಯ ತೃತೀಯದಲ್ಲಿ, ಸಂಪತ್ತಿನ ದೇವತೆಯಾದ ಕುಬೇರನು ಭಗವಾನ್ ಶಿವ ಮತ್ತು ಬ್ರಹ್ಮನಿಂದ ಆಶೀರ್ವಾದವನ್ನು ಪಡೆದನು, ಅಲಕಾಪುರಿ ಎಂದು ಕರೆಯಲ್ಪಡುವ ಲೋಕವನ್ನು ಸ್ವಾಧೀನಪಡಿಸಿಕೊಂಡ. ಪರಿಣಾಮವಾಗಿ, ಈ ದಿನ ಕುಬೇರನ ಹೆಸರಿನಲ್ಲಿ ಚಿನ್ನದ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.
ಇದಲ್ಲದೇ ಅಕ್ಕಿ ಕೊಳ್ಳುವವರು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವವರು, ಯಾವುದೇ ರೀತಿಯ ಹೊಸ ವಸ್ತುಗಳು ಅಥವಾ ಪಾತ್ರೆಗಳನ್ನು ಖರೀದಿಸುವವರು- ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.
ಇದನ್ನೂ ಓದಿ: Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ