Site icon Vistara News

MB Patil: ಸಿಎಂ ಆಯ್ತು, ಈಗ ಸಚಿವ ಎಂಬಿ ಪಾಟೀಲ್‌ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು

Minister MB Patil statement in janandolana programme by congress party at ramanagara

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪ್ರಾಸಿಕ್ಯೂಶನ್‌ (Prosecution) ಅನುಮತಿ ಕಂಟಕದ ಬಳಿಕ ಇದೀಗ ಸಚಿವ ಎಂ.ಬಿ ಪಾಟೀಲ್‌ (MB Patil) ಅವರಿಗೆ ಸಂಕಷ್ಟ ತಗುಲಿಕೊಂಡಿದೆ. ಎಂಬಿ ಪಾಟೀಲ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ (Governor Thawar Chand Gehlot) ದೂರು ಸಲ್ಲಿಸಲಾಗಿದೆ.

ಕೆಐಎಡಿಬಿ ನಿವೇಶನ ಹಂಚಿಕೆಯಲ್ಲಿ (KIADB site allotment) ಅಕ್ರಮ ಎಸಗಿದ ಆರೋಪದಲ್ಲಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ವಿರುದ್ಧ ಪ್ರಾಸಿಕ್ಯೂ‌ಶನ್‌ಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ‌ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ಬಿಡದಿ, ವಸಂತನರಸಾಪುರ, ಕೋಲಾರ ನರಸಾಪುರ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ‌ ಹಂಚಿಕೆಯಲ್ಲಿ ಅಕ್ರಮ‌ ಎಸಗಲಾಗಿದೆ. ಕಾನೂನು ಬಾಹಿರವಾಗಿ ನಿಯಮಗಳನ್ನು ಗಾಳಿಗೆ ತೂರಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ದಿನೇಶ್‌ ಕಲ್ಲಹಳ್ಳಿ ಇಂದು ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದ್ದಾರೆ.

ಇತ್ತೀಚೆಗೆ ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಎಂಬವರು ಮನವಿ ಮಾಡಿದ್ದರು. ಅವರಿಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಇದೀಗ ಈ ಕೇಸು ಹೈಕೋರ್ಟ್‌ನಲ್ಲಿದೆ.

ಸಿದ್ದರಾಮಯ್ಯ ತಡೆಯಾಜ್ಞೆ ಕೋರಿದ ಅರ್ಜಿ ವಿಚಾರಣೆ 29ಕ್ಕೆ

ಮುಡಾ ಹಗರಣದಲ್ಲಿ (Muda Scam) ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆದಿದೆ. ಸುದೀರ್ಘ ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಆ.29ರ ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ದೂರುದಾರರು ಹಾಗೂ ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಪಿಸಿ ಆಕ್ಟ್ 17ಎ ಅಡಿ ಅನುಮತಿ ಪ್ರಶ್ನಿಸಲಾಗಿದ್ದು, ರಿಟ್ ಅರ್ಜಿಯೊಂದಿಗೆ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯಪಾಲರು ವಿವೇಚನಾರಹಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಇನ್ನು ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಪ್ರಭುಲಿಂಗ ನಾವದಗಿ ವಾದಿಸಿದ್ದಾರೆ. ಎಲ್ಲಾ ವಾದವನ್ನು ಕೋರ್ಟ್‌ ಆಲಿಸಿದ್ದು,
ಹೈಕೋರ್ಟ್ ಮುಂದಿನ ಆದೇಶ ನೀಡುವವರೆಗೂ ಅಂದರೆ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡಬೇಕು ಎಂದು ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದರು.

ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಾದ ಮಂಡಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಸಿಎಂ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, ಪ್ರಕರಣದಲ್ಲಿ ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಚಾರಗಳಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಬಾಕಿ ಇದೆ. ಗವರ್ನರ್ ಆದೇಶ ನೀಡುವ ಮುನ್ನ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಆದರೆ, ಗವರ್ನರ್ ಯಾವ ಆಧಾರ ಇಲ್ಲದೆಯೂ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | CM Siddaramaiah: ನಾನು ಡಲ್‌ ಆಗಿಲ್ಲ, ನನ್ನ ಹೋರಾಟದ ಜೋಶ್‌ ಹೆಚ್ಚಾಗಿದೆ: ಸಿಎಂ ಸಿದ್ದರಾಮಯ್ಯ

Exit mobile version